Bengaluru Airport: ಪ್ರವೇಶ ಶುಲ್ಕಕ್ಕೆ ಭಾರೀ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಏರ್‌ಪೋರ್ಟ್ ಆಡಳಿತ
ಬೆಂಗಳೂರು, ಮೇ. 21: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶ್ ಪಡೆಯಲು ವಾಹನಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ನ ಕ್ರಮದ ಕುರಿತು ಭಾರೀ ಆಕ್ರೋಶ ಉಂಟಾಗಿತ್ತು. ಮಾಧ್ಯಮಗಳ ವರದಿಗಳ ಬೆನ್ನಲ್ಲೇ ಈ ನಿರ್ಧಾರವನ್ನು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ಚಾಲಕರ ಪ್ರತಿಭಟನೆ ಮತ್ತು ಪ್ರಯಾಣಿಕರಿಂದ ಬಂದ ವಿರೋಧ ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದ ಆಕ್ರೋಶದ ನಂತರ ಸೋಮವಾರ ಪ್ರವೇಶ ಶುಲ್ಕವನ್ನು ವಿಧಿಸುವ ಕ್ರಮವನ್ನು ಬಿಐಎಎಲ್ ಅಮಾನತುಗೊಳಿಸಿದೆ. ಈ ಕ್ರಮದಿಂದಾಗಿ ಖಾಸಗಿ ವಾಹನಗಳು ಮತ್ತು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ಶುಲ್ಕ ಪಾವತಿಸಬೇಕಿತ್ತು.

ಏರ್‌ಪೋರ್ಟ್ ಪ್ರವೇಶಕ್ಕೆ ಶುಲ್ಕ ವಿಧಿಸಿದ್ದ ಬಿಐಎಎಲ್
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ಗಳ ಪ್ರವೇಶಕ್ಕೆ 150 ರೂಪಾಯಿ. ಪ್ರಯಾಣಿಕರನ್ನ ಪಿಕಪ್ ಮಾಡಲು ಬರುವ ವಾಹನಗಳ ಪ್ರವೇಶ ದರ 7 ನಿಮಿಷಕ್ಕೆ 150 ರೂ. ನಿಗದಿ ಮಾಡಲಾಗಿದೆ. ಇನ್ನು 07 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂಪಾಯಿ ಪಾವತಿಸಬೇಕು. ಇದಕ್ಕೆ ಆಕ್ರೋಶಗೊಂಡ ಕ್ಯಾನ್ ಚಾಲಕರು ಮತ್ತು ಪ್ರಯಾಣಿಕರು ಇದೊಂದು "ಹಗಲು ದರೋಡೆ" ಎಂದು ಟೀಕಿಸಿದ್ದರು.
ಫಾಸ್ಟ್‌ಟ್ಯಾಗ್ ಮೂಲಕ ಪ್ರವೇಶ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲು ಯೋಜನೆ ರೂಪಿಸಲಾಗಿತ್ತು. ಈ ಬಗ್ಗೆ ಪ್ರವೇಶ ದ್ವಾರಗಳಲ್ಲಿ ಬೋರ್ಡ್‌ಗಳನ್ನು ಹಾಕಲಾಗಿತ್ತು. ಸದ್ಯಕ್ಕೆ ಚಾಲಕರ ಪ್ರತಿಭಟನೆ ಮತ್ತು ಪ್ರಯಾಣಿಕರಿಂದ ಬಂದ ವಿರೋಧದಿಂದಾಗಿ ಈ ಯೋಜನೆಯನ್ನು ರದ್ದುಗೊಳಿಸಲಾಗಿದೆ.

ಏಕಾಏಕಿ ಶುಲ್ಕ ಸಂಗ್ರಹಣೆ
ಬಿಐಎಎಲ್ ಯಾವುದೇ ಪೂರ್ವ ಸೂಚನೆಯಿಲ್ಲದೆ ಪ್ರವೇಶ ಶುಲ್ಕವನ್ನು ಸಂಗ್ರಹಿಸಲು ಪ್ರಾರಂಭಿಸಿತ್ತು. ಇದರಿಂದ ಕೆಲವು ಚಾಲಕರು ಸೋಮವಾರ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಎಂಟ್ರಿ ಪಿಕಪ್ ಲೇನ್‌ನಲ್ಲಿ ತೀವ್ರ ವಾಗ್ವಾದಕ್ಕಿಳಿದಿದ್ದರು. ಇದಾದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು.
ಬಿಐಎಎ ಕ್ರಮವನ್ನು ಪ್ರತಿಭಟಿಸಿ, ಕ್ಯಾಬ್ ಚಾಲಕರು ಮೇ 22 ರಂದು ಬೇಗೂರು ರಸ್ತೆಯಿಂದ ಎಂಟ್ರಿ ಪಿಕಪ್ ಪಾಯಿಂಟ್‌ವರೆಗೆ ಪ್ರತಿಭಟನೆ ನಡೆಸಲು ಯೋಜಿಸಿ, ಶುಲ್ಕ ಪಡೆಯುವುದನ್ನು ರದ್ದು ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಾದ ನಂತರ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಶುಲ್ಕ ಪಡೆಯುವ ನಿರ್ಧಾರ ಹಿಂತೆಗೆದುಕೊಂಡಿದ್ದಾರೆ.
ಬಿಐಎಎಲ್ ಪ್ರಕಾರ ಶುಲ್ಕವೆಷ್ಟು?
ಕ್ಯಾಬ್‌ಗಳನ್ನು ಒಳಗೊಂಡಿರುವ ವಾಣಿಜ್ಯ ವಾಹನಗಳು (ಹಳದಿ ಬೋರ್ಡ್) 7 ನಿಮಿಷಗಳವರೆಗೆ ಪ್ರವೇಶ ಶುಲ್ಕವಾಗಿ 150 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. 7 ನಿಮಿಷಗಳ ನಂತರ 300 ರುಪಾಯಿ ಶುಲ್ಕ ಪಾವತಿಸಬೇಕು. ಖಾಸಗಿ ವಾಹನಗಳು (ವೈಟ್‌ಬೋರ್ಡ್) 7 ನಿಮಿಷದಿಂದ 14 ನಿಮಿಷಗಳವರೆಗೆ 150 ರೂ ಶುಲ್ಕವನ್ನು ಪಾವತಿಸಬೇಕಾಗಿತ್ತು.
ಬಸ್‌ಗಳಿಗೆ 600 ರೂಪಾಯಿ ಪ್ರವೇಶ ಶುಲ್ಕವಿತ್ತು, ಆದರೆ ಟೆಂಪೋ ಪ್ರಯಾಣಿಕರು 300 ರೂಪಾಯಿ ಶುಲ್ಕ ವಿಧಿಸಲಾಗಿತ್ತು. ಬಸ್‌ಗಳು ಮತ್ತು ಟೆಂಪೋ ಪ್ರಯಾಣಿಕರಿಗೆ ಲೇನ್ 3 (ಟರ್ಮಿನಲ್ 1) ಮೂಲಕ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಇನ್ನು, ಏರ್‌ಪೋರ್ಟ್ ಟರ್ಮಿನಲ್ ನಲ್ಲಿ 15 ನಿಮಿಷಕ್ಕಿಂತ ಹೆಚ್ಚಾಗಿ ವಾಹನಗಳು ನಿಂತುಕೊಂಡರೆ, ಆ ವಾಹನಗಳನ್ನು ಟೋಯಿಂಗ್ ಮೂಲಕ ಠಾಣೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಲಾಗಿತ್ತು. ಈಗ ಆದೇಶ ರದ್ದಾಗಿದೆ.












Click it and Unblock the Notifications