Property Tax Update: ಬೆಂಗಳೂರು ಆಸ್ತಿದಾರರಿಗೆ "ಟ್ಯಾಕ್ಸ್ ವಿಷಯ"ದಲ್ಲಿ ಬಿಬಿಎಂಪಿ ಬಿಗ್ ಅಪ್ಡೇಟ್!
Property Tax Update: ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಪಾವತಿಯಲ್ಲಿ ಬಿಗ್‌ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಮಾರ್ಚ್ 31ರ ಅಂತ್ಯಕ್ಕೆ ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯವಾಗಲಿದೆ. ಏಪ್ರಿಲ್ 1ರಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರು ದುಪ್ಪಟ್ಟು ದಂಡ ಪಾವತಿ ಮಾಡಬೇಕು ಎನ್ನುವ ನಿಯಮವನ್ನು ಜಾರಿ ಮಾಡುವುದಾಗಿ ಬಿಬಿಎಂಪಿ ಹೇಳಿತ್ತು. ಇದೀಗ ಆಸ್ತಿ ತೆರಿಗೆ ಪಾವತಿಯ ವಿಚಾರದಲ್ಲಿ ದೊಡ್ಡ ಗುಡ್‌ನ್ಯೂಸ್ ಕೊಡಲಾಗಿದೆ.
ಬೆಂಗಳೂರಿನಲ್ಲಿರುವ ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದರೆ, ಒಂದು ದಿನ ಮಾತ್ರ ಆಗಿದ್ದರೆ ಅವರಿಗೆಲ್ಲಾ ಬಿಬಿಎಂಪಿಯಿಂದ ಶೇ.100 ರಷ್ಟು ದಂಡ ವಿಧಿಸುವುದಿಲ್ಲ. ನಾವು ದೀರ್ಘ ಅವಧಿಯಿಂದ ಬಾಕಿ ಉಳಿಸಿಕೊಂಡವರ ಮೇಲಷ್ಟೇ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ, ಆಸ್ತಿ ತೆರಿಗೆಯನ್ನು ಎರಡು ವರ್ಷದವರೆಗೆ ಪಾವತಿಸದೇ ಇರುವವರಿಗೆ ಹಲವು ಬಾರಿ ನೋಟಿಸ್‌ಗಳನ್ನು ನೀಡಲಾಗಿದೆ. ಅಲ್ಲದೇ ಮೆಸೇಜ್ (SMS)ಗಳು ಕಳುಹಿಸುವುದು ಮತ್ತು ಜಾಹೀರಾತುಗಳನ್ನು ಸಹ ನೀಡಲಾಗಿತ್ತು. ಆಸ್ತಿ ತೆರಿಗೆಯನ್ನು ಇನ್ನೂ ಪಾವತಿಸದೆ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಇರುವವರಿಗೆ ಮತ್ತು ಈ ರೀತಿ ದೀರ್ಘಕಾಲಿನ ಸುಸ್ತಿದಾರರಿಗೆ ತೆರಿಗೆ ಶೇ. 100 ರಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಬಿಬಿಎಂಪಿಯ ಈ ಸ್ಪಷ್ಟನೆಯಿಂದಾಗಿ ಬೆಂಗಳೂರಿನ ಆಸ್ತಿದಾರರಿಗೆ ನಿರಾಳತೆ ಮೂಡಿದೆ.
* ಆಸ್ತಿ ತೆರಿಗೆ ಪಾವತಿಸದ ಸುಮಾರು ಎರಡು ವರ್ಷದ ನಂತರ ಮಾತ್ರ ಶೇ. 100 ರಷ್ಟು ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ 2024-25 ಆಸ್ತಿ ತೆರಿಗೆಯನ್ನು ಪಾವತಿಸದಿದ್ದರೆ. ದಿನಾಂಕ: 01.04.2025 ರಿಂದ ಶೇ. 100 ರಷ್ಟು ದಂಡವು ಅನ್ವಯಿಸುವುದಿಲ್ಲ. ಆದರೆ ಎರಡು ವರ್ಷದ ನಂತರವೂ ತೆರಿಗೆ ಪಾವತಿಸದಿದ್ದರೆ ಅಂದರೆ 01.04.2026 ರಿಂದ ಅನ್ವಯವಾಗುವುದು ಹಾಗೂ 2025-26 ರ ಸಂಪೂರ್ಣ ಅವಧಿಯಲ್ಲಿ ಸುಸ್ತಿದಾರರಿಗೆ ಶೇ. 15 ರಷ್ಟು ಸರಳ ಬಡ್ಡಿಯನ್ನು ಮಾತ್ರ ವಿಧಿಸಲಾಗುವುದು. ಇದಕ್ಕೆ ಶೇ. 100 ರಷ್ಟು ದಂಡ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
* ಈ ಕಾರಣಕ್ಕೆ ತೆರಿಗೆ ಪಾವತಿಸದೆ ಒಂದು ದಿನ ಆದವರಿಗೆ ಬಿಬಿಎಂಪಿಯು ಶೇ. 100 ರಷ್ಟು ದಂಡ ವಿಧಿಸುತ್ತದೆ ಎಂಬುದು ವಾಸ್ತವಿಕವಾಗಿ ತಪ್ಪು. ಹೆಚ್ಚುವರಿ ಒಂದು ವರ್ಷದ ಕಾಲಾವಧಿ (Grace Period) ಯ ನಂತರವೂ ಆಸ್ತಿ ತೆರಿಗೆಯನ್ನು ಪಾವತಿಸದಿದ್ದರೆ ಮಾತ್ರ ಶೇ. 100 ರಷ್ಟು ದಂಡ ವಿಧಿಸಲಾಗುತ್ತದೆ. ಅಂತಹ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಪಾವತಿಸದ ಆಸ್ತಿದಾರರು ಎಂದು ಪರಿಗಣಿಸಲಾಗುತ್ತದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ವಾಸ್ತವವಾಗಿ ಪಾಲಿಕೆ ವರ್ಷವಿಡಿ (2024-25 ರಲ್ಲಿ ಮತ್ತು 2025-26 ರಲ್ಲಿ ನಿರಂತರವಾಗಿ) ನೋಟಿಸ್ ಕಳುಹಿಸುತ್ತೇವೆ. ಜೊತೆಗೆ ದೂರವಾಣಿ ಕರೆಗಳನ್ನು ಮಾಡುತ್ತೇವೆ ಹಾಗೂ ಸಂದೇಶ (SMS) ಗಳನ್ನು ಕಳುಹಿಸುತ್ತೇವೆ. ಕೆಲವು ದೀರ್ಘಕಾಲಿನ ತೆರಿಗೆ ಸುಸ್ತಿದಾರರು ಬಿಬಿಎಂಪಿಯ ಪ್ರತಿ ಸೂಚನೆಯನ್ನೂ ನಿರ್ಲಕ್ಷಿಸಿ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಹೇಳಲಾಗಿದೆ.
* ಸುಮಾರು 2.5 ಲಕ್ಷ ಆಸ್ತಿದಾರರು ಇದುವರೆಗೂ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸಿಲ್ಲ. ಉದಾಹರಣೆಗೆ ತೆರಿಗೆ ಪಟ್ಟಿಯಲ್ಲಿರುವ ಒಟ್ಟು 20 ಲಕ್ಷ ಆಸ್ತಿಗಳಲ್ಲಿ, ಒಂದು ವರ್ಷವು ಕೂಡ 17-18 ಲಕ್ಷ ಆಸ್ತಿಗಳ ತೆರಿಗೆಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಇದುವರೆಗೂ ಪಾವತಿಸದ ಸುಮಾರು 2 ಲಕ್ಷ ದೀರ್ಘಕಾಲದ ಆಸ್ತಿತೆರಿಗೆ ಸುಸ್ತಿದಾರರ ಪಟ್ಟಿ ಇದೆ. ಈ ಸುಸ್ತಿದಾರರಿಂದ ತೆರಿಗೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಲಾಗಿದೆ.
ಅವರಿಂದ ತೆರಿಗೆ ಪಡೆಯದೇ ಹಾಗೇ ಬಿಟ್ಟಲ್ಲಿ ನಾವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ತೀವ್ರ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇಳಿದೆ. ಕಾನೂನಿನ ಪ್ರಕಾರ ಅಂತಹ ದೀರ್ಘಕಾಲಿನ ತೆರಿಗೆ ಸುಸ್ತಿದಾರರಿಂದ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವುದು ಬಿಬಿಎಂಪಿಯ ನೈತಿಕ ಹಾಗೂ ನಿಗದಿತ ಕರ್ತವ್ಯವಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ಹೇಳಿದೆ.












Click it and Unblock the Notifications