Namma Metro Yellow Line: ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇಷ್ಟೊಂದು ವಿಳಂಬವೇಕೆ? ಯಾವಾಗ ಶುರು?
Namma Metro Yellow Line: ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಯಾವಾಗ ಆರಂಭವಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಈ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದರೆ ಆ ಪ್ರಮುಖ ಮಾಹಿತಿ ಏನು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ಬಹುತೇಕ ಮಂದಿ ಟ್ರಾಫಿಕ್ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ನಮ್ಮ ಮೆಟ್ರೋ ಸಾರಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಯೆಲ್ಲೋ ಲೈನ್ ಮಾರ್ಗ ಆರಂಭವಾದರೆ, ತುಂಬಾ ಉದ್ಯೋಗಿಗಗಳಿಗೆ ಉಪಯುಕ್ತ ಆಗಲಿದೆ.

ನಮ್ಮ ಮೆಟ್ರೊ ಯೆಲ್ಲೋ ಮಾರ್ಗಕ್ಕೆ ಜನವರಿಯಲ್ಲಿಇನ್ನೊಂದು ರೈಲು ಸೇರ್ಪಡೆಯಾಗಲಿದ್ದು, ಈ ಮೂಲಕ ಒಟ್ಟು ಮೂರು ರೈಲುಗಳೊಂದಿಗೆ ಜನವರಿ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭಿಸು ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇನ್ನುಳಿದ ರೈಲುಗಳು ಯಾವಾಗ ಬರಲಿದ ಎಂದು ಇಲ್ಲಿ ತಿಳಿಯಿರಿ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ಐಟಿ ಹಬ್‌ಗಳಿಗೆ ಸಂಪರ್ಕ ತುಂಬಾ ಸುಲಭವಾಗಲಿದೆ. ಅಲ್ಲದೆ, ಎಲೆಕ್ಟ್ರಾನಿಕ್ ಸಿಟಿಯ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ತುಂಬಾ ಸಹಕಾರಿಯಾಗಲಿದೆ.
ಈ ಮಾರ್ಗದ ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದಿದ್ದು, ಬೋಗಿಗಳ ಕೊರತೆಯಿಂದ ವಾಣಿಜ್ಯ ಸಂಚಾರ ಆರಂಭ ಆಗಿಲ್ಲ. ಈ ಮಾರ್ಗಕ್ಕೆ ಬೇಕಾದ ರೈಲುಗಳನ್ನು ಪೂರೈಸಬೇಕಿದ್ದ ಟಿಟಾಗರ್ ವ್ಯಾಗನ್ಸ್ ಸಂಸ್ಥೆಯ ವಿಳಂಬದಿಂದ ರೈಲುಗಳು ಇನ್ನೂ ನಮ್ಮ ಮೆಟ್ರೊಗೆ ಬಂದಿಲ್ಲ. ಈ ಸಂಸ್ಥೆಯು ಮುಂದಿನ ತಿಂಗಳು 6 ಬೋಗಿಗಳ ಒಂದು ಸೆಟ್, ಜನವರಿಯಲ್ಲಿ ಮತ್ತೊಂದು ಸೆಟ್ ಅನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಒಂದು 6 ಬೋಗಿ ಇರುವ ರೈಲಿನ ಮೂಲಕ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ. ಟಿಟಾಗರ್ ಸಂಸ್ಥೆಯಿಂದ ಎರಡು ರೈಲುಗಳು ನಮ್ಮ ಮೆಟ್ರೊ ಸೇರಿದ ಬಳಿಕ, ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಈ ಮಾರ್ಗದಲ್ಲಿ ಸುರಕ್ಷತೆಯ ಪರಿಶೀಲನೆ ನಡೆಸಲಿದೆ. ಡಿಸೆಂಬರ್ ಅಂತ್ಯದಲ್ಲಿ ಅಥವಾ 2025ರ ಜನವರಿಯಲ್ಲಿ ಈ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮೊದಲು ಮೂರು ರೈಲುಗಳನ್ನು ಮಾತ್ರ ಓಡಿಸಲು ನಿರ್ಧರಿಸಲಾಗಿದೆ. ಪ್ರತಿ 30 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚಾರ ಮಾಡಲಿದೆ. 2025ರ ಆಗಸ್ಟ್ ವೇಳೆಗೆ ತಲಾ 6 ಬೋಗಿಯ 15 ರೈಲುಗಳು ಬರಲಿವೆ. ಪೂರ್ಣ ಪ್ರಮಾಣದಲ್ಲಿ ರೈಲು ಬೋಗಿಗಳು ಪೂರೈಕೆಯಾದ ನಂತರ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications