ಡಿ.31 ರಾತ್ರಿ ಗಿಗ್ ನೌಕರರ ಪ್ರತಿಭಟನೆ: ಬೆಂಗಳೂರಲ್ಲಿ ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್ ಆರ್ಡರ್ ಮೇಲೆ ಪರಿಣಾಮ
ಬೆಂಗಳೂರು: 10 ನಿಮಿಷಗಳ ಡೆಲಿವರಿ ಪದ್ಧತಿಯನ್ನು ಕೈಬಿಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗಿಗ್ ನೌಕರರು ಡಿಸೆಂಬರ್ 31ರಂದು ದೇಶವ್ಯಾಪ್ತಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ, ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟಗಳಿಂದಲೂ ಇದೇ ಮಾದರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರಿನಲ್ಲಿ ಡಿಸೆಂಬರ್ 31ರ ರಾತ್ರಿ ಹಾಗೂ 2026 ಜನವರಿ 1ರಂದು ವಿವಿಧ ಸೇವೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಅಲ್ಲದೇ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಸಾಧ್ಯತೆಯೂ ಇದೆ.
ಸಾಮಾನ್ಯವಾಗಿ ಹೊಸ ವರ್ಷದ ಹಿಂದಿನ ರಾತ್ರಿ (ಡಿಸೆಂಬರ್ 31)ರಂದು ಮತ್ತು ಹೊಸ ವರ್ಷದ ದಿನ ಅತ್ಯಂತ ಹೆಚ್ಚು ಆರ್ಡರ್‌ಗಳು ಆಗುವ ದಿನವಾಗಿದೆ. ಇದೀಗ ಗಿಗ್ ಕಾರ್ಮಿಕರ ಪ್ರತಿಭಟನೆಯಿಂದಾಗಿ ಫೂಡ್ ಡೆಲಿವರಿ ಸೇರಿದಂತೆ ವಿವಿಧ ಬಿಸಿನೆಸ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳ ಗ್ರಾಹಕರ ಮೇಲೂ ಭಾರೀ ಪರಿಣಮ ಬೀರುವ ಸಾಧ್ಯತೆ ಇದೆ.

ಈ ಸೇವೆಗಳ ಮೇಲೆ ಪರಿಣಾಮ
ಗಿಗ್ ನೌಕರರ ದೇಶವ್ಯಾಪ್ತಿ ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 31ರ ರಾತ್ರಿ ಸ್ವಿಗ್ಗಿ, ಜೊಮಾಟೊ, ಜೆಪ್ಟೊ ಹಾಗೂ ಬ್ಲಿಂಕಿಟ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಹಾರ ಮತ್ತು ದಿನಸಿ ವಿತರಣೆ ಅವಲಂಬಿಸಿರುವ ಗ್ರಾಹರಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಗ್ರಾಹಕರು ತೀವ್ರ ವಿಳಂಬವಾಗಿ ಪದಾರ್ಥಗಳನ್ನು ಸ್ವೀಕರಿಸಬಹುದು ಇಲ್ಲವೇ ಸಂಪೂರ್ಣ ಸೇವಾ ಸ್ಥಗಿತಗೊಳಿಸುವಿಕೆ ಎದುರಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಡಿಸೆಂಬರ್ 31ರ ರಾತ್ರಿ ಬೆಂಗಳೂರಿನಲ್ಲಿ ಬಿರಿಯಾನಿ, ತಂಪು ಪಾನೀಯ ಹಾಗೂ ಕಾಂಡೋಮ್ ಸೇರಿದಂತೆ ಕೆಲವೊಂದು ನಿರ್ದಿಷ್ಟ ವಸ್ತುಗಳ ಮಾರಾಟದಿಂದಲೇ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ.
ಪಾರ್ಟಿಗಳು ನಡೆಯುವುದರಿಂದ ಕೇಕ್, ಬೇಕರಿ ಪದಾರ್ಥ ಹಾಗೂ ತಂಪು ಪಾನೀಯಗಳ ಬೇಡಿಕೆ ಹೆಚ್ಚಾಗಿ ಇರುತ್ತದೆ. ಇದರೊಂದಿಗೆ ಫೂಡ್ ಡೆಲಿವರಿ ಸಹ ಹೆಚ್ಚಾಗಿ ಇರುತ್ತದೆ. ಆದರೆ ಇದೀಗ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಂಘಗಳು ಮಾಸಿಕ ಕನಿಷ್ಠ 40,000 ರೂಪಾಯಿ ಗಳಿಕೆ, ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದ ಸುರಕ್ಷತಾ ಕ್ರಮಗಳು, ತುರ್ತು ರಜೆ ಮತ್ತು ಸಮಗ್ರ ಮಾತೃತ್ವ ರಕ್ಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಬೀದಿಗೆ ಇಳಿಯದಿರಲು (ಕೆಲಸಕ್ಕೆ ಹಾಜರಾಗದಿರಲು) ನಿರ್ಧರಿಸಿದ್ದಾರೆ.
ಕಳೆದ ವರ್ಷ ಭರ್ಜರಿ ಸೇಲ್ ಆಗಿತ್ತು
2025ರ ಹೊಸ ವರ್ಷದ ಮುನ್ನಾದಿನದಂದು ಸ್ವಿಗ್ಗಿ, ಜೊಮಾಟೊ, ಜೆಪ್ಟೊ ಮತ್ತು ಬ್ಲಿಂಕಿಟ್ ಎಲ್ಲವೂ ತಮ್ಮ ಅತ್ಯಧಿಕ ಒಂದೇ ದಿನದ ಆರ್ಡರ್‌ಗಳನ್ನು ದಾಖಲಿಸಿದ್ದವು. ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯ ದಿನಕ್ಕಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚಿನ ಬೇಡಿಕೆಯನ್ನು ಕಂಡಿವೆ ಎಂದು ವರದಿಯಾಗಿತ್ತು. ಈ ಬಾರಿಯೂ ಇದೇ ಮಾದರಿಯ ಸೇಲ್ ನಿರೀಕ್ಷೆ ಮಾಡಲಾಗಿತ್ತಾದರೂ ಗಿಗ್ ನೌಕರರು ಮುಷ್ಕರ ಘೋಷಿಸಿದ್ದಾರೆ. ಇದರಿಂದ ಈ ಭಾರೀ ಸೇಲ್ ಕುಸಿತ ಕಾಣುವ ಸಾಧ್ಯತೆ ಇದೆ. ಅಲ್ಲದೇ ಗ್ರಾಹಕರ ಮೇಲೂ ಇದು ಪರಿಣಾಮ ಬೀರಲಿದೆ. ಕಂಪನಿಗಳು ಈ ನಿಟ್ಟಿನಲ್ಲಿ ಏನು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ ಎನ್ನುವುದು ಇಂದು ರಾತ್ರಿ ತಿಳಿಯಲಿದೆ.
10 ನಿಮಿಷದ ಸೇವೆಗೆ ಭಾರೀ ವಿರೋಧ
ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಂಘಗಳು ಡಿಸೆಂಬರ್ 31, 2025 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಅಪ್ಲಿಕೇಶನ್ ಆಧಾರಿತ ಕಂಪನಿಗಳು ಪ್ರಮುಖ ಕಾರ್ಮಿಕ ಹಕ್ಕುಗಳಿಂದ ವ್ಯವಸ್ಥಿತವಾಗಿ ಹೊರಗಿಡುತ್ತಿವೆ ಎಂದು ಆರೋಪಿಸಲಾಗಿದೆ. ಆಹಾರ ವಿತರಣೆ ಮತ್ತು ಟ್ಯಾಕ್ಸಿ ಸೇವೆಗಳಲ್ಲಿ ವ್ಯಾಪಕವಾದ ಶೋಷಣೆ ನಡೆಸಿದೆ ಎಂದು ನೌಕರರು ದೂರಿದ್ದಾರೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಪತ್ರದಲ್ಲಿ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವೆಗಳ ಕಾರ್ಮಿಕರ ಒಕ್ಕೂಟ ಗಿಗ್ ಕಾರ್ಮಿಕರಿಗೆ ಭಾರತೀಯ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಕಾರ್ಮಿಕ ರಕ್ಷಣೆಗಳನ್ನು ನಿರಾಕರಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಮುಖ್ಯವಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 - 20 ನಿಮಿಷದ ಸೇವೆಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ. ವಿಪರೀತ ಟ್ರಾಫಿಕ್ ಜಾಮ್ ಸಮಸ್ಯೆಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಡೆಲಿವರಿ ಕಷ್ಟ ಎಂದು ಗಿಗ್ ನೌಕರರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.












Click it and Unblock the Notifications