Bengaluru Rain: ಬೆಂಗಳೂರಲ್ಲಿ ಮುಂದಿನ ವಾರ ಈ ನಾಲ್ಕು ದಿನ ಭರ್ಜರಿ ಮಳೆ, ಯಾವಾಗ ನೋಡಿ!
Bengaluru rainfall: ಬೆಂಗಳೂರಲ್ಲಿ ಇನ್ನೊಂದು ವಾರಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚೆ ಕೊಟ್ಟಿದೆ. ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ ಶುರುವಾಗುವ ಮುನ್ಸೂಚನೆ ಸಿಕ್ಕಿದ್ದು, ಭಾರತೀಯ ಹವಾಮಾನ ಇಲಾಖೆಯು ಬೆಂಗಳೂರಿನಲ್ಲಿ ಇನ್ನೊಂದು ವಾರ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.
ಫೆಂಗಲ್ ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ. ಈಚೆಗೆ ಸುರಿದ ಮಳೆಯಿಂದ ಬೆಂಗಳೂರಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ಸಹ ವರದಿಯಾಗಿದೆ. ಈ ನಡುವೆ ಮತ್ತೊಂದು ಚಂಡಮಾರುತದ ಮುನ್ಸೂಚನೆ ಸಿಕ್ಕಿದೆ.

ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದ ಹಲವು ಸಮಸ್ಯೆಗಳು ಆಗುತ್ತಿವೆ. ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲೂ ಮಳೆಯಾಗುತ್ತಿದ್ದು, ಇದರಿಂದ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗಿದೆ. ಈಚೆಗೆ ಸುರಿದ ಮಳೆಯಿಂದ ಹಲವು ಅನಾಹುತ ಸೃಷ್ಟಿಯಾಗಿತ್ತು. ಅಕಾಲಿಕ ಮಳೆಗೆ ತಕ್ಕಂತೆ ಬಿಬಿಎಂಪಿಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬೆಂಗಳೂರಿನಲ್ಲಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಸಣ್ಣ ಮಳೆಯಾದರೂ ಭಾರೀ ಅನಾಹುತ ಸೃಷ್ಟಿಯಾಗುತ್ತಿದೆ.
ಕಳೆದ ಬಾರಿ ಸುರಿದ ಮಳೆಯಿಂದಲೇ ಬೆಂಗಳೂರಿನಲ್ಲಿ ಹಲವು ರಸ್ತೆಗುಂಡಿಗಳು ನಿರ್ಮಾಣವಾಗಿದ್ದು, ಅದನ್ನು ಮುಚ್ಚುವುದರಲ್ಲಿಯೇ ಬಿಬಿಎಂಪಿ ವಿಫಲವಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಈ ರೀತಿ ಇರುವಾಗಲೇ ಇನ್ನೊಂದು ಚಂಡಮಾರುತ ಸೃಷ್ಟಿ ಹಾಗೂ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ಕೊಟ್ಟಿದೆ. ಇದೇ 11ಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಹಾಗೂ ಅದು ತೀವ್ರಗೊಳ್ಳುವ ಎಲ್ಲಾ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತವು ಶ್ರೀಲಂಕಾ ಹಾಗೂ ತಮಿಳುನಾಡಿನ ಕರಾವಳಿ ಭಾಗಕ್ಕೆ ಅಪ್ಪಳಿಸಿದರೆ ಕರ್ನಾಟಕ ಹಾಗೂ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 11ರಿಂದ ಡಿಸೆಂಬರ್ 14ರ ವರೆಗೆ ಮಳೆಯಾಗಲಿದೆ. ಇನ್ನುಳಿದ ದಿನವೂ ಚಳಿಯ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ.
ರಾಜ್ಯದ ವಿವಿಧೆಡೆ ಮಳೆ
ಇನ್ನು ರಾಜ್ಯದ ವಿವಿಧ ಭಾಗದಲ್ಲಿ ಈಗಾಗಲೇ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ)ಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಕಲಬುರಗಿ, ಧಾರವಾಡ, ಬೀದರ್, ಗದಗ ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿರುವುದು ವರದಿಯಾಗಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಒಣಹವೆ ಇತ್ತು.

ಬೆಂಗಳೂರಲ್ಲಿ ನಾಲ್ಕು ದಿನ ಮಳೆ: ಚಂಡಮಾರುತದ ಪ್ರಭಾವದಿಂದ ಬೆಂಗಳೂರಲ್ಲಿ ಮಳೆ ಮುಂದುವರಿಯಲಿದೆ. ಬೆಂಗಳೂರಲ್ಲಿ ಡಿಸೆಂಬರ್ 11ರಿಂದ ಡಿಸೆಂಬರ್ 14ರ ವರೆಗೆ ಮಳೆಯಾಗಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ.
ಇನ್ನುಳಿದಂತೆ ಮುಂದಿನ 48 ಗಂಟೆ ಅವಧಿಯಲ್ಲಿ ಹಗಲಿನಲ್ಲಿ ಸ್ಪಷ್ಟವಾದ ಆಕಾಶ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಇನ್ನು ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ.











Click it and Unblock the Notifications