Namma Metro: ನಾಗಸಂದ್ರ-ಮಾದಾವರ ಮೆಟ್ರೋ ಮಾರ್ಗ; ಮಹತ್ವದ ಅಪ್‌ಡೇಟ್
ನಮ್ಮ ಮೆಟ್ರೋ, ಸದ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈಗ ನಡೆಯುತ್ತಿರುವ ಮೆಟ್ರೋ ವಿವಿಧ ಕಾಮಗಾರಿಗಳು ಬೇಗನೆ ಮುಕ್ತಾಯವಾದರೆ, ನಗರದ ಟ್ರಾಫಿಕ್ ಮೇಲಿನ ಒತ್ತಡ ಮತ್ತಷ್ಟು ಕಡಿಮೆಯಾಗಲಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಕಾಮಗಾರಿ ಸುದೀರ್ಘ ವಿಳಂಬದ ಬಳಿಕ ಉದ್ಘಾಟನೆಗೆ ಸಜ್ಜಾಗುತ್ತಿದೆ. ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದ್ದು 2024ರ ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಯಾಗುವುದು ಬಹುತೇಕ ಖಚಿತವಾಗಿದೆ.

ನಾಗಸಂದ್ರ೦ಮಾದವಾರ ನಡುವಿನ ಮೂರು ಕಿ.ಮೀ. ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು. ಭೂಸ್ವಾಧೀನ ಸಮಸ್ಯೆಗಳು, ವಿಶೇಷವಾಗಿ ನೈಸ್ ರಸ್ತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬ ಮತ್ತು ಕೋವಿಡ್ ಸಾಂಕ್ರಾಮಿಕ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳಾಗಿವೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಿಗದಿಪಡಿಸಿದ ಹಲವಾರು ಗಡುವು ಮೀರಿದ ಬಳಿಕ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ.
ಅಂತಿಮ ಹಂತದಲ್ಲಿ ಕಾಮಗಾರಿ
ನಾಗಸಂದ್ರ ಮತ್ತು ಮಾದಾವರ ನಡುವಿನ ಮೆಟ್ರೋ ಮಾರ್ಗದ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. "ಟ್ರ್ಯಾಕ್ ಹಾಕುವಿಕೆ ಕೆಲಸ ಬಾಕಿಯಿದ್ದು, ಈ ಕೆಲಸ ಮುಕ್ತಾಯವಾಗಲು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗವು ಸೆಪ್ಟೆಂಬರ್ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ" ಎಂದು ಹೇಳಲಾಗಿದೆ.
ಮೂರು ನಿಲ್ದಾಣಗಳು
ನಾಗಸಂದ್ರದಿಂದ ಮಾದಾವರದ ನಡುವಿನ ಎತ್ತರದ ಮಾರ್ಗದಲ್ಲಿ ಮೂರು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ. ಹಸಿರು ಮಾರ್ಗ ವಿಸ್ತರಣೆಯಿಂದ ನಗರದ ಪ್ರಮುಖ ಪ್ರದರ್ಶನ ಕೇಂದ್ರವಾದ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಗೆ ಸಂಪರ್ಕವನ್ನು ಹೊಂದಿದೆ.
ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರದ ನಾಗರಿಕರು ಮೆಟ್ರೋದಲ್ಲಿ ಪ್ರಯಾಣಿಸಲು ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಬರಬೇಕಾಗಿತ್ತು, ಈಗ ಈ ಮಾರ್ಗ ಸಂಪೂರ್ಣವಾದ ಬಳಿಕ ಐದು ಕಿಲೋಮೀಟರ್‌ಗಳಷ್ಟು ಪ್ರಯಾಣಿಸುವುದು ತಪ್ಪಲಿದೆ.
ಮಾದಾವರದವರೆಗೆ ವಿಸ್ತರಿಸಿದ ವಿಸ್ತರಣೆಯ ಕಾರ್ಯಾಚರಣೆಯ ನಂತರ, ಹಸಿರು ಮಾರ್ಗದ ಒಟ್ಟು ಉದ್ದವು 33 ಕಿಮೀ ತಲುಪುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವರ್ಷಾಂತ್ಯದ ವೇಳೆಗೆ ಹಂತ-2 ಯೋಜನೆಯಡಿ ಎರಡು ಹೊಸ ಮಾರ್ಗಗಳನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರ (3.14 ಕಿಮೀ) ಮತ್ತು ಆರ್‌ವಿ ರಸ್ತೆ ಮೆಟ್ರೊ ನಿಲ್ದಾಣದಿಂದ ಬೊಮ್ಮಸಂದ್ರ (19.15 ಕಿಮೀ) ನಮ್ಮ ಮೆಟ್ರೋ ಹಳದಿ ಮಾರ್ಗಗಳಲ್ಲಿ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿ ಹೊಂದಿದೆ.












Click it and Unblock the Notifications