ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ಗರಿಮೆ: ಭಾರತದ ಟಾಪ್ 10 ಕಂಪನಿಗಳಲ್ಲಿ 7 ನಮ್ಮದೇ; ‘ತಥ್ಯಕೋಶ’ಕ್ಕೂ ಚಾಲನೆ
ಭಾರತದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಗಳಿಸಿರುವ ಬೆಂಗಳೂರು ಇದೀಗ ಮತ್ತೊಂದು ಗರಿಮೆಗೆ ಪಾತ್ರವಾಗಿದೆ. ಭಾರತದ ಸ್ಪೇಸ್ ಟೆಕ್ ಕ್ಷೇತ್ರದ ಬೆಳವಣಿಗೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ದೃಢವಾಗಿ ನಿಂತಿದೆ. ದೇಶದಲ್ಲಿ ಅತಿ ಹೆಚ್ಚು ಹೂಡಿಕೆ ಪಡೆದ 10 ಪ್ರಮುಖ ಸ್ಪೇಸ್ ಟೆಕ್ ಕಂಪನಿಗಳ ಪೈಕಿ 7 ಕಂಪನಿಗಳಿಗೆ ಬೆಂಗಳೂರು ನೆಲೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
106 ಹೂಡಿಕೆ ಸುತ್ತುಗಳ ಮೂಲಕ $495 ಮಿಲಿಯನ್ ಬಂಡವಾಳ ಸಂಗ್ರಹಿಸಿರುವ ಬೆಂಗಳೂರು, ಭಾರತದ ಒಟ್ಟು ಸ್ಪೇಸ್‌ಟೆಕ್ ಹೂಡಿಕೆಯ 57%ರಷ್ಟು ಪಾಲನ್ನು ಹೊಂದಿದೆ. ಕರ್ನಾಟಕದ ಐಟಿಬಿಟಿ ಇಲಾಖೆಯ ಸ್ಪೇಸ್ ಟೆಕ್ ನೀತಿಯು 2033ರ ವೇಳೆಗೆ ಭಾರತವು $44 ಬಿಲಿಯನ್ ಬಾಹ್ಯಾಕಾಶ ಆರ್ಥಿಕತೆಯಲ್ಲಿ 50% ಪಾಲನ್ನು ಪಡೆಯುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಈ ನೀತಿಯಡಿ ಅನುದಾನ, ಆರ್ಥಿಕ ನೆರವು ಮತ್ತು Centre of Excellence ಮೂಲಕ ಕರ್ನಾಟಕ ಮೂಲದ 500 ಸ್ಟಾರ್ಟ್‌ಅಪ್‌ಗಳು ಮತ್ತು MSMEಗಳಿಗೆ ಬೆಂಬಲ ನೀಡಲಾಗುವುದು. ಇದರ ಜೊತೆಗೆ ವಿನ್ಯಾಸ, ಉತ್ಪಾದನೆ, ಏಕೀಕರಣ, ಪರೀಕ್ಷೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದಿದ್ದಾರೆ.

ಅಲ್ಲದೆ ಮುಂದುವರಿದು ಬಾಹ್ಯಾಕಾಶ ಪೂರೈಕೆ ಸರಪಳಿಯಲ್ಲಿ ಈಗಾಗಲೇ ಭಾಗಿಯಾಗಿರುವ 2,500ಕ್ಕೂ ಹೆಚ್ಚು MSMEಗಳ ಬಲಿಷ್ಠ ಕೈಗಾರಿಕಾ ನೆಲೆಯ ಮೇಲೆ ಈ ಪ್ರಯತ್ನವನ್ನು ಮುಂದುವರಿಸಲಾಗುತ್ತಿದೆ. ಭಾರತದ ಮೊದಲ ಮೀಸಲು ಸ್ಪೇಸ್ ಟೆಕ್ ನೀತಿಯನ್ನು ಜಾರಿಗೆ ತರುವ ಮೂಲಕ ಕರ್ನಾಟಕ ಈ ಕ್ಷೇತ್ರದಲ್ಲಿ ಆರಂಭದಲ್ಲೇ ಮುನ್ನಡೆ ಸಾಧಿಸಿದೆ. ಇದೀಗ ನಮ್ಮ ವೈಜ್ಞಾನಿಕ ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಂಡು ಸ್ಪೇಸ್ ಟೆಕ್ ಕ್ಷೇತ್ರದ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಜಾಗತಿಕ ನಾಯಕತ್ವವನ್ನು ಸಾಧಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದೂ ಹೇಳಿದ್ದಾರೆ.
Bengaluru: ಕರ್ನಾಟಕದ ಡಿಜಿಟಲ್ ಆಡಳಿತಕ್ಕೆ ಹೊಸ ಹೆಜ್ಜೆ - 'ತಥ್ಯಕೋಶ', ಏನಿದು
ಇನ್ನು ಕರ್ನಾಟಕದ ಡಿಜಿಟಲ್ ಆಡಳಿತಕ್ಕೆ ಹೊಸ ಹೆಜ್ಜೆಯಾಗಿ 'ತಥ್ಯಕೋಶ' ಪರಿಚಯಿಸಲಾಗಿದೆ ಎಂದು ಕರ್ನಾಟಕ ಸರ್ಕಾರವು ಹೇಳಿದೆ. ಸಾರ್ವಜನಿಕ ದತ್ತಾಂಶವನ್ನು ಹುಡುಕಲು ಸಂಶೋಧಕರು, ನವೋದ್ಯಮಿಗಳು ಹಾಗೂ ನೀತಿ ನಿರೂಪಕರು ವಿವಿಧ ಅಂತರ್ಜಾಲ ತಾಣಗಳು ಮತ್ತು ದತ್ತಾಂಶ ಮೂಲಗಳನ್ನು ಪ್ರತ್ಯೇಕವಾಗಿ ಹುಡುಕಬೇಕಾಗುವ ಪರಿಸ್ಥಿತಿಗೆ ಪರಿಹಾರವಾಗಿ ಕರ್ನಾಟಕ ಸರ್ಕಾರದ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಅಭಿವೃದ್ಧಿಪಡಿಸಿರುವ 'ತಥ್ಯಕೋಶ' (Tathyakosh.in) ಎಂಬ ಹೊಸ ಡಿಜಿಟಲ್ ಸಾರ್ವಜನಿಕ ಸಂಪನ್ಮೂಲಕ್ಕೆ ಇಂದು ವಿಕಾಸಸೌಧದಲ್ಲಿ ಚಾಲನೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಮ್ಮ ಬಳಿ ಅಪಾರ ಪ್ರಮಾಣದ ದತ್ತಾಂಶ ಲಭ್ಯವಿದೆ. ಆದರೆ ಸರಿಯಾದ ದತ್ತಾಂಶವನ್ನು ಪತ್ತೆಹಚ್ಚುವುದು, ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದು ಸಂಶೋಧಕರು ಹಾಗೂ ನವೋದ್ಯಮಿಗಳ ಮುಂದಿರುವ ಪ್ರಮುಖ ಸವಾಲಾಗಿದೆ.
ಈ ಸವಾಲನ್ನು ನಿವಾರಿಸುವ ಉದ್ದೇಶದಿಂದ 'ತಥ್ಯಕೋಶ'ವನ್ನು ರೂಪಿಸಲಾಗಿದೆ. 'ತಥ್ಯಕೋಶ'ದ ಮೂಲಕ ದೇಶದ 458 ವಿವಿಧ ದತ್ತಾಂಶ ಮೂಲಗಳಿಂದ 15 ಲಕ್ಷಕ್ಕೂ ಅಧಿಕ ಡೇಟಾಸೆಟ್‌ಗಳನ್ನು ಒಂದೇ ವೇದಿಕೆಯಲ್ಲಿ ಹುಡುಕಲು ಸಾಧ್ಯವಾಗಲಿದೆ. ಸರ್ಕಾರದ ವಿವಿಧ ಅಂತರ್ಜಾಲ ತಾಣಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರ ಸಾರ್ವಜನಿಕ ದತ್ತಾಂಶ ವೇದಿಕೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಹುಡುಕಿ, ಪರಿಶೀಲಿಸಿ ಮತ್ತು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಈ ವೇದಿಕೆ ನೆರವಾಗಲಿದೆ.
ಇದರಿಂದ ಸಂಶೋಧಕರು, ನವೋದ್ಯಮಿಗಳು, ದತ್ತಾಂಶ ವಿಜ್ಞಾನಿಗಳು ಹಾಗೂ ನೀತಿ ನಿರೂಪಕರಿಗೆ ಸಮಯ ಮತ್ತು ಸಂಪನ್ಮೂಲಗಳ ಉಳಿತಾಯವಾಗಲಿದೆ. ಅದರ ಜೊತೆಗೆ, ದೇಶಿ ದತ್ತಾಂಶವನ್ನು ಆಧರಿಸಿ ಹೊಸ ಸಂಶೋಧನೆ, ಆವಿಷ್ಕಾರ, ತಂತ್ರಜ್ಞಾನ ಪರಿಹಾರಗಳು ಮತ್ತು ಸಾರ್ವಜನಿಕ ನೀತಿಗಳನ್ನು ರೂಪಿಸಲು 'ತಥ್ಯಕೋಶ' ಪ್ರಮುಖ ಮೂಲಸೌಕರ್ಯವಾಗಲಿದೆ. 'ತಥ್ಯಕೋಶ'ವನ್ನು ಮುಕ್ತ ಹಾಗೂ ವಾಣಿಜ್ಯೇತರ ಡಿಜಿಟಲ್ ಸಾರ್ವಜನಿಕ ಸಂಪನ್ಮೂಲವಾಗಿ ನಿರ್ಮಿಸಲಾಗಿದೆ.
ನಮ್ಮ ವಿವಿಧ ಸಂಸ್ಥೆಗಳಲ್ಲಿ ಈಗಾಗಲೇ ಲಭ್ಯವಿರುವ ಅಪಾರ ಪ್ರಮಾಣದ ದತ್ತಾಂಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ, ದತ್ತಾಂಶ ಆಧಾರಿತ ನವೋದ್ಯಮ ಮತ್ತು ಸಂಶೋಧನೆಗೆ ಕರ್ನಾಟಕ ಮತ್ತಷ್ಟು ಬಲ ನೀಡಲಿದೆ. ತಂತ್ರಜ್ಞಾನವನ್ನು ಕೇವಲ ತಂತ್ರಜ್ಞಾನಕ್ಕಾಗಿ ಬಳಸುವುದಲ್ಲ, ಜನರ ಬದುಕನ್ನು ಸುಧಾರಿಸಲು, ಉತ್ತಮ ನೀತಿಗಳನ್ನು ರೂಪಿಸಲು ಮತ್ತು ನೂತನ ಪರಿಹಾರಗಳನ್ನು ಸೃಷ್ಟಿಸಲು ಬಳಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.


Click it and Unblock the Notifications
