ಬೆಂಗಳೂರು ಬೀದಿ ದೀಪಗಳಿಗೆ ಸಿಸಿಎಂಎಸ್ ಕ್ರಾಂತಿ: ಜಯನಗರದಲ್ಲಿ ಮೊದಲ ಹೈಟೆಕ್ ನಿಯಂತ್ರಣ ಕೊಠಡಿ ಸ್ಥಾಪನೆ

ಬೆಂಗಳೂರು; ನಗರದ ಸಾರ್ವಜನಿಕ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಸುಧಾರಿಸುವುದು, ದಕ್ಷತೆ ಹೆಚ್ಚಿಸುವುದು, ವಿದ್ಯುತ್ ಬಳಕೆ ಕಡಿಮೆ ಮಾಡುವುದು ಉದ್ದೇಶದಿಂದ ಜಯನಗರದಲ್ಲಿ ಮೊದಲ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್) ಸ್ಥಾಪನೆ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಸಿಸಿಎಂಎಸ್ ಕಂಟ್ರೋಲ್ ರೂಂಗೆ ಇಂದು ಭೇಟಿ ನೀಡಿ ಹೊಸದಾಗಿ ಅಳವಡಿಸಲಾಗಿರುವ 75,729 ಎಲ್ಇಡಿ ದೀಪಗಳಿಗೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ನಿರ್ವಹಣಾ ಕೇಂದ್ರವನ್ನು ವೀಕ್ಷಿಸಿದರು. ಇದೇ ಎಲ್‌ಇಡಿ ಯೋಜನೆಯಡಿ ನಗರದಲ್ಲಿ ಹೊಸದಾಗಿ 3.02ಲಕ್ಕೂ ಅಧಿಕ ಎಲ್ ಇಡಿ ದೀಪ ಅಳವಡಿಸಲು ನಿರ್ಧರಿಸಲಾಗಿದೆ.

LED Street Lights

ಬೆಂಗಳೂರಿನ ಬೀದಿ ದೀಪಗಳ ಮೂಲಸೌಕರ್ಯವನ್ನು ಆಧುನೀಕರಿಸಲು ಬೃಹತ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಇಂಧನ-ಸಮರ್ಥ ಎಲ್‌ಇಡಿ (LED) ತಂತ್ರಜ್ಞಾನ ಮತ್ತು ಸುಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು (CCMS) ಅಳವಡಿಸಿಕೊಳ್ಳುವ ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ದಕ್ಷಿಣ ನಗರ ಪಾಲಿಕೆ ತಿಳಿಸಿದೆ.

ಎಲ್‌ಇಡಿ ತಂತ್ರಜ್ಞಾನ ದೀಪದ ಅನುಕೂಲವೇನು?

ಜಿಬಿಎಯಿಂದ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಯೊಂದಿಗೆ ಸ್ಮಾರ್ಟ್, ಇಂಧನ-ಸಮರ್ಥ ಎಲ್ ಇಡಿ ಬೀದಿ ದೀಪಗಳ ಅಳವಡಿಕೆ ಇದಾಗಿದೆ. ಈ ತಂತ್ರಜ್ಞಾನದ ಪ್ರಮುಖ ಅನುಕೂಲವೆಂದರೆ, ಹಾಳಾದ ಅಥವಾ ಕೆಲಸ ಮಾಡದ ಬೀದಿ ದೀಪಗಳನ್ನು ಮೊದಲೇ ಸಕ್ರಿಯವಾಗಿ ಪತ್ತೆಹಚ್ಚುವುದು. ಇದರಿಂದ ನಿರ್ವಹಣಾ ತಂಡಗಳು ನಾಗರಿಕರು ದೂರು ನೀಡುವವರೆಗೆ ಕಾಯದೆ ದೋಷಗಳನ್ನು ಗುರುತಿಸಿ ಸರಿಪಡಿಸಲು ಸಾಧ್ಯವಾಗುತ್ತದೆ.

ನಿರ್ವಹಣೆ ತುಂಬಾ ಸರಳ

ಕ್ಷಿಪ್ರ ಪರಿಹಾರ, ಹೆಚ್ಚಿನ ಹೊಣೆಗಾರಿಕೆ ಮತ್ತು ಸಾರ್ವಜನಿಕ ದೀಪಗಳ ಮೂಲಸೌಕರ್ಯದ ಉತ್ತಮ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚಿನ ನಾಗರಿಕ ದೂರುಗಳು ಕಳಪೆ ಬೀದಿ ದೀಪಗಳ ನಿರ್ವಹಣೆಯ ಕುರಿತಾಗಿಯೇ ದಾಖಲಾಗುತ್ತವೆ. ಬೀದಿ ದೀಪಗಳ ಕಾರ್ಯಾಚರಣೆ ಸುಧಾರಿಸುವುದು ಮೂಲಭೂತ ನಗರ ಸೇವೆಯನ್ನು ಬಲಪಡಿಸುವುದಲ್ಲದೆ, ಬೆಳಕಿನಿಂದ ಕೂಡಿದ ರಸ್ತೆಗಳು ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತವೆ.

4 ಕೇಂದ್ರ ನಿಯಂತ್ರಣ ಕೊಠಡಿ

ಮೇಲ್ವಿಚಾರಣೆ ಮತ್ತು ನಿರ್ವಹಣಾ ಕಾರ್ಯಾಚರಣೆಗಳನ್ನು ಬಲಪಡಿಸಲು, ಬೃಹತ್ ಬೆಂಗಳೂರಿನಾದ್ಯಂತ 04 ಮೀಸಲಾದ ಬೀದಿ ದೀಪ ಕೇಂದ್ರ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುವುದು. ಈ ನಿಯಂತ್ರಣ ಕೊಠಡಿಗಳು ಕೇಂದ್ರೀಕೃತ ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ಬೀದಿ ದೀಪಗಳ ಕಾರ್ಯಾಚರಣೆ, ವಿದ್ಯುತ್ ಬಳಕೆ ಮತ್ತು ದೋಷಗಳ ಮುನ್ನೆಚ್ಚರಿಕೆಗಳನ್ನು (ಫಾಲ್ಟ್ ಅಲರ್ಟ್‌ಗಳು) ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುತಿಸಲಾದ ದೋಷಗಳು, ನಾಗರಿಕರ ದೂರುಗಳನ್ನು ಪರಿಹರಿಸಲು ಮೀಸಲಾದ ಫೀಲ್ಡ್ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗುವುದು. ಇವು ದೂರು ದಾಖಲಾದ ಅಥವಾ ದೋಷ ಪತ್ತೆಯಾದ 24 ರಿಂದ 48 ಗಂಟೆಗಳ ಒಳಗೆ ಸಮಸ್ಯೆಗಳನ್ನು ಸರಿಪಡಿಸುವ ನಿಬಂಧನೆಯನ್ನು ಒಳಗೊಂಡಿವೆ. ನಿಗದಿತ ಸಮಯದೊಳಗೆ ದೋಷಗಳನ್ನು ಸರಿಪಡಿಸಲು ವಿಫಲವಾದರೆ ನಿರ್ವಹಣಾ ಗುತ್ತಿಗೆದಾರರ ಮೇಲೆ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತದೆ.

ಸಾಂಪ್ರದಾಯಿಕ ಬೀದಿ ದೀಪಗಳನ್ನು ಇಂಧನ-ಸಮರ್ಥ ಎಲ್‌ಇಡಿ ದೀಪಗಳಿಂದ ಬದಲಾಯಿಸುವುದು ಮತ್ತು ಪ್ರಸ್ತುತ ಇರುವ ಎಲ್‌ಇಡಿ ಬೀದಿ ದೀಪಗಳನ್ನು ಜಿಎಸ್‌ಎಮ್-ಚಾಲಿತ, ಇಂಟರ್‍‌ನೆಟ್ ಆಫ್ ಥಿಂಗ್ಸ್ (IoT) ಆಧಾರಿತ ಸಿಸಿಎಂಎಸ್‌ನೊಂದಿಗೆ ಸಂಯೋಜಿಸುವುದರ ಮೂಲಕ ಈ ಯೋಜನೆ ಪ್ರಾರಂಭವಾಯಿತು.

3,02,919 ಹೊಸಎಲ್‌ಇಡಿ ಬೀದಿ ದೀಪ

ಬೃಹತ್ ಬೆಂಗಳೂರಿನಾದ್ಯಂತ ಈ ಯೋಜನೆಯು 5,00,381 ಎಲ್‌ಇಡಿ ಬೀದಿ ದೀಪಗಳನ್ನು ಒಳಗೊಂಡಿದೆ. ಇದರಲ್ಲಿ 3,02,919 ಹೊಸದಾಗಿ ಅಳವಡಿಸಲಾದ ಎಲ್‌ಇಡಿ ದೀಪಗಳು, ಸಿಸಿಎಂಎಸ್‌ನೊಂದಿಗೆ ಸಂಯೋಜಿಸಲಾದ 1,97,432 ಪ್ರಸ್ತುತ ಇರುವ ಎಲ್‌ಇಡಿ ದೀಪಗಳು ಮತ್ತು 24,677 ಸಿಸಿಎಂಎಸ್ ಯೂನಿಟ್‌ಗಳು ಸೇರಿವೆ. ಈ ಯೋಜನೆಯಿಂದ ಶೇಕಡಾ 54 ಕ್ಕಿಂತ ಹೆಚ್ಚು ಇಂಧನ ಉಳಿತಾಯವಾಗುವ ನಿರೀಕ್ಷೆ ಇದೆ. ವಿದ್ಯುತ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಜೊತೆಗೆ ಸುಸ್ಥಿರ ನಗರ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವುದು ಪಾಲಿಕೆ ಉದ್ದೇಶವಾಗಿದೆ.

ಈ ಸುಧಾರಿತ ಸಿಸಿಎಂಎಸ್ ವ್ಯವಸ್ಥೆಯು ಬೀದಿ ದೀಪಗಳ ಕೇಂದ್ರೀಕೃತ ಹಾಗೂ ವೈಯಕ್ತಿಕ ಮೇಲ್ವಿಚಾರಣೆ, ಸ್ವಯಂಚಾಲಿತ ಆನ್/ಆಫ್ ಸಮಯ ನಿಗದಿ, ಜಿಪಿಎಸ್ ಆಧಾರಿತ ಆಸ್ತಿ ಟ್ರ್ಯಾಕಿಂಗ್, ನೈಜ-ಸಮಯದ (ರಿಯಲ್-ಟೈಮ್) ವಿದ್ಯುತ್ ಬಳಕೆ ಮೇಲ್ವಿಚಾರಣೆ ಮತ್ತು ಉರಿಯದ, ಮಿನುಗುವ ಅಥವಾ ಭಾಗಶಃ ಉರಿಯುವ ಬೀದಿ ದೀಪಗಳನ್ನು ಸ್ವಯಂಚಾಲಿತವಾಗಿ ಗುರುತಿಸಲು ನೆರವಾಗುತ್ತದೆ.

ಜಯನಗರದಲ್ಲಿ ಮೊದಲ ವ್ಯವಸ್ಥೆ

ಈ ನಗರವ್ಯಾಪಿ ಯೋಜನೆಯ ಪ್ರಮುಖ ಮೈಲಿಗಲ್ಲಾಗಿ, ಬಿಎಲ್‌ಆರ್ ದಕ್ಷಿಣ ಕಾರ್ಪೊರೇಷನ್‌ನಿಂದ ಜಯನಗರದಲ್ಲಿ ಮೊದಲ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ತಂತ್ರಜ್ಞಾನ ಆಧಾರಿತ ಬೀದಿ ದೀಪಗಳ ನಿರ್ವಹಣೆ ಮತ್ತು ಬೆಂಗಳೂರಿನಲ್ಲಿ ಸಕ್ರಿಯ ನಾಗರಿಕ ಮೂಲಸೌಕರ್ಯ ನಿರ್ವಹಣೆಯತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ.

ಇಂಧನ ಉಳಿತಾಯ ಮತ್ತು ವಿದ್ಯುತ್ ವೆಚ್ಚದ ಕಡಿತದ ಹೊರತಾಗಿ, ಈ ಯೋಜನೆಯು ರಸ್ತೆ ಬೆಳಕನ್ನು ಸುಧಾರಿಸಲು, ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು, ನಿರ್ವಹಣಾ ಸ್ಪಂದನೆಯ ಸಮಯವನ್ನು ಕಡಿಮೆ ಮಾಡಲು ಮತ್ತು ವಿದ್ಯುತ್ ಪೋಲಾಗುವುದನ್ನು ಕಡಿಮೆ ಮಾಡಲು ನೆರವಾಗುವ ನಿರೀಕ್ಷೆಯಿದೆ.

ಈ ಪರಿವರ್ತನಾ ಯೋಜನೆಯ ಮೂಲಕ, ಸುಧಾರಿತ ತಂತ್ರಜ್ಞಾನದ ಬಳಕೆಯಿಂದ ಅಗತ್ಯ ನಗರ ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಹೆಚ್ಚು ದಕ್ಷ ನಾಗರಿಕ ಸೇವೆಗಳನ್ನು ಒದಗಿಸಲು ಬೃಹತ್ ಬೆಂಗಳೂರು ಪ್ರಾಧಿಕಾರವು ಸ್ಮಾರ್ಟ್, ಸುರಕ್ಷಿತ ಮತ್ತು ಸುಸ್ಥಿರ ಬೆಂಗಳೂರನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+