ಬೆಂಗಳೂರಲ್ಲಿ ಎಚ್1ಎನ್1ನಿಂದ ನಾಲ್ವರ ಸಾವು: ಹೆಚ್ಚಿದ ಆತಂಕ
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಲ್ಲಿ ಎಚ್1ಎನ್1 ಮಹಾಮಾರಿಯಿಂದ ನಾಲ್ವರು ಮೃತಪಟ್ಟಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೃತಪಟ್ಟವರಲ್ಲಿ ಮೂವರು ಬೆಂಗಳೂರಿನ ರಾಜೀವ್ ಗಾಂದಿ ಎದೆಗೂಡಿನ ಆಸ್ಪತ್ರೆ ಮತ್ತೊಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿಮ್ಹಾನ್ಸ್ ಹಾಗೂ ಮಣಿಪಾಲ್ ಆಸ್ಪತ್ರೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಹತ್ತು ದಿನಗಳಲ್ಲಿ 155 ಮಂದಿಯಲ್ಲಿ ಎಚ್1ಎನ್1 ಕಾಣಿಸಿಕೊಂಡಿದೆ, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ತುಮಕೂರಿನ 24 ವರ್ಷದ ಮಹಿಳೆ, ರಾಮನಗರ 55 ವರ್ಷದ ಪುರುಷ, ಬಳ್ಳಾರಿಯ 39 ವರ್ಷದ ಪುರುಷ, ಬೆಂಗಳೂರು ಗ್ರಾಮಾಂತರದಲ್ಲಿ 37 ವರ್ಷದ ಮಹಿಳೆಗೆ ಎಚ್1ಎನ್1 ಇರುವುದು ದೃಢಪಟ್ಟಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಂಕು
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ 90, ಶಿವಮೊಗ್ಗದಲ್ಲಿ 43, ದಕ್ಷಿಣ ಕನ್ನಡ 25, ಚಿಕ್ಕಮಗಳೂರು 2, ಬೆಳಗಾವಿ ಮತ್ತು ಉಡುಪಿ ತಲಾ 19 ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ 15 ಮಂದಿಗೆ ಸೋಂಕು ತಗುಲಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬಳ್ಳಾರಿ, ತುಮಕೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 4750 ಮಂದಿಯ ಸ್ವ್ಯಾಬ್ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಎಚ್1ಎನ್1ಗೆ ಉಚಿತ ಚಿಕಿತ್ಸೆ
ವೈದ್ಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳು, ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಟಾಮಿಫ್ಲೂ ಮಾತ್ರೆ ಸೇರಿದಂತೆ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಎಚ್1ಎನ್1 ಚಿಕಿತ್ಸೆ ಹಾಗೂ ಔಷಧವನ್ನು ಉಚಿತವಾಗಿ ನೀಡಬೇಕು. ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯ ಆಸ್ಪತ್ರೆಗಳಿಗೆ ಮೊದಲ ಹಂತದಲ್ಲಿ ತಲಾ 12.5 ಲಕ್ಷ ರೂ. ತಾಲೂಕು ಆಸ್ಪತ್ರೆಗಳಿಗೆ 5 ಲಕ್ಷ ರೂ, ಸಮುದಾಯ ಕೇಂದ್ರಗಳಿಗೆ 1.5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಲ್ಲೇ ಅತಿ ಹೆಚ್ಚು ಪ್ರಕರಣ ದಾಖಲು
ಬೆಂಗಳೂರು ಮಹಾನಗರ ಪಾಳಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಈವರೆಗೆ 90 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲೂ ಕೇವಲ 10 ದಿನಗಳಲ್ಲಿ 29 ಪ್ರಕರಣಗಳು ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಡೆತ್ ಆಡಿಟ್ ಕಮಿಟಿ ವರದಿ ಬಂದಿಲ್ಲ
ಇಲಾಖೆಯ ಅಧಿಕೃತ ಪಟ್ಟಿಯಲ್ಲಿ ಎಚ್1 ಎನ್1 ಸೋಂಕಿತರು ಹಾಗೂ ಅದರಿಂದ ಸಂಭವಿಸುವ ಸಾವಿನ ಕುರಿತು ಮಾಹಿತಿ ಇಲ್ಲ. ಪರಿಶೀಲನೆ ನಡೆಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಜಿಲ್ಲಾ ಮಟ್ಟದಲ್ಲಿ ಡೆತ್ ಆಡಿಟ್ ಸಮಿತಿ ರಚಿಸಲಾಗಿದೆ. ಕಮಿಟಿ ಸದಸ್ಯರು ಸೋಮಕಿತ ಹಾಗೂ ಸಾವಿನ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಪ್ರಯೋಗಾಲಯದ ವರದಿಯಿಂದ ಖಚಿತ ಪಡಿಸಿಕೊಂಡು ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಮಾಹಿತಿ ನೀಡಬೇಕಾಗುತ್ತದೆ.

ಎಚ್1 ಎನ್1 ರೋಗದ ಲಕ್ಷಣಗಳೇನು?
ಮೂರನೇ ಹಂತದಲ್ಲಿ ತೀವ್ರ ಸ್ವರೂಪದ ಜ್ವರ ಕಫದಲ್ಲಿ ರಕ್ತ, ಉಬ್ಬಸ, ಒಮೋನಿಯಾದೊಂದಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ರೋಗಿ ಗಂಭೀರ ಸ್ಥಿತಿಗೆ ತಲುಪುತ್ತಾನೆ. ಇದಕ್ಕೆ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. 10ರಲ್ಲಿ ಒಂದಿಬ್ಬರು ಮಾತ್ರ ಬದುಕುವ ಸಾಧ್ಯತೆ ಇರುತ್ತದೆ.












Click it and Unblock the Notifications