ಬೆಂಗಳೂರಿನಲ್ಲಿ ನವೆಂಬರ್ 25ರಂದು ಮಾಂಸ ಮಾರಾಟ ನಿಷೇಧ, ಇ - ಖಾತಾ ಸಮಸ್ಯೆಗೆ ಫೋನ್ - ಇನ್
ಬೆಂಗಳೂರಿನಲ್ಲಿ ಇದೇ ಮಂಗಳವಾರ ನವೆಂಬರ್ 25ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಂಪೂರ್ಣ ಮಾಂಸ ಮಾರಾಟ ನಿಷೇಧ ಮಾಡಿ ಆದೇಶ ಮಾಡಿದೆ.
ಸಾಧು ವಾಸವಾನಿ ಜಯಂತಿ ಪ್ರಯುಕ್ತ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧ ಮಾಡಿರುವುದಾಗಿ ಹೇಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ದಿನಾಂಕ: 25-11-2025 ರಂದು (ಮಂಗಳವಾರ) "ಸಾಧು ವಾಸವಾನಿ ಜಯಂತಿ" ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ತಿಳಿಸಿದ್ದಾರೆ.

ಫೋನ್-ಇನ್ ಕಾರ್ಯಕ್ರಮ
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 24-11-2025 (ಸೋಮವಾರ)ರಂದು ಸಂಜೆ 6ರಿಂದ 7ಗಂಟೆಯವರೆಗೆ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ಆಯುಕ್ತರಿಗೆ ನೇರವಾಗಿ ಅಹಲವಾಲನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ ಲ್ಯಾಂಡ್ಲೈನ್: 080-22975803. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರೀಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಪ್ರತಿ ಸೋಮವಾರ ಸಂಜೆ 6ರಿಂದ 7 ವರೆಗೆ ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಂದ ಈ ಕೆಳಕಂಡ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತಂತೆ ದೂರವಾಣಿ ಮೂಲಕ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಅಹವಾಲು ಸಲ್ಲಿಸಬೇಕಾದ ವಿಷಯಗಳು:
* ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ಥಿ ಕಾರ್ಯಗಳು
* ಬೀದಿ ದೀಪಗಳ ನಿರ್ವಹಣೆ
* ಕಸ ವಿಲೇವಾರಿ
* ಒಣಗಿದ / ಅಪಾಯಕಾರಿ ಮರ/ಕೊಂಬೆಗಳ ಕತ್ತರಿಸುವಿಕೆ
* ಉದ್ಯಾನವನಗಳ ನಿರ್ವಹಣೆ
* ಇ-ಖಾತಾ ಸಂಬಂಧಿತ ವಿಷಯಗಳು
* ಅನಧಿಕೃತ ಬ್ಯಾನರ್/ಪೋಸ್ಟರ್ ಗಳ ತೆರವು
* ಪಾದಚಾರಿ ಮಾರ್ಗದ ನಿರ್ವಹಣೆ ಮತ್ತು ಒತ್ತುವರಿ
* ಚರಂಡಿ ಶುದ್ಧೀಕರಣ
* ನಗರಪಾಲಿಕೆಯಿಂದ ಇನ್ನಿತರೆ ಮೂಲಭೂತ ಸೌಕರ್ಯ ಕಲ್ಪಿಸುವ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಇರಲಿದೆ.
ಸೋಮವಾರ ಸಂಜೆ 6ರಿಂದ 7ಗಂಟೆಯವರೆಗೆ ದೂರವಾಣಿ ಮೂಲಕ ಕರೆ ಮಾಡಿ ನೇರವಾಗಿ ಆಯುಕ್ತರಾದ ರಾಜೇಂದ್ರ ಚೋಳನ್ ಅವರೊಂದಿಗೆ ಮಾತನಾಡಿ ನಾಗರೀಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಆಯುಕ್ತರು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆ ಲ್ಯಾಂಡ್ಲೈನ್: 080-22975803












Click it and Unblock the Notifications