ಚುನಾವಣಾ ಆಯೋಗ ವಶಪಡಿಸಿಕೊಂಡ ಹಣ ಎಷ್ಟು?, ಮುಚ್ಚಿದ ಬಾರ್‌ಗಳೆಷ್ಟು?
ಬೆಂಗಳೂರು, ಏಪ್ರಿಲ್ 25: ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯ ಚುನಾವಣಾ ಆಯೋಗವು ಈವರೆಗೆ ವಶಪಡಿಸಿಕೊಂಡಿರುವ ಹಣ ಮತ್ತು ದಾಖಲಿಸಿರುವ ಪ್ರಕರಣದ ಬಗ್ಗೆ ಮಾಹಿತಿ ನೀಡಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಈ ವರೆಗೆ ಚುನಾವಣಾ ಆಯೋಗವು 39.82 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಇದರ ಜೊತೆಗೆ ಫ್ಲೈಯಿಂಗ್ ಸ್ಕ್ವಾಡ್ 46 ಕೋಟಿ ದಾಖಲೆ ರಹಿತ ಹಣವನ್ನು ಸೀಜ್ ಮಾಡಿದೆ.
ಅಬಕಾರಿ ಇಲಾಖೆಯು 17.44 ಕೋಟಿ ರೂಪಾಯಿ ಮೌಲ್ಯದ 36.45 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಬರೋಬ್ಬರು 5,724 ಕೇಸುಗಳನ್ನು ದಾಖಲಿಸಿದ್ದಾರೆ. ಜೊತೆಗೆ ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ 522 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಇವುಗಳಲ್ಲಿ ಅಕ್ರಮವಾಗಿ ಮಧ್ಯ ಸಾಗಿಸಲಾಗುತ್ತಿತ್ತು ಎಂದು ಕೇಸು ಮಾಡಲಾಗಿದೆ. ಜೊತೆಗೆ 700ಕ್ಕೂ ಹೆಚ್ಚು ಬಾರ್‌ಗಳನ್ನು ಮುಚ್ಚಲಾಗಿದೆ.

ಈ ಬಾರಿ ಚುನಾವಣಾ ಅಕ್ರಮ ತಡೆಯಲು ಜಿಪಿಎಸ್ ಅಳವಡಿತ ಫ್ಲೈಯಿಂಗ್ ಸ್ಕ್ವಾಡ್, ಹಲವು ಜಾಗೃತ ದಳ ಇನ್ನೂ ಮುಂತಾದವುಗಳನ್ನು ಚುನಾವಣಾ ಆಯೋಗವು ರಚಿಸಿದೆ. ದಾಖಲೆ ರಹಿತವಾಗಿ 50,000 ಸಾವಿರಕ್ಕೂ ಹೆಚ್ಚು ಹಣವನ್ನು ಸಾಗಿಸಿದಲ್ಲಿ ಚುನಾವಣಾ ಆಯೋಗವು ಹಣ ವಶಪಡಿಸಿಕೊಳ್ಳುತ್ತದೆ.
ಇದೀಗ ನಾಮಪತ್ರ ಸಲ್ಲಿಸುವ ಅವಧಿ ಮುಗಿದಿದ್ದು, ಏಪ್ರಿಲ್ 27ಕ್ಕೆ ನಾಮಪತ್ರ ವಾಪಾಸ್ ಪಡೆಯುವ ಕೊನೆಯ ದಿನವಾಗಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ಕ್ಕೆ ಮತೆಣಿಕೆ ನಡೆಯಲಿದೆ. ಈ ಬಾರಿ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.












Click it and Unblock the Notifications