DK Shivakumar: ಉಳಿ ಏಟು ತಿಂದ ಶಿಲೆಯೇ ಮೂರ್ತಿಯಾಗುವುದು; ಡಿಕೆಶಿ ಬಗ್ಗೆ ನಾರಾಯಣಗೌಡರ ಮಾತಿನ ಅರ್ಥವೇನು?

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜನಸಾಮಾನ್ಯರ ಕಷ್ಟ, ಕುಂದು ಕೊರತೆ ಆಲಿಸಲು ಮಂಗಳವಾರ ದಿಢೀರನೇ ಯಶವಂತಪುರದ ಎಪಿಎಂಸಿಗೆ ಭೇಟಿ ನೀಡಿದರು. ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಮುಖ್ಯಮಂತ್ರಿ ಆದ ಬಳಿಕ ಅವರ ನಡೆ-ನುಡಿ, ಯೋಜನೆಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ. ಇದೀಗ ಎಪಿಎಂಸಿಗೆ ದಿಢೀರ್ ಭೇಟಿಯಿಂದ ಬಾಲ ಕಾರ್ಮಿಕರ ರಕ್ಷಣೆ ಆಗಿದೆ. ಅಲ್ಲದೇ ಬೆಂಗಳೂರಿಗೆ ಸಂಬಂಧಿಸಿದಂತೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲೂ ಸಾಕಷ್ಟು ಕೆಲಸಗಳು ಆಗುತ್ತಿವೆ. ಈ ಬಗ್ಗೆಯು ಜನ ಮಾತನಾಡುತ್ತಿದ್ದಾರೆ.

'ಇವತ್ತಿನ ರೀಲ್ಸ್ ಯುಗದಲ್ಲಿ ರಾಜಕಾರಣಿಗಳ ಕೃತಕ ಸೀನ್‌ಗಳನ್ನು ಸಾಕಷ್ಟು ನೋಡಿದ್ದೇವೆ. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಎಪಿಎಂಸಿ ಭೇಟಿಯ ದೃಶ್ಯಗಳಲ್ಲಿ ನನಗೆ ನಾಟಕೀಯತೆ ಕಾಣಿಸಲಿಲ್ಲ. ಜನರ ಸಮಸ್ಯೆಗಳನ್ನು ನೇರವಾಗಿ ತಿಳಿಯಬೇಕೆಂಬ ಪಕ್ವತೆ ಅವರಲ್ಲಿ ಕಾಣಿಸಿತು' ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಕುರಿತು ಒಂದಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.

DK Shivakumar

ಉಳಿ ಏಟು ತಿಂದ ಶಿಲೆ ಮೂರ್ತಿಯಾಗಲಿ

ಈ ಹಿಂದೆ ಬೆಂಗಳೂರು ಪಾದಾಚಾರಿ ಒತ್ತುವರಿ ತೆರವಿನ ಸಮಯದಲ್ಲಿ ಕೃಷ್ಣ ಬೈರೇಗೌಡ ಜೊತೆ ನಿಲ್ಲುವುದಾಗಿ ಕರೆವೇ ತಿಳಿಸಿತ್ತು. ಇದೊಂದು ಮಹತ್ವದ ಕಾರ್ಯ ಎಂದು ನಾರಾಯಣಗೌಡರು ಸ್ವಾಗತಿಸಿದ್ದರು. ಇದೀಗ ಸಿಎಂ ಡಿಕೆಶಿ ಅವರ ದಿಢೀರ್ ಎಪಿಎಂಸಿ ಭೇಟಿ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, 'ಉಳಿ ಏಟುಗಳನ್ನು ತಿಂದ ಶಿಲೆಯೇ ಮೂರ್ತಿಯಾಗುವುದಲ್ಲವೇ? ಶಿವಕುಮಾರ್ ಈಗ ಮೂರ್ತಿಯಾಗಲಿ' ಎಂದು ಆಶಿಸಿದ್ದಾರೆ.

ಮುಂದುವರಿದು, 'ಜನರ ಕಷ್ಟ ಅರಿಯಲು ರಾಜ ಮಾರುವೇಶ ಧರಿಸಿ ರಾಜ್ಯ ಪ್ರವಾಸ ಮಾಡುತ್ತಿದ್ದ ಎಂದು ನಾವು ಚಂದಾಮಾಮದ ಎಷ್ಟೋ ಕಥೆಗಳಲ್ಲಿ ಓದಿದ್ದೇವೆ. ರಾಜನಿಗೆ ತನ್ನ ರಾಜ್ಯದ ಜನರ ಕಷ್ಟಗಳನ್ನು ಹೇಳಲು ಮಂತ್ರಿಗಳು, ಸೈನಿಕರು, ಭಟ್ಟಂಗಿಗಳು ಇದ್ದರೂ, ಅವರು ಎಲ್ಲ ಸತ್ಯವನ್ನೂ ಹೇಳುವುದಿಲ್ಲ. ಅದಕ್ಕಾಗಿಯೇ ರಾಜ ಮಾರುವೇಷದಲ್ಲಿ ಜನರ ನಡುವೆ ಹೋಗಿ ಅವರ ಕಷ್ಟಗಳನ್ನು ಕಣ್ಣಾರೆ ನೋಡುತ್ತಿದ್ದ.

ನಾಡಪ್ರಭು ಕೆಂಪೇಗೌಡರ ಕುರಿತಾಗಿಯೂ ಇಂಥದ್ದೊಂದು ಐತಿಹ್ಯವಿದೆ. ದಳ್ಳಾಳಿಗಳಿಂದ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಿಳಿಯಲು ಅವರೇ ಮಾರುವೇಷದಲ್ಲಿ ಮಾರುಕಟ್ಟೆಗೆ ಹೋಗಿ ವಾಸ್ತವ ಅರಿತುಕೊಂಡಿದ್ದರು.

ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬೆಳಗ್ಗೆ 7 ಗಂಟೆಗೆ ದಿಢೀರ್ ಭೇಟಿ ನೀಡಿದರು. ರೈತರು, ವ್ಯಾಪಾರಿಗಳು, ಮಹಿಳಾ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಮಾತನಾಡಿದರು. ಬೆಳೆ, ಬೆಲೆ, ಕಮಿಷನ್, ಸಾಗಣೆ ವೆಚ್ಚ, ಉತ್ಪಾದನಾ ವೆಚ್ಚ, ತೂಕದಲ್ಲಿ ಅಕ್ರಮ ನಡೆಯುತ್ತಿದೆಯೇ ಎಂಬುದನ್ನೂ ವಿಚಾರಿಸಿದರು.

ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರೊಂದಿಗೆ ಮಾತನಾಡಿದ್ದು, ಸಣ್ಣ ಉಪಾಹಾರ ಅಂಗಡಿಯಲ್ಲಿ ಕೂಲಿ ಕಾರ್ಮಿಕರೊಂದಿಗೆ ಕುಳಿತು ಇಡ್ಲಿ ಸೇವಿಸಿದ್ದು ನನಗೆ ವಿಶೇಷವಾಗಿ ಗಮನ ಸೆಳೆಯಿತು' ಎಂದು ತಿಳಿಸಿದ್ದಾರೆ.

19 ಅಪ್ರಾಪ್ತರ ರಕ್ಷಣೆ

ಈ ಭೇಟಿಯ ವೇಳೆ ಅಪ್ರಾಪ್ತ ಮಕ್ಕಳನ್ನು ಎಪಿಎಂಸಿಯಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ದೂರುಗಳು ಗಮನಕ್ಕೆ ಬಂದವು. ಕೂಡಲೇ ಐದು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ 19 ಅಪ್ರಾಪ್ತರನ್ನು ರಕ್ಷಿಸಲಾಯಿತು. ಇವತ್ತಿನ ರೀಲ್ಸ್ ಯುಗದಲ್ಲಿ ರಾಜಕಾರಣಿಗಳ ಕೃತಕ ಸೀನ್‌ಗಳನ್ನು ಸಾಕಷ್ಟು ನೋಡಿದ್ದೇವೆ. ಆದರೆ ಎಪಿಎಂಸಿ ಭೇಟಿಯ ದೃಶ್ಯಗಳಲ್ಲಿ ನನಗೆ ನಾಟಕೀಯತೆ ಕಾಣಿಸಲಿಲ್ಲ. ಜನರ ಸಮಸ್ಯೆಗಳನ್ನು ನೇರವಾಗಿ ತಿಳಿಯಬೇಕೆಂಬ ಪಕ್ವತೆ ಕಾಣಿಸಿತು.

ಕಡಿಮೆ ಸಮಯ ಜನಸೇವೆಗೆ ಮುಡಿಪಾಗಿಡಲು ಅವಕಾಶ

ಶಿವಕುಮಾರ್ ಅವರಿಗೆ ಇರುವ ಅಧಿಕಾರದ ಅವಧಿ ಬಹಳ ಕಡಿಮೆ. ಮುಂದೆ ಏನಾಗುತ್ತದೆ ಎಂಬುದು ಊಹೆಯ ಮಾತು. ಇರುವ ಸಮಯವನ್ನು ಪ್ರಾಮಾಣಿಕವಾಗಿ ಜನಸೇವೆಗೆ ಮುಡುಪಾಗಿಡುವ ಅವಕಾಶ ಅವರ ಮುಂದಿದೆ. ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಟುಗಳನ್ನು ತಿಂದಿದ್ದಾರೆ. ಎಲ್ಲ ರೀತಿಯ ಏಳಿರಿತಗಳನ್ನು ಕಂಡಿದ್ದಾರೆ. ಉಳಿ ಏಟುಗಳನ್ನು ತಿಂದ ಶಿಲೆಯೇ ಮೂರ್ತಿಯಾಗುವುದಲ್ಲವೇ? ಶಿವಕುಮಾರ್ ಈಗ ಮೂರ್ತಿಯಾಗಲಿ ಎಂಬುದು ಗೆಳೆಯನಾಗಿ ನನ್ನ ಹಂಬಲ.

ರಾಜಶಾಹಿಯಲ್ಲಿ ರಾಜನ ಕಿವಿ ಚುಚ್ಚುವ ಮಂತ್ರಿಗಳಿದ್ದಂತೆ, ಪ್ರಜಾಪ್ರಭುತ್ವದಲ್ಲೂ ಅಧಿಕಾರಿಗಳು ಮತ್ತು ಆಪ್ತ ಬಳಗ ಮುಖ್ಯಮಂತ್ರಿಗೆ ಎಲ್ಲವನ್ನೂ ವಿವರಿಸುತ್ತಾರೆ. ಆದರೆ ಅವರು ಹೇಳುವುದೇ ಅಂತಿಮ ಸತ್ಯವಲ್ಲ. ಇದನ್ನು ಅರ್ಥ ಮಾಡಿಕೊಂಡವರಷ್ಟೇ ಜನರ ಬಳಿಗೆ ನಡೆಯುತ್ತಾರೆ.

ಎಲ್ಲ ಸ್ಥರಗಳ ಜನರ ಕಷ್ಟಕ್ಕೆ ಸ್ಪಂದಿಸಬೇಕು

ಮುಖ್ಯಮಂತ್ರಿಗಳು ಇದನ್ನು ಇಲ್ಲಿಗೆ ನಿಲ್ಲಿಸಬಾರದು. ಸಮಾಜದ ಎಲ್ಲ ಸ್ಥರಗಳ ಜನರ ಕಷ್ಟಗಳಿಗೂ ಕಿವಿಯಾಗಬೇಕು. ಕಾರ್ಪೊರೇಟ್ ಕುಳಗಳು, ಬಿಲ್ಡರ್‌ಗಳು, ಧನವಂತರು ಮಾತ್ರ ಸರ್ಕಾರವನ್ನು ಪ್ರಭಾವಿಸಿದರೆ ಅದು ಜನರ ಸರ್ಕಾರವಾಗುವುದಿಲ್ಲ. ಜನರ ನಡುವೆ ನಿಂತವರು ವಿಫಲ ರಾಜಕಾರಣಿಯಾಗಲು ಸಾಧ್ಯವೇ ಇಲ್ಲ. ಏಕೆಂದರೆ ಅಧಿಕಾರ ನೀಡುವವರು ಅಂತಿಮವಾಗಿ ಜನಸಾಮಾನ್ಯರೇ ಎಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+