ಐಟಿ ನನ್ನ ಬ್ಯಾಂಕ್ ಖಾತೆ ಜಪ್ತಿ ಮಾಡಿಲ್ಲ : ಡಿಕೆ ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 10: ಆದಾಯ ತೆರಿಗೆ ಅಧಿಕಾರಿಗಳು ನನ್ನ ಯಾವುದೇ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಸದಾಶಿವ ನಗರದಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ನನ್ನ ವೈಯಕ್ತಿಕ ಖಾತೆಗಳನ್ನಾಗಲಿ, ನನ್ನ ಸಂಸ್ಥೆಗೆ ಸೇರಿದ ಯಾವುದೇ ಖಾತೆಗಳನ್ನಾಗಲೀ ಐಟಿ ಅಧಿಕಾರಿಗಳು ಸೀಜ್ ಮಾಡಿಲ್ಲ," ಎಂದರು.

"ನನಗೆ ಹಲವಾರು ವೈಯಕ್ತಿಕ ಬ್ಯಾಂಕ್ ಖಾತೆಗಳಿವೆ. ಜತೆಗೆ ನನಗೆ ಸೇರಿದ ಸಂಸ್ಥೆಗಳದ್ದೂ ಹಲವಾರು ಖಾತೆಗಳಿವೆ. ಆದರೆ ಯಾವೊಂದು ಖಾತೆಗಳೂ ಇಲ್ಲಿಯವರೆಗೆ ಜಪ್ತಿಯಾಗಿಲ್ಲ. ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂಬ ವರದಿಗಳು ಸುಳ್ಳು," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ತಮ್ಮ ದೈನಂದಿನ ವ್ಯವಹಾರ, ಉದ್ಯಮಗಳು ಎಂದಿನಂತೆ ನಡೆಯುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.
ನೋಟಿಸ್ ನೀಡಿಲ್ಲ, ನಾನೇ ಹೋಗುತ್ತಿದ್ದೇನೆ
ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಲು ವಿಚಾರಣೆಗೆ ಹಾಜರಾಗುವಂತೆ ನನಗೆ ನೋಟಿಸ್ ನೀಡಿಲ್ಲ ಎಂದೂ ಡಿಕೆ ಶಿವಕುಮಾರ್ ಹೇಳಿದರು. ಆದರೆ, "ನಾನೇ ಖುದ್ದು ಹೋಗಿ ಒಂದಷ್ಟು ಸ್ಪಷ್ಟನೆಗಳನ್ನು ನೀಡಬೇಕಾಗಿದೆ. ಈ ಕಾರಣಕ್ಕೆ ಐಟಿ ಕಚೇರಿಗೆ ಇಂದು ತೆರಳುತ್ತಿದ್ದೇನೆ," ಎಂದು ಅವರು ತಮ್ಮ ಭೇಟಿಯ ಉದ್ದೇಶವನ್ನು ಬಹಿರಂಗಗೊಳಿಸಿದರು.











Click it and Unblock the Notifications