ನನ್ನ ಹುಟ್ಟುಹಬ್ಬಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕಿಸಿದ್ರೆ ಹುಷಾರ್, ಕೇಸ್ ಹಾಕಿಸ್ತೀನಿ: ಡಿ.ಕೆ.ಶಿವಕುಮಾರ್ ವಾರ್ನಿಂಗ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೇ 15ರಂದು ತಮ್ಮ ಜನ್ಮದಿನದ ಅಂಗವಾಗಿ ಯಾರಾದರೂ ನಗರದಲ್ಲಿ ಅಕ್ರಮವಾಗಿ ಬ್ಯಾನರ್ ಅಥವಾ ಫ್ಲೆಕ್ಸ್ ಅಳವಡಿಸಿದರೆ ಅವರ ವಿರುದ್ಧ ಸ್ವತಃ ತಾವೇ ಕಾನೂನು ಕ್ರಮ ಜರುಗಿಸುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ನಾನೇ ಕೇಸ್ ಹಾಕಿಸುತ್ತೇನೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, "ಮೇ 15ರಂದು ನನ್ನ ಹುಟ್ಟುಹಬ್ಬವಿದೆ ಎಂದು ಯಾರಾದರೂ ಬೆಂಗಳೂರಿನಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿಸಿದರೆ ಹುಷಾರ್! ಅವರ ಮೇಲೆ ನಾನೇ ಖುದ್ದಾಗಿ ಕೇಸ್ ಹಾಕಿಸುತ್ತೇನೆ. ನಾನು ಈಗಲೇ ಎಲ್ಲರಿಗೂ ಎಚ್ಚರಿಕೆ ನೀಡುತ್ತಿದ್ದೇನೆ, ಹುಟ್ಟುಹಬ್ಬದ ಹೆಸರಿನಲ್ಲಿ ಯಾರೂ ಜಾಹೀರಾತು ಪ್ರದರ್ಶಿಸಬಾರದು. ಅಭಿಮಾನ ಅಥವಾ ಪ್ರೀತಿಯ ಹೆಸರಿನಲ್ಲಿ ನಿಯಮ ಉಲ್ಲಂಘಿಸಿದರೆ ನಾನಂತೂ ಸುಮ್ಮನಿರಲು ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.

ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ಬೇಡ
ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆಗಳಲ್ಲಿ ಬ್ಯಾನರ್ ಕಟ್ಟುವುದು ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. "ಯಾರಿಗಾದರೂ ಜಾಹೀರಾತು ನೀಡಲೇಬೇಕು ಎಂದಿದ್ದರೆ ನಿಗದಿತ ಹಣ ಪಾವತಿಸಿ ಅಧಿಕೃತವಾಗಿ ಜಾಹೀರಾತು ನೀಡಲಿ. ಆದರೆ, ರಸ್ತೆಗಳನ್ನು ಬ್ಯಾನರ್‌ಗಳಿಂದ ಹಾಳು ಮಾಡಬಾರದು ಎಂಬುದು ನನ್ನ ವೈಯಕ್ತಿಕ ಮನವಿ. ಈ ಮೂಲಕ ನಗರದ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ" ಎಂದು ಅವರು ತಿಳಿಸಿದ್ದಾರೆ.
ಜಿಬಿಎ ಅಧಿಕಾರಿಗಳಿಗೆ ಸೂಚನೆ
ಈಗಾಗಲೇ ಜಿಬಿಎ ಎಲ್ಲಾ ವಲಯದ ಕಮಿಷನರ್‌ಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಡಿ.ಕೆ.ಶಿವಕುಮಾರ್, ನಿಯಮ ಬಾಹಿರವಾಗಿ ಬ್ಯಾನರ್ ಅಳವಡಿಸುವವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. "ಯಾರೇ ಆಗಿರಲಿ, ನಿಯಮ ಮೀರಿದರೆ ಮೊದಲು ಕೇಸ್ ದಾಖಲಿಸಿ ಮತ್ತು ಭಾರಿ ಮೊತ್ತದ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ" ಎಂದೂ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದಾದ್ಯಂತ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಮತ್ತು ಪೋಸ್ಟರ್‌ಗಳನ್ನು ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ, ರಾಜಕಾರಣಿಗಳ ಬ್ಯಾನರ್‌ಗಳು ನಗರದ ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡುವುದನ್ನು ತಡೆಯಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಪ್ರಕಾರ, ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವುದು ಅಪರಾಧ. ಆದೇಶ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದು ಮಾತ್ರವಲ್ಲದೆ, ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ ಎಂದು ಈ ಹಿಂದೆ ಬಿಬಿಎಂಪಿ ಪದೇ ಪದೇ ಎಚ್ಚರಿಕೆ ನೀಡಿತ್ತು.
ನಗರದಲ್ಲಿನ ಅಕ್ರಮ ಫ್ಲೆಕ್ಸ್‌ಗಳ ಕುರಿತು ಹೈಕೋರ್ಟ್ ಈಗಾಗಲೇ ಹಲವು ಬಾರಿ ಬಿಬಿಎಂಪಿಗೆ ಛೀಮಾರಿ ಹಾಕಿದೆ. ಆದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ರಾಜಧಾನಿಯ ಗೋಡೆಗಳು ಮತ್ತು ರಸ್ತೆಗಳು ಪೋಸ್ಟರ್‌ಗಳ ಕಾಟದಿಂದ ಮುಕ್ತವಾಗುತ್ತಿಲ್ಲ. ಇನ್ನಾದರೂ ಪಾಲಿಕೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ, ನಿಯಮ ಉಲ್ಲಂಘಿಸುವ ಪ್ರತಿಯೊಬ್ಬರ ಮೇಲೂ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವ ಕೆಲಸ ಮಾಡಬೇಕಿದೆ.












Click it and Unblock the Notifications