ಕ್ರೈಂ ಸ್ಟೋರಿ: ಮಾರು ವೇಷದಲ್ಲಿ ಹೋಗಿ ಲಸಿಕೆ ದಂಧೆ ಪತ್ತೆ ಹಚ್ಚಿದ ಪೊಲೀಸರು
ಬೆಂಗಳೂರು, ಮೇ. 21: ಕೊರೊನಾ ಸೋಂಕು ಭೀತಿಯಿಂದ ಲಸಿಕೆ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಲಸಿಕೆ ಹೆಸರಿನಲ್ಲಿ ಶುರುವಾಗಿರುವ ಈ ಭಯಾನಕ ದಂಧೆಯ ಕುರಿತು ತಿಳಿದುಕೊಳ್ಳಿ. ತುರ್ತಾಗಿ ಲಸಿಕೆ ಹಾಕಿಸಿಕೊಳ್ಳುವ ತವಕದಲ್ಲಿ ಖಾಸಗಿಯಾಗಿ ಲಸಿಕೆ ಹಾಕಿಸಿಕೊಂಡು ಮೋಸ ಹೋಗಬೇಡಿ. ಹಾಗೇನಾದರೂ ಹಣ ಕೊಟ್ಟು ಹಾಕಿಸಿಕೊಂಡರೂ ಅದರಿಂದ ನಿಮಗೆ ಏನೂ ಪ್ರಯೋಜನ ಆಗಲ್ಲ ಎಂಬ ವಾಸ್ತವ ನಿಮಗೆ ಗೊತ್ತಿರಲಿ! ಯಾಕೆಂದರೆ ಇದೀಗ ಬೆಂಗಳೂರಿನಲ್ಲಿ ಲಸಿಕೆ ಹೆಸರಿನಲ್ಲಿ ದುಡ್ಡು ಮಾಡಲು ವೈದ್ಯರೇ ದಂಧೆಗೆ ಇಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ !
Recommended Video

ದಂಧೆಗಳ ಸರಮಾಲೆ
ಕೊರೊನಾ ಬಂಡವಾಳ ಮಾಡಿಕೊಂಡು ಅನೇಕ ದಂಧೆಗಳು ಹುಟ್ಟು ಹಾಕಿದ್ದಾರೆ. ಬೆಡ್ ಬ್ಲಾಕಿಂಗ್, ಆಂಬ್ಯುಲೆನ್ಸ್, ಐಸಿಯು, ಸ್ಮಶಾನ, ರೆಮ್‌ಡೆಸಿವಿರ್ ಹೀಗೆ ನಾನಾ ದಂಧೆಗಳ ಹೆಸರಿನಲ್ಲಿ ಮುಗ್ಧರನ್ನು ಸುಲಿಗೆ ಮಾಡಲಾಗುತ್ತಿದೆ. ಇದೀಗ ಲಸಿಕೆ ದಂಧೆ ಶುರುವಾಗಿದೆ. ಅಕ್ರಮವಾಗಿ ಲಸಿಕೆ ಹಾಕಿ ಹಣ ಗಳಿಸುವ ದಂಧೆ ಬೆಂಗಳೂರಿನಲ್ಲಿ ಟಿಸಿಲೊಡೆದಿದೆ. ಕಾಸು ಕೊಟ್ಟು ಲಸಿಕೆ ಹಾಕಿಸಿಕೊಂಡರೂ ಅದರಿಂದ ಆಗುವ ಪ್ರಯೋಜನಕ್ಕಿಂತಲೂ ನಿಷ್ಪ್ರಯೋಜಕ ಎಂಬುದನ್ನು ಮರೆಯಬಾರದು. ಇನ್ನು ಅಕ್ರಮವಾಗಿ ಲಸಿಕೆ ಹಾಕಿ ಜನರಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇರೆಗೆ ಅನ್ನಪೂರ್ಣೇಶ್ವರಿನಗರದ ಪೊಲೀಸರು ವೈದ್ಯೆ ಹಾಗೂ ಆಕೆಯ ಆಪ್ತೆಯನ್ನು ಬಂಧಿಸಿದ್ದಾರೆ.

ಲಸಿಕೆ ದಂಧೆ ಪತ್ತೆ ಆಗಿದ್ದು ಹೀಗೆ
ಅನ್ನಪೂರ್ಣೇಶ್ವರಿ ನಗರದ ಐಟಿಐ ಬಡಾವಣೆ ಮನೆಯೊಂದರಲ್ಲಿ ಅಕ್ರಮವಾಗಿ ಕೋವಿಶೀಲ್ಡ್ ಲಸಿಕೆ ಹಾಕಿ ಹಣ ಮಾಡುತ್ತಿದ್ದ ದಂಧೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪತ್ತೆ ಮಾಡಿದ್ದಾರೆ. ಸರ್ಕಾರಿ ಕೋಟಾದಡಿ ಬಂದಿದ್ದ ಕೋವಿಶೀಲ್ಡ್ ಲಸಿಕೆಯನ್ನು ವೈದ್ಯೆಯೊಬ್ಬರು ತನ್ನ ಆಪ್ತೆಯ ಮನೆಯಲ್ಲಿಟ್ಟು, ಡೋಸ್‌ಗೆ ತಲಾ 500 ರೂ.ನಂತೆ ಜನರಿಂದ ವಸೂಲಿ ಮಾಡುತ್ತಿದ್ದರು. ಪೊಲೀಸರು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ದಂಧೆಯನ್ನು ಪತ್ತೆ ಮಾಡುವ ಜತೆಗೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತರ ಬಳಿ ಹಲವು ಕೋವಿಶೀಲ್ಡ್ ವ್ಯಾಕ್ಸಿನ್ ಜಪ್ತಿ ಮಾಡಲಾಗಿದೆ. ಸರ್ಕಾರದ ಕೋಟಾದಡಿ ಬಂದಿರುವ ಕೋವಿಶೀಲ್ಡ್ ಲಸಿಕೆಯ ವಯಲ್ ಗಳು ಇವರಿಗೆ ಹೇಗೆ ಸಿಕ್ಕಿದವು ಎಂಬ ಸಂಗತಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಪ್ರತಿಯೊಂದು ಡೋಸ್ ಬಗ್ಗೆಯೂ ಸರ್ಕಾರದಲ್ಲಿ ಅಧಿಕೃತವಾಗಿ ಲೆಕ್ಕ ಇಡಬೇಕು. ಆದರೆ, ಅದನ್ನು ಕಣ್ಣು ತಪ್ಪಿಸಿ ಯಾವ ರೀತಿ ಲಸಿಕೆಗಳನ್ನು ಎಗರಿಸಿದ್ದರು ಎಂಬುದರ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಸಿಕೆ ದಂಧೆ ಸೂತ್ರಧಾರಿಗಳು
ವೃತ್ತಿಯಲ್ಲಿ ವೈದ್ಯೆ ಆಗಿರುವ ಪುಷ್ಪಿತಾ ತನ್ನ ಸ್ನೇಹಿತೆ ಪ್ರೇಮಲತಾ ಲಸಿಕೆ ದಂಧೆಯ ಸೂತ್ರಧಾರಿಗಳು. ಪ್ರೇಮಲತಾ ಮನೆಯಲ್ಲಿ ಖಾಸಗಿಯಾಗಿ ಜನರಿಂದ ತಲಾ 500 ರೂ. ಹಣ ಪಡೆದು ಕೋವಿಶೀಲ್ಡ್ ಲಸಿಕೆ ಹಾಕುತ್ತಿದ್ದರು. ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದು, ಪ್ರೇಮಲತಾ ಹಾಗೂ ವೈದ್ಯೆ ಪುಷ್ಪಿತಾ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರು ಸುಮಾರು 53 ಮಂದಿಗೆ ವ್ಯಾಕ್ಸಿನ್ ನೀಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಮಂಜುನಾಥನಗರದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪುಷ್ಪಿತಾ ಯಾವ ರೀತಿ ಖಾಸಗಿಯಾಗಿ ವ್ಯಾಕ್ಸಿನ್ ಸಾಗಿಸಿದರು? ಲಸಿಕೆ ಕುಡಿತ ಸುಳ್ಳು ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಿದರೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಟಾಚಾರಕ್ಕೆ ವ್ಯಾಕ್ಸಿನ್ ಹಾಕಿದ್ದ ವೈದ್ಯೆ
ಐಟಿಐ ಲೇಔಟ್‌ನಲ್ಲಿ ಖಾಸಗಿಯಾಗಿ ಲಸಿಕೆ ಹಾಕಿದ ಪ್ರಕರಣದಲ್ಲಿ ಹಣ ಮಾಡುವ ದುರುದ್ದೇಶದಿದ ಕಾಟಾಚಾರಕ್ಕೆ ಲಸಿಕೆ ಹಾಕಲಾಗಿದೆ. ಈವರೆಗೂ 53 ಮಂದಿಗೆ ಕೋವಿಶೀಲ್ಡ್ ಲಸಿಕೆ ನೀಡಿದ್ದಾರೆ. ಆದರೆ ವ್ಯಾಕ್ಸಿನ್‌ನ್ನು ಇಷ್ಟೇ ಪ್ರಮಾಣದ ತಾಪಮಾನದಲ್ಲಿ ಇಡಬೇಕು ಎಂಬ ನಿಯಮದ ಬಗ್ಗೆ ಅರಿವಿಲ್ಲ. ಹೀಗಾಗಿ ವ್ಯಾಕ್ಸಿನ್ ಪಡೆದರೂ ಕೊಂಡರೂ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಒಂದು ಇಂಜೆಕ್ಷನ್ ಡ್ರಾ ಮಾಡಿದ ಕೂಡಲೇ ವಯಲ್‌ನಲ್ಲಿರುವ ಡೋಸ್ ಪೂರ್ತಿ ಕ್ಷಣಗಳಲ್ಲಿ ಖಾಲಿ ಮಾಡಬೇಕು. ಆದರೆ, ಇವರು ಗಿರಾಕಿಗಳನ್ನು ಹುಡುಕುವ ಕಾರಣಕ್ಕೆ ಹೊರಗೆ ತೆಗೆದ ವ್ಯಾಕ್ಸಿನ್ ಗಂಟೆಗಟ್ಟಲೇ ಹೊರಗೆ ಇಟ್ಟಿದ್ದಾರೆ. ಈ ರೀತಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಆದರಿಂದ ಯಾವ ಲಾಭವೂ ಆಗುವುದಿಲ್ಲ. ಹೀಗಾಗಿ ಸಾರ್ವಜನಿಕರು ಸರ್ಕಾರ ಸೂಚಿತ ಅಧಿಕೃತ ಕೇಂದ್ರಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.

ಲಸಿಕೆ ಬಗ್ಗೆ ನಿಮಗಿದು ತಿಳಿದಿರಲಿ
ಕೊರೊನಾ ಸೋಂಕಿನಿಂದ ಪಾರಾಗಲು ಸದ್ಯದ ಮಟ್ಟಿಗೆ ಜನರಿಗೆ ಕಾಣುತ್ತಿರುವ ಏಕೈಕ ದಾರಿ ಲಸಿಕೆ. ಅದು ಭಾರತದಲ್ಲಿ ನೀಡುತ್ತಿರುವ ಕೋವ್ಯಾಕ್ಸಿನ್, ಕೋವಿಶೀಲ್ಡ್ ಎರಡೂ ಲಸಿಕೆ ಒಬ್ಬ ವ್ಯಕ್ತಿ ಎರಡು ಡೋಸ್ ತೆಗೆದುಕೊಳ್ಳಬೇಕು. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ ನಾಲ್ಕು ವಾರದಲ್ಲಿ ಎರಡನೇ ಡೋಸ್ ಕಡ್ಡಾಯವಾಗಿ ಪಡೆಯಬೇಕು. ಕೋವಿಶೀಲ್ಡ್ ಮೊದಲ ಡೋಸ್ ಪಡೆದ ಆರು ವಾರದಿಂದ ಎಂಟು ವಾರದ ಒಳಗೆ ಎರಡನೇ ಡೋಸ್ ಪಡೆಯಬೇಕು. ಇನ್ನು ಲಸಿಕೆ ಅಭಿಯಾನ ತ್ವರಿತವಾಗಿ ಮುಗಿಸುವ ಕಾರಣಕ್ಕೆ ಸರ್ಕಾರ ಖಾಸಗಿಯವರಿಗೂ ಲಸಿಕೆ ಹಾಕಿಸುವ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳಲ್ಲಿ ಲಸಿಕೆ ಕೊಡಲು ಅವಕಾಶ ನೀಡಿದ ಕೂಡಲೇ ನಕಲಿ ಲಸಿಕೆಗಳು ಹುಟ್ಟಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಲಸಿಕೆ ನೀಡುವ ಹೆಸರಿನಲ್ಲಿ ಗ್ಲೂಕೋಸ್ ಹಾಕಿ ಸುಲಿಗೆ ಮಾಡುವ ದಂಧೆಕೋರರಿಗೂ ಕಡಿಮೆಯಿಲ್ಲ. ರೆಮ್‌ಡೆಸಿವಿರ್ ಜೀವ ರಕ್ಷಕ ಚುಚ್ಚು ಮದ್ದು ಹೆಸರಿನಲ್ಲಿ ನಕಲಿ ಔಷಧ ತಯಾರಿಸಿ ಎಷ್ಟೋ ಜನರಿಗೆ ಮೋಸ ಮಾಡಿದ್ದ ಜಾಲವನ್ನು ಪೊಲೀಸರು ಇತ್ತೀಚೆಗೆ ಪತ್ತೆ ಮಾಡಿದ್ದರು. ಹೀಗಾಗಿ ಲಸಿಕೆ ಹೆಸರಿನಲ್ಲಿ ದೋಖಾ ಮಾಡುವ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು.

ಅಧಿಕೃತ ಕೇಂದ್ರಗಳಲ್ಲಿ ಲಸಿಕೆ ಪಡೆಯಿರಿ
ಭಾರತದಲ್ಲಿ ನೀಡುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ಶೇ. 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಟ್ಟು ಕಾಪಾಡಬೇಕು. ಜತೆಗೆ ವ್ಯಾಕ್ಸಿನ್‌ನ್ನು ಯಾವ ಕಾರಣಕ್ಕೂ ಹೊರಗಿನ ಸೂರ್ಯನ ಕಿರಣ ಬೀಳದಂತೆ ಕಾಪಾಡಬೇಕು. ಇದನ್ನೇ ವೈಜ್ಞಾನಿಕ ಭಾಷೆಯಲ್ಲಿ ಕೋಲ್ಡ್ ಚೈನ್ ಅಂತ ಕರೆಯುತ್ತೇವೆ. ರಾಜ್ಯದಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಇರುವಂಥ ಸುರಕ್ಷಿತ ಕೋಲ್ಡ್ ಚೈನ್ ವ್ಯವಸ್ಥೆ ಖಾಸಗಿಯವರ ಬಳಿ ಇಲ್ಲ. ಕೇವಲ ರೆಫ್ರಿಜೇಟರ್, ಫ್ರಿಡ್ಜ್ ಗಳಲ್ಲಿ ವ್ಯಾಕ್ಸಿನ್ ಇಟ್ಟಿರುತ್ತಾರೆ. ಅಪ್ಪಿ ತಪ್ಪಿ ಕರೆಂಟ್ ಕೈ ಕೊಟ್ಟರೆ, ವ್ಯಾಕ್ಸಿನ್ ನಿಷ್ಪ್ರಯೋಜಕ. ಅದನ್ನೇ ಜನರ ಮೇಲೆ ಬಳಕೆ ಮಾಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಇನ್ನು ಒಂದು ವ್ಯಾಕ್ಸಿನ್ ವಯಲ್ ತೆರೆದ ಕೂಡಲೇ ಕ್ಷಣ ಮತ್ರದಲ್ಲಿ ಅದರ ಡೋಸ್ ಖಾಲಿ ಮಾಡಬೇಕು. ಇಲ್ಲದಿದ್ದರೆ ಅ ಡೋಸ್ ಗಳು ಹಾಕಿಸಿಕೊಂಡರೂ ಪ್ರಯೋಜನ ಆಗುವುದಿಲ್ಲ.ಹೀಗಾಗಿ ಲಸಿಕೆ ವಿಚಾರದಲ್ಲಿ ಸರ್ಕಾರದ ಕೇಂದ್ರಗಳಲ್ಲಿ ಹಾಕಿಸಿಕೊಳ್ಳುವುದು ಬಹು ಸುರಕ್ಷಿತ ಎಂದು ಡಾ. ಪ್ರದೀಪ್ ಅವರು ಸಲಹೆ ಮಾಡಿದ್ದಾರೆ.












Click it and Unblock the Notifications