E Khata: ಇ - ಖಾತಾ ಹೊಸ ಸಂಕಷ್ಟ: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್‌ಗೂ ಎಫೆಕ್ಟ್!
E Khata: ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಆಸ್ತಿದಾರರಿಗೆ ಇ - ಖಾತಾ ನೀಡಲಾಗುತ್ತಿದೆ. ಆದರೆ ಇ ಖಾತಾ ಕೊಡುವುದರಲ್ಲಿ ಇನ್ನೂ ಸಂಕಷ್ಟ ಮುಂದುವರಿದಿದ್ದು. ಇದೀಗ ಇ - ಖಾತಾದಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೂ ಪರಿಣಾಮ ಬೀರಲು ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಆಸ್ತಿ ಮಾರಾಟ ಹಾಗೂ ಆಸ್ತಿ ಖರೀದಿಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ, ಇ ಖಾತಾ ಕಡ್ಡಾಯ ಮಾಡಿದ ನಂತರ ಸಮಸ್ಯೆ ಹೆಚ್ಚಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟ ಮಾತ್ರವಲ್ಲ ಕಟ್ಟಡಗಳ ನಿರ್ಮಾಣದ ಮೇಲೂ ಪರಿಣಾಮ ಬೀರಿದೆ.
ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ ಎಂದು ಗುರುತಿಸಲಾಗಿದೆ. ಆದರೆ, ಇಷ್ಟು ಆಸ್ತಿಗಳಲ್ಲಿ ಇಲ್ಲಿಯ ವರೆಗೆ ಕೇವಲ 5.5 ಲಕ್ಷ ಆಸ್ತಿಗಳಿಗೆ ಮಾತ್ರ ಇ ಖಾತಾ ನೀಡಲಾಗಿದೆ. ಕಳೆದ ಒಂದು ವರ್ಷದ ಹೆಚ್ಚು ಅವಧಿಯಿಂದಲೂ ಇ - ಖಾತಾ ನೀಡಲು ಪ್ರಾರಂಭಿಸಲಾಗಿದೆಯಾದರೂ ಇಲ್ಲಿಯ ವರೆಗೆ ಎಲ್ಲಾ ಆಸ್ತಿಗಳಿಗೂ ಇ- ಖಾತಾ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಖಾತಾ ನೀಡುವುದಕ್ಕೆ ಹಲವು ಮಾರ್ಗಗಳನ್ನು ಮಾಡಿಕೊಂಡಿದ್ದರೂ. ಖಾತಾ ಪಡೆಯುವುದಕ್ಕೆ ಬೆಂಗಳೂರಿನ ಆಸ್ತಿದಾರರು ಇಂದಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಷಯಗಳಿಗೆ ಇ - ಖಾತಾ ಕಡ್ಡಾಯ: ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಸ್ತಿ ಹಾಗೂ ಸ್ವತ್ತುಗಳ ಮಾರಾಟ ಮಾಡುವುದು, ಖರೀದಿಸುವುದು ಮತ್ತು ಕಟ್ಟಡ ನಕ್ಷೆ ಮಂಜೂರಾತಿಗೆ (ಕಟ್ಟಡ ನಿರ್ಮಾಣ ಮಾಡುವುದಕ್ಕೆ ಕೊಡುವ ಪ್ಲ್ಯಾನ್) ಇ-ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿದೆ. ಅಲದೇ ಇ- ಖಾತಾಗೆ ಬೇಕಾದ ಕೆಲವೊಂದು ದಾಖಲೆಗಳು ರಿಜಿಸ್ಟರ್ ಆಗಿಲ್ಲ (ಪಾಲಿಕೆ - ಸರ್ಕಾರದ ದಾಖಲೆಗಳಲ್ಲಿ ನಮೂದಾಗಿಲ್ಲ) ಹಾಗೂ ಕೆಲವೊಂದು ತಾಂತ್ರಿಕ ದೋಷಗಳೂ ಎದುರಾಗಿವೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಇ - ಖಾತಾದ ಪಡೆದುಕೊಳ್ಳಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಮೇಲೆ ಪರಿಣಾಮ: ಇನ್ನು ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿರುವುದು ನೇರವಾಗಿ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಿದೆ. ಇ ಖಾತಾ ಇಲ್ಲದೆ ಆಸ್ತಿ ಖರೀದಿ ಹಾಗೂ ಆಸ್ತಿ ಮಾರಾಟ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ರಿಯಲ್ ಎಸ್ಟೇಟ್ ಮೇಲೆ ಭಾರೀ ಪರಿಣಾಮ ಬೀರಿದೆ. ಅಲ್ಲದೇ ಕಟ್ಟಡ ನಕ್ಷೆ ಮಂಜೂರಾತಿ ಸಿಗದೆ ಮನೆಗಳ ನಿರ್ಮಾಣ ಸಾಧ್ಯವಾಗುತ್ತಿಲ್ಲ. ನಕ್ಷೆ ಮಂಜೂರಾತಿ ಇಲ್ಲದೆ ಮನೆ ನಿರ್ಮಾಣ ಮಾಡಿದರೆ ಆ ಮನೆಗಳನ್ನು ಕೆಡವಲಾಗುತ್ತಿದೆ.
ಇ - ಖಾತಾ ನೀಡುವುದರ ಉದ್ದೇಶವೇನು ?
ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಬಿಬಿಎಂಪಿಯು ಮೂರು ಮುಖ್ಯ ಕಾರಣಗಳಿಗೆ ಇ - ಖಾತಾವನ್ನು ಕಡ್ಡಾಯ ಮಾಡಿದೆ. ಮೊದಲನೆಯದಾಗಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಮೋಸವಾಗಬಾರದು ಎನ್ನುವದು. ಎರಡನೇಯದು ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು. ಮೂರನೇ ಹಾಗೂ ಅಂತಿಮ ಕಾರಣ, ಆಸ್ತಿಗಳ ಡಿಜಿಟಲೀಕರಣವಾಗಿದೆ. ಆದರೆ, ಇದೀಗ ಪೂರ್ಣ ಪ್ರಮಾಣದಲ್ಲಿ ಇ ಖಾತಾ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಇ - ಖಾತಾ ಯೋಜನೆ ಸಕ್ಸಸ್ ಆಗಿಲ್ಲ ಎಂದೇ ಹೇಳಲಾಗುತ್ತಿದೆ.












Click it and Unblock the Notifications