'ನಮ್ಮ ಮೆಟ್ರೋ'ದಲ್ಲಿ ಟೋಕನ್, ಸ್ಮಾರ್ಟ್‌ಕಾರ್ಡ್ ಇಲ್ಲದೇ ಸಂಚರಿಸಲು ಅವಕಾಶ!
ಬೆಂಗಳೂರು, ಸೆಪ್ಟಂಬರ್ 19: ನಮ್ಮ ಮೆಟ್ರೋ ರೈಲಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಪ್ರಯಾಣಿಕರು ಟೋಕನ್ ಹಾಗೂ ಸ್ಮಾರ್ಟ್‌ಕಾರ್ಡ್ ಇಲ್ಲದೇ ಪ್ರಯಾಣಿಸುವಂತೆ ಮಾಡಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿರ್ಧರಿಸಿದೆ.
ಹೌದು, ನಿಮಿಷಗಳಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಜತೆಗೆ ಪ್ರಯಾಣಿಕರಿಗೆ ಹೊಸ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತಿದೆ. ಇದರಿಂದ ಸಮಯವು ಉಳಿತಾಯವಾಗಲಿದೆ. ಈ ಸಂಬಂಧ ಬಿಎಂಆರ್‌ಸಿಎಲ್ ಸಂಸ್ಥೆ ಹೊಸ ವ್ಯವಸ್ಥೆ ಒಂದನ್ನು ಮುಂದಿನ ತಿಂಗಳು ಪರಿಚಯಿಸಲು ನಿರ್ಧರಿಸಿದೆ. ಆಗ ಈ ಟೋಕನ್ ಟಿಕೆಟ್ ಇಲ್ಲವೇ ಈ ಸ್ಮಾರ್ಟ್‌ಕಾರ್ಡ್‌ಗಳು ಇಲ್ಲದೇ ಮೆಟ್ರೋದಲ್ಲಿ ಪಯಣಿಸಬಹುದು.
ರಾಜಧಾನಿಯಲ್ಲಿ ಲಕ್ಷಾಂತರ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ವೇಗದ ಮೆಟ್ರೋ ಸಾರಿಗೆಯನ್ನು ಸಹ ಹೆಚ್ಚು ಅವಲಂಬಿಸಿದ್ದಾರೆ. ಅವರಿಗೆ ಅನಕೂಲವಾಗುವಂತೆ ಮುಂದಿನ ತಿಂಗಳ ಅಕ್ಟೋಬರ್‌ನಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರುವ ಸ್ಮಾರ್ಟ್ ಕಾರ್ಡ್ ಅಥವಾ ಭೌತಿಕ ಟೋಕನ್ ರಹಿತವಾಗಿ ಪ್ರಯಾಣಿಸಲು ನಮ್ಮ ಮೆಟ್ರೋ ಅವಕಾಶ ಕಲ್ಪಿಸಿದೆ. ಅದಕ್ಕಾಗಿ 'ಕ್ಯೂಆರ್ ಕೋಡ್' ಆಧಾರಿತ ಟಿಕೆಟ್‌ಗಳನ್ನು ಪರಿಚಯಿಸುತ್ತಿದೆ.

ಏನಿದು ಕ್ಯೂಆರ್ ಕೋಡ್ ಟಿಕೆಟ್
ಬಿಎಂಆರ್‌ಸಿಎಲ್ ಸಂಸ್ಥೆ ಪರಿಚಯಿಸಲು ಉದ್ದೇಶಿಸಿರುವ ಈ 'ಕ್ಯೂಆರ್ ಕೋಡ್' ಆಧಾರಿತ ಟಿಕೆಟ್‌ಗಳನ್ನು ಪ್ರಯಾಣಿಕರು 'ನಮ್ಮ ಮೆಟ್ರೋ' ಮೂಬೈಲ್ ಆಪ್ ಮೂಲಕ ಖರೀದಿಸಿ ರೈಲಿನಲ್ಲಿ ಸಂಚರಿಸಬಹುದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ತಮ್ಮ ರೈಲು ಹತ್ತುವ ಸ್ಥಳ ಮತ್ತು ಇಳಿಯುವ ಸ್ಥಳ ಗುರುತಿಸಿ ಟಿಕೆಟ್ ಖರೀದಿಸಬಹುದಾಗಿದೆ. ಇದರಿಂದ ಟಿಕೆಟ್ ಖರೀದಿಯ ಸಾಕಷ್ಟು ಸಮಯ ಉಳಿತಾಯವಾಗಲಿದೆ.

ನಮ್ಮ ಮೆಟ್ರೋ ಅಪ್ಲಿಕೇಶನ್ ಬಳಸಿ
ಮೆಟ್ರೋ ನಿಲ್ದಾಣಗಳಲ್ಲಿ ಮೊಬೈಲ್ ಅಪ್ಲಿಕೇಷನ್ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸುತ್ತದೆ. ಅದನ್ನು ಸಕ್ರಿಯಗೊಳಿಸಿ ನಂತರ ಅಳವಡಿಸಲಾಗಿರುವ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ (ಎಎಫ್‌ಸಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಟಿಕೆಟ್ ಪಡೆಯಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.
ಈ ಹೊಸ ವ್ಯವಸ್ಥೆ ಮೆಟ್ರೋ ನಿಲ್ದಾಣಗಳಲ್ಲಿ ಜಾರಿಯಾದ ನಂತರ ಪ್ರಯಾಣಿಕರು ಪ್ಲಾಸ್ಟಿಕ್ ಸ್ಮಾರ್ಟ್‌ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಹೋಗುವಾಗ ಮತ್ತು ಬೇರೆ ಸ್ಥಳದಿಂದ ಮರಳುವಾಗ ಟಿಕೆಟ್ ಟೋಕನ್ ಪಡೆಯಲು ಕಾಯಬೇಕಿಲ್ಲ. ಹೊಸ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಜತೆಗೆ ಹಳೆಯ ಟೋಕನ್, ಸ್ಮಾರ್ಟ್‌ಕಾರ್ಡ್ ಸಹ ಪ್ರಯಾಣಿಕರು ಖರೀದಿಸಲು ಅವಕಾಶ ಇದೆ. ಹೊಸ ವ್ಯವಸ್ಥೆ ಜತೆ ಹಳೆಯ ವ್ಯವಸ್ಥೆಯು ಮುಂದುವರಿಯಲಿದೆ ಎಂದು ಅವರು ಹೇಳಿದರು.

ನಿಲ್ದಾಣಗಳ ಪ್ರವೇಶದಲ್ಲಿ ಕ್ಯೂಆರ್ ಪ್ರದರ್ಶನ
ನಮ್ಮ ಮೆಟ್ರೋದ ಪ್ರಯಾಣಿಕರು 'ನಮ್ಮ ಮೆಟ್ರೋ' ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿ ಸ್ಮಾರ್ಟ್‌ಫೋನ್‌ಗಳಲ್ಲೇ ಟಿಕೆಟ್ ಖರೀದಿಸಿ ಸಂಚರಿಸಬಹುದು. ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ವೇಳೆಗೆ ಈ ಕ್ಯೂಆರ್ ಕೋಡ್ ಮೂಲಕ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ (ಎಎಫ್‌ಸಿ) ಗೇಟ್‌ಗಳಲ್ಲಿ ಟ್ಯಾಪ್ ಮಾಡಬೇಕಿದೆ. ಈ ಎಎಫ್‌ಸಿ ಗೇಟ್‌ಗಳನ್ನು, ಸುಧಾರಿತ ಎನ್‌ಸಿಎಂಸಿ (ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್) ಮತ್ತು ಕ್ಯೂಆರ್ ಕೋಡ್ ಸಹಿತ ಈಗಾಗಲೇ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.

ಕ್ಯೂಆರ್ ಬಳಕೆದಾರರಿಗೆ ಶೇ.5ರಷ್ಟು ರಿಯಾಯಿತಿ
ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ಬಳಕೆದಾರರಿಗೆ ಶೇ5ರಷ್ಟು ರಿಯಾಯಿತಿಯನ್ನು ಸಹ ಬಿಎಂಆರ್‌ಸಿಎಲ್ ನೀಡುತ್ತಿದೆ. ಸದ್ಯಕ್ಕಿರುವ ಶೇ.5ರಷ್ಟು ರಿಯಾಯಿತಿಯು ಕೇವಲ ಸ್ಮಾರ್ಟ್‌ಕಾರ್ಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.
ಬಿಎಂಆರ್‌ಸಿಎಲ್ ಮುಂದಿನ ಅಕ್ಟೋಬರ್‌ನಲ್ಲಿ ಕ್ಯೂಆರ್ ಆಧಾರಿತ ಟಿಕೆಟಿಂಗ್ ಸಹಿತವಾಗಿ ಮೆಟ್ರೋ ಸೇವೆ ಆರಂಭವಾಗಲಿದೆ. ಮೊದಲ ಹಂತದಲ್ಲಿ, 'ನಮ್ಮ ಮೆಟ್ರೋ' ಅಪ್ಲಿಕೇಶನ್ ಮೂಲಕ ಮಾತ್ರ ಟಿಕೆಟ್ ಲಭ್ಯವಿರುತ್ತದೆ. ಇತರ ಡಿಜಿಟಲ್ ವ್ಯಾಲೆಟ್ ಸಂಸ್ಥೆಗಳಿಗೆ ಈ ಸೌಲಭ್ಯವನ್ನು ಒದಗಿಸಲು ಅವಕಾಶ ನೀಡಲಿದ್ದೇವೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.












Click it and Unblock the Notifications