Real estate: ರಿಯಲ್ ಎಸ್ಟೇಟ್ ಮಾಡುವವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ, ಏನದು?
ಸಿಎಂ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾರೆ. ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆಯ ಕಾರಣದಿಂದ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈಜೋಡಿಸಿದರೆ ಸಹಿಸುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ಅಕ್ರಮ ರಿಯಲ್ ಎಸ್ಟೇಟ್‌ಗೆ ಬೆಂಬಲ ಕೊಡಬಾರದು. ಒಂದು ವೇಳೆ ಬೆಂಬಲ ಕೊಡುವ ಕೆಲಸ ಮಾಡಿದರೆ, ಸರ್ಕಾರ ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆಯ ಕಾರಣದಿಂದಲೂ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸೋದಿಲ್ಲ, ಯಾವ ಕಾರಣಕ್ಕೂ ಅಕ್ರಮ ರಿಯಲ್ ಎಸ್ಟೇಟ್‌ಗೆ ಬೆಂಬಲ ಕೊಡಬೇಡಿ ಎಂದು ವಾರ್ನಿಂಗ್ ನೀಡಿದ್ದಾರೆ.
ಅಪರಾಧಿಗಳಿಗೆ ಭಯದ ವಾತಾವರಣ, ಜನಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದು ಕಿವಿಮಾತು ಹೇಳಿದ್ದಾರೆ. ರಾಜ್ಯದ ಜನಸಂಖ್ಯೆ ಸುಮಾರು 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ, ಮಾನ, ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ಧವಿದೆ ಎಂದು ಅವರು ಅಭಯ ನೀಡಿದ್ದಾರೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ, ಪೊಲೀಸರು ಚಾಪೆ ಕೆಳಗೆ ತೂರಿದರೆ, ಅಪರಾಧಿಗಳು ರಂಗೋಲಿ ಕೆಳಗೆ ತೂರಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಪೇದೆಗಳು, ಎಸ್‌ಐಗಳು ಹಾಗೂ ಇನ್ಸ್‌ಪೆಕ್ಟರ್‌ಗಳೇ ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇಂದು ಬೆಂಗಳೂರು ನಗರದ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್‌ನ ನೂತನ ಪೊಲೀಸ್ ಠಾಣೆಗಳನ್ನ ಉದ್ಘಾಟಿಸಿದರು ಹಾಗೂ ಪುಲಕೇಶಿನಗರದ ನೂತನ ಪೊಲೀಸ್ ವಸತಿ ಗೃಹಗಳ ಸಮುಚ್ಛಯವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.












Click it and Unblock the Notifications