Bengaluru Rent: ಬೆಂಗಳೂರಲ್ಲಿ 1 ಬಿಎಚ್‌ಕೆ ಮನೆಗಳಿಗೆ ಭಾರೀ ಡಿಮ್ಯಾಂಡ್, ಕಾರಣ ಇಲ್ಲಿದೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಹುಡುಕುವುದೇ ಒಂದು ದೊಡ್ಡ ಸವಾಲು. ಸಿಟಿ ಬದುಕಿನ ಜೊತೆಗೆ ದುಬಾರಿ ಬಾಡಿಗೆ ಕಟ್ಟಲು ಹೆಣಗಾಡಬೇಕಾದ ಸ್ಥಿತಿ ಇದೆ. ಮೊದಲೆಲ್ಲ ಒಂದು ಬೆಡ್‌ರೂಂ, ಹಾಲ್, ಕಿಚನ್ (1BHK) ಒಳಗೊಂಡ ಸಣ್ಣ ಮನೆ ಬಾಡಿಗೆ ಕೈಗೆಟುಕುವ ದರದಲ್ಲಿತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚೋಣ ಎನ್ನುತ್ತಾ ಎಲ್ಲರೂ ಈ ಒನ್ ಬಿಎಚ್‌ಕೆ ಮನೆಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದರು. ಆದರೆ, ಈಗ ಬೆಂಗಳೂರಿನಲ್ಲಿ 1 ಬಿಎಚ್‌ಕೆ ಮನೆಗಳ ಬಾಡಿಗೆ ಕೂಡ ಗಗನಕ್ಕೇರಿದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದರ ಹೆಚ್ಚುತ್ತಲೇ ಇದೆ. ನಗರದೆಲ್ಲೆಡೆ ಫ್ಲ್ಯಾಟ್‌ಗಳು, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದರೂ ವಿಲಾಸಿ ಜೀವನ ಬಯಸುವವರಷ್ಟೇ ಅತ್ತ ಮುಖ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಗುವ ಸಂಬಳಕ್ಕೆ ಅಬ್ಬಬ್ಬಾ ಅಂದ್ರೆ 1 ಬಿಎಚ್‌ಕೆ ಮನೆಗಳಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಬಹುದು ಎಂದು ಜನ ಚಿಂತನೆ ನಡೆಸುತ್ತಿದ್ದಾರೆ. ಹಾಗಾಗಿ ಈ ಸಣ್ಣ ಮನೆಗಳಿಗೂ ಈಗ ಡಿಮ್ಯಾಂಡ್ ಹೆಚ್ಚಾಗಿದೆ.

ಬೆಂಗಳೂರಿನ ಕೇಂದ್ರ ಭಾಗ ಹಾಗೂ ಐಟಿ ಕಾರಿಡಾರ್‌ಗಳಲ್ಲಿ ಈಗ 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಉದ್ಯೋಗಾವಕಾಶಗಳಿಗಾಗಿ ಈ ಒನ್ ಬಿಎಚ್‌ಕೆಗಳಲ್ಲೇ ವಾಸ್ತವ್ಯ ಹೂಡಲು ಇಷ್ಟಪಡುತ್ತಿದ್ದಾರೆ ಎಂದು ವರದಿಯಾಗಿದೆ. ದೊಡ್ಡ ಅಪಾರ್ಟ್‌ಮೆಂಟ್‌ಗಳಿದ್ದರೂ ಅದರ ಮೇಂಟೇನೆನ್ಸ್ ಕಾರಣಕ್ಕಾಗಿ ಖರ್ಚಿನ ಹೊರೆ ಹೆಚ್ಚುತ್ತದೆ ಎಂಬುದು ಬಾಡಿಗೆ ಪಾವತಿದಾರರ ಗಮನಕ್ಕೆ ಬಂದಿದೆ. ಹಾಗಾಗಿ ಚಿಕ್ಕ ಮನೆಯಲ್ಲೇ ಚೊಕ್ಕದಾದ ಜೀವನ ನಡೆಸೋಣ ಎಂದು ಜನ 1 ಬಿಎಚ್‌ಕೆಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
ಡೆವಲಪರ್‌ಗಳು ಕೂಡ ಕಳೆದ ಎರಡು ವರ್ಷಗಳಿಂದ ಮನೆಗಳನ್ನು ಚಿಕ್ಕದಾಗಿಯೇ ನಿರ್ಮಿಸಲು ಮುಂದಾಗಿದ್ದಾರೆ. ಬೇಡಿಕೆ ಹೆಚ್ಚಾದ ಕಾರಣ, ಬಂಡವಾಳ ಕಡಿಮೆ ಆದರೂ ಲಾಭ ಹೆಚ್ಚು ಎನ್ನುವ ಉದ್ದೇಶದೊಂದಿಗೆ ಒನ್ ಬಿಎಚ್‌ಕೆ ಮನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಒನ್ ಬಿಎಚ್‌ಕೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗು ಹೂಡಿಕೆಗೂ ಒನ್ ಬಿಎಚ್‌ಕೆ ನೆಚ್ಚಿನ ಆಯ್ಕೆಯಾಗಿವೆ.

ಬೆಂಗಳೂರಿನ ಹಲವು ಏರಿಯಾಗಳಲ್ಲಿ ಸದ್ಯ ಒನ್ ಬಿಎಚ್‌ಕೆ ಮನೆಗಳ ಬಾಡಿಗೆ ದರವು ತಿಂಗಳಿಗೆ ಕನಿಷ್ಠವೆಂದರೂ ಸರಾಸರಿ 10,000 ರೂಪಾಯಿಯಿಂದ 20,000 ರೂಪಾಯಿವರೆಗೆ ಇದೆ ಎನ್ನಲಾಗಿದೆ. ಆದರೆ, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ 400 ಚದರ ಅಡಿ ಪ್ರದೇಶದಲ್ಲಿರುವ ಮಲಗುವ ಕೋಣೆಯುಳ್ಳ ಅಪಾರ್ಟ್ಮೆಂಟ್ ಬಾಡಿಗೆ ತಿಂಗಳಿಗೆ 35,000 ರೂಪಾಯಿಗೆ ತಲುಪಿದೆ ಎಂದು ವ್ಯಕ್ತಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಾನು ಮುಂಬೈನಲ್ಲಿ ಮಾತ್ರವೇ ಬಾಡಿಗೆ ಹೆಚ್ಚಿದೆ ಎಂದು ಭಾವಿಸಿದ್ದೆ, ಆದರೆ ಬೆಂಗಳೂರಿನಲ್ಲೂ ಬಾಡಿಗೆ ಕಡಿಮೆಯೇನಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವರದಿಯೊಂದರ ಪ್ರಕಾರ ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸಿರುವ 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳ ಸರಾಸರಿ ವ್ಯಾಪ್ತಿ ಕೂಡ ಕಡಿಮೆಯಾಗುತ್ತಿದೆ. 2023ರಲ್ಲಿ 380 ಚದರ ಅಡಿಯಲ್ಲಿರುತ್ತಿದ್ದ 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು, 2024ರಲ್ಲಿ 350 ಚದರ ಅಡಿಗಳಿಗೆ ಕುಸಿತ ಕಂಡಿವೆ ಎನ್ನಲಾಗಿದೆ.
ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ ಬೆಂಗಳೂರಿನಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್ ಬಾಡಿಗೆ ತಿಂಗಳಿಗೆ 25,000-30,000 ರೂಪಾಯಿವರೆಗೆ ಇದೆ. ಆದರೆ, ಡೆವಲಪರ್‌ಗಳು ಇದನ್ನೇ ಎರಡು ಭಾಗ ಮಾಡಿ 1 ಬಿಎಚ್‌ಕೆಗಳಾಗಿ ನಿರ್ಮಿಸಿದರೆ, ಪ್ರತಿ ಮನೆಗೆ ತಲಾ 20,000 ರೂಪಾಯಿ ಬಾಡಿಗೆ ಪಡೆಯುತ್ತಾರೆ. ಆಗ ಹಣ ಕೂಡ ದುಪ್ಪಟ್ಟಾಗುತ್ತದೆ. ಹಾಗಾಗಿ 1 ಬಿಎಚ್‌ಕೆ ಮನೆಗಳ ಮೇಲೆ ಬಿಲ್ಡರ್‌ಗಳು ಹೆಚ್ಚಿನ ಬಂಡವಾಳ ಹಾಕುತ್ತಿದ್ದಾರಂತೆ.












Click it and Unblock the Notifications