ಆನೇಕಲ್ ಬಳಿ ಗೇಲ್ ಗ್ಯಾಸ್ ಸ್ಫೋಟ: ಮಹಿಳೆಗೆ ಗಂಭೀರ ಗಾಯ
ಆನೇಕಲ್, ಜನವರಿ 14: ಜಿಯೋ ಕಂಪನಿ ಕೇಬಲ್ ಅಳವಡಿಕೆ ವೇಳೆ ಗೇಲ್ ಗ್ಯಾಸ್ ಸ್ಫೋಟಗೊಂಡಿದ್ದು ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಆನೇಕಲ್‌ನ ಹೊಸರೋಡಿನ ಬಳಿ ನಡೆದಿದೆ.
ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರೋಡ್ ಬಳಿ ಘಟನೆ ನಡೆದಿದ್ದು, ಅಂಗವಿಕಲ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ.
ಸಂಜೆ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಗಾಯಗೊಂಡ ಮಹಿಳೆಯನ್ನು ಸಂಧ್ಯಾರಾಣಿ ಎಂದು ಗುರುತಿಸಲಾಗಿದೆ. ಮೊದಲೇ ಅಂಗವಿಕಲೆಯಾಗಿರುವ ಸಂಧ್ಯಾರಾಣಿಯವರಿಗೆ, ಇದೀಗ ಮತ್ತೊಂದು ಕಾಲು ಸಹ ಊನವಾಗಿದೆ.

ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಭೂಮಿಯಡಿಯಲ್ಲಿ ಅಳವಡಿಸಿರುವ ಗೇಲ್ ಗ್ಯಾಸ್ ಕಂಪನಿಯ ಪೈಪ್ ಲೈನ್ ಸೋರಿಕೆಯಾಗಿ ಪದೇ ಪದೆ ಅವಘಡಗಳು ಸಂಭವಿಸುತ್ತಿದ್ದು, ಇದೀಗ ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ.
ಪರಪ್ಪನ ಅಗ್ರಹಾರ ಎಚ್.ಎಸ್.ಆರ್. ಬಡಾವಣೆ ಸುತ್ತ ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ಸರಬರಾಜು ಮಾಡಲು ಗೇಲ್ ಕಂಪನಿ ನೆಲದಾಳದಲ್ಲಿ ಪೈಪ್ ಅಳವಡಿಸಿದೆ.

ಭೂಮಿ ಅಗೆಯುವ ವೇಳೆ ಹಲವು ಬಾರಿ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿವೆ. ಇಂದು ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಮತ್ತೊಂದು ಅವಘಡ ಸಂಭವಿಸಿದೆ.
ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಗ್ಯಾಸ್ ಸೋರಿಕೆಯಾಗಿ ನಾಲ್ಕು ಮನೆಗಳು ಜಖಂ ಆಗಿದ್ದವು. ಅಲ್ಲದೆ ಐದಾರು ಮಂದಿ ಗಂಭೀರ ಗಾಯಗೊಂಡಿದ್ದರು.












Click it and Unblock the Notifications