ಬೆಂಗಳೂರಲ್ಲಿ 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಸೆ.24: ಬೆಂಗಳೂರಲ್ಲಿ ಇನ್ನು 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾನುವಾರ ಸಂಜೆಯಿಂದ ಬೆಂಗಳೂರಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ, ಹೊಸಕೆರೆಹಳ್ಳಿ ದೇವಸ್ಥಾನದ ಒಳಗೆ ನೀರು ನುಗ್ಗಿದ್ದು ಭಕ್ತರು ದೇವಸ್ಥಾನ ಪ್ರವೇಶಕ್ಕೆ ಹರಸಾಹಸ ಪಡಬೇಕಾಗಿದೆ. ಇನ್ನು ಜಯನಗರದಲ್ಲಿ ಮರಗಳು ಧರೆಗುರುಳಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಕೆಂಗೇರಿ, ಮೈಸೂರು ರಸ್ತೆ, ವಿಧಾನಸೌಧ, ಮಲ್ಲೇಶ್ವರ, ವಿಜಯನಗರ, ಹೊಸಕೆರೆಹಳ್ಳಿ, ಜಯನಗರ, ಬನಶಂಕರಿ, ಉತ್ತರಹಳ್ಳಿ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಇನ್ನು ಮುಂದಿನ 3 ಗಂಟೆಯೊಳಗೆ ಬಿರುಗಾಳಿ ಕೂಡಿದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು ದಕ್ಷಿಣ, ಕೆಂಗೇರಿ ಭಾಗದಲ್ಲಿ ಭಾನುವಾರ 150 ಮಿ.ಮೀ ಮಳೆಯಾಗಿದೆ, ಇಂದೂ ಕೂಡ ಹಲವೆಡೆ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಪ್ರಕೃತಿ ಮತ್ತು ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ್ದರಿಂದ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳುವ ಸೂಚನೆ ಇದೆ ಎಂದು ಈ ಮೊದಲೇ ಹವಾಮಾನ ಇಲಾಖೆ ಹೇಳಿತ್ತು. ಬೆಂಗಳೂರು ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications