Final E-Khata: ಇ -ಖಾತಾದ ಪ್ರಮುಖ ಮಾಹಿತಿ, ಇನ್ನು ಮೂರು ದಿನಗಳಲ್ಲಿ ಎಲ್ಲಾ ಕ್ಲಿಯರ್!
ಬೆಂಗಳೂರಿನಲ್ಲಿ ಇ - ಖಾತಾಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. ಅಲ್ಲದೇ ಯಾವುದೇ ಸಮಸ್ಯೆ ಇದ್ದರೆ ಸಹಾಯವಾಣಿ ಸಂಖ್ಯೆಯೊಂದನ್ನು ಪರಿಚಯಿಸಿದ್ದು, ಅದಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ. ಬಿಬಿಎಂಪಿಯಲ್ಲಿ ಇ - ಖಾತಾಗೆ ಸಂಬಂಧಿಸಿದಂತೆ ಮಾತನಾಡಿರುವ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದಿದ್ದಾರೆ.
ನಗರದಲ್ಲಿ ಇ-ಖಾತಾ ಪಡೆಯುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಲಿಕೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಂದ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 46,962 ಅರ್ಜಿಗಳು ಬಂದಿದ್ದು, ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 2311 ಇ-ಖಾತಾ ನೀಡಲಾಗಿದೆ. ಇ - ಖಾತಾಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳ ಪೈಕಿ ಈಗಾಗಲೇ ಶೇ. 90ರಷ್ಟು ಅರ್ಜಿಗಳನ್ನು ಈಗಾಗಲೇ ಇ - ಖಾತಾ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು 2ರಿಂದ 3 ದಿನಗಳಲ್ಲಿ ವಿಲೇವಾರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಪಾಲಿಕೆ ಎಂಟೂ ವಲಯಗಳಲ್ಲಿ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಹೆಚ್ಚುವರಿ ವಿಷಯ ನಿರ್ವಾಹಕರ ಲಾಗಿನ್‌ಗಳನ್ನು ಸೃಷ್ಟಿಸಲಾಗಿದೆ. ಇದರ ಮೂಲಕ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಜನರಿಗೆ ಅತಿ ಶೀಘ್ರದಲ್ಲಿ ಅಂತಿಮ ಇ-ಖಾತಾ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ದೂರುಗಳಿಗೆ ಸ್ಪಂದನೆ: ಇನ್ನು ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ಬರುವ ದೂರುಗಳಿಗೆ ಪಾಲಿಕೆಯ ಕಂದಾಯ ವಿಭಾಗದಿಂದ ಇ-ಖಾತಾ ಪಡೆಯುವ ಸಲುವಾಗಿ ಸಾರ್ವಜನಿಕರಿಗೆ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9480683695ಕ್ಕೆ ಕರೆ ಮಾಡಿ ನೀಡುವ ದೂರುಗಳನ್ನು ಪರಿಗಣಿಸಿ ಕೂಡಲೇ ಬಗೆಹರಿಸಲಾಗುವುದು. ಇ-ಖಾತಾ ವಿಚಾರವಾಗಿ ಯಾವುದೇ ಗೊಂದಲಗಳಿದ್ದರೂ ಸಹಾಯವಾಣಿ ಸಂಖ್ಯೆ ಕರೆ ಮಾಡಬಹುದಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ - ಖಾತಾಗೆ ಬೇಕಾಗುವ ದಾಖಲೆಗಳು
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ - ಖಾತಾ ಪಡೆಯಲು ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಪ್ರಮುಖ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ(ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ನೀಡುವ ಅಗತ್ಯವಿಲ್ಲ).
(1) ನಿಮ್ಮ ಆಸ್ತಿ ತೆರಿಗೆ ರಶೀದಿ
(2) ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
(3) ಎಲ್ಲಾ ಮಾಲೀಕರ ಆಧಾರ್
(4) ಬೆಸ್ಕಾಂ ಬಿಲ್
(5) ಜಲಮಂಡಳಿ ನೀಡುವ ಬಿಲ್ (ನೀವು ಕಾವೇರಿ ನೀರಿನ ಸಂಪರ್ಕವನ್ನು ಹೊಂದಿದ್ದರೆ)
(6) ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ನಿಮ್ಮ ಬಳಿ ಇದ್ದರೆ)
(7) ಬಿಬಿಎಂಪಿ ಬಿಲ್ಡಿಂಗ್ ಪ್ಲಾನ್ ಅನುಮೋದನೆ (ಇದರ ದಾಖಲೆ ಇದ್ದರೆ)
(8) ಡಿಸಿ ಪರಿವರ್ತನೆ (ಇದರ ದಾಖಲೆ ನಿಮ್ಮ ಬಳಿ ಇದ್ದರೆ )
(9) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್, ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಹಾಗೂ ನೀವು ಇದರ ದಾಖಲೆ ಹೊಂದಿದ್ದರೆ) ನೀಡಬಹುದಾಗಿದೆ.












Click it and Unblock the Notifications