ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಜೋರು ಮಳೆ
ಬೆಂಗಳೂರು, ನವೆಂಬರ್ 13: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಧ್ಯಾಹ್ನದ ವೇಳೆಗೆ ಚುರುಕು ಬಿಸಿಲಿದ್ದು, ಸಂಜೆ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಮಧ್ಯಾಹ್ನದ ನಂತರ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮಳೆಯ ಜೊತೆಗೆ ಗಾಳಿ, ಗುಡುಗು, ಮಿಂಚು ಕಾಣಿಸಿಕೊಂಡಿತ್ತು, ಹಾಗೂ ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ಸಾರ್ವಜನಿಕರು ಮಳೆಯಲ್ಲಿ ನೆನೆಯಬೇಕಾಯಿತು.
ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಬೆಂಗಳೂರು ನಗರದ ಜನತೆಗೆ ಮಳೆ ತಂಪೆರೆದಿದೆ. ದೀಪಾವಳಿ ಹಬ್ಬದ ಖರೀದಿಯು ಬೆಂಗಳೂರು ನಗರದಲ್ಲಿ ಜೋರಾಗಿದ್ದು, ಮಳೆಯ ನಡುವೆಯೇ ಜನರು ಹಬ್ಬದ ಖರೀದಿ ಮಾಡಿದರು.

ಬೆಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಹಗಲು ಭಾರಿ ಉಷ್ಣಾಂಶ ಇರುತ್ತಿತ್ತು. ರಾತ್ರಿ ಹಾಗೂ ಬೆಳಗಿನ ವೇಳೆ ಚಳಿಯ ವಾತಾವರಣವಿರುತ್ತಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲೂ ಅದರ ಅಲ್ಲಲ್ಲಿ ಮಳೆಯಾಗಿದೆ.
ಇದೇ ವೇಳೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿಯಲ್ಲೂ ಗುಡುಗು ಸಹಿತ ಮಳೆಯಾಗಿದ್ದು, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ತುಂತುರು ಮಳೆಯಾಗಿದೆ. ಹಾವೇರಿ, ದಾವಣಗೆರೆಯಲ್ಲೂ ಸಾಧಾರಾಣ ಮಳೆ ಸುರಿದಿದೆ.
ರಾಜ್ಯದಲ್ಲಿ ನಾಳೆ ಶನಿವಾರವೂ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications