Property: ಬೆಂಗಳೂರಿನ ಈ ಭಾಗದಲ್ಲಿ ಆಸ್ತಿ ದರಗಳು ಎರಡು ಪಟ್ಟು ಏರಿಕೆ, ಚದರ ಅಡಿ ಬೆಲೆ ಎಷ್ಟಿದೆ?
ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ದುಬಾರಿ ನಗರವಾಗಿ ಬೆಳೆಯುತ್ತಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಕೂಡ ಹಿಂದೆಂದೂ ಕಾಣದ ಬೆಳವಣಿಗೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ಆಫೀಸ್ ಮಾರುಕಟ್ಟೆಯಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಐಟಿ ನಗರವು ಅನೇಕ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಕೂಡ ಹೊಂದಿದೆ. ಕೊಲಿಯರ್ಸ್ ಪ್ರಕಾರ ಸ್ಟಾರ್ಟ್ಅಪ್ ಹಬ್ ಎಂದೂ ಕರೆಯಲ್ಪಡುವ ನಗರದಲ್ಲಿ 2024ರಲ್ಲಿ 21.7 ಮಿಲಿಯನ್ ಚದರ ಅಡಿ ಕಚೇರಿಗಳನ್ನು ಗುತ್ತಿಗೆಗೆ ಪಡೆಯಲಾಗಿದೆ. ಇದು 2023ರಲ್ಲಿ ಇದ್ದ ಪ್ರಮಾಣಕ್ಕಿಂತ ಶೇ 35ಕ್ಕಿಂತ ಹೆಚ್ಚು ಎಂದು ವರದಿಯಾಗಿದೆ. ಇದರೊಂದಿಗೆ ಈ ಒಂದು ಏರಿಯಾದಲ್ಲೇ ಆಸ್ತಿ ಹಾಗೂ ವಸತಿ ದರಗಳು ಎರಡುಪಟ್ಟು ಹೆಚ್ಚಾಗುತ್ತಲೇ ಇದೆ. ಆ ಏರಿಯಾ ಹಾಗೂ ಅಲ್ಲಿರುವ ಆಸ್ತಿ ದರಗಳ ವಿವರ ಇಲ್ಲಿದೆ.
ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆಯಾದ ಪ್ರಾಪ್‌ಇಕ್ವಿಟಿ ಪ್ರಕಾರ 2025ರ ಮೊದಲ ಮೂರು ತಿಂಗಳಲ್ಲಿ ಸುಮಾರು 18,508 ಯೂನಿಟ್‌ಗಳ ಖರೀದಿಯಲ್ಲಿ ಶೇ 10ರಷ್ಟು ಏರಿಕೆ ಕಂಡಿದೆ. ಅದೇ ಅವಧಿಯಲ್ಲಿ ಪೂರೈಕೆ ಕೂಡ ಶೇ 17ರಷ್ಟು ಹೆಚ್ಚಾಗಿ 20,227 ಯೂನಿಟ್‌ಗಳಿಗೆ ತಲುಪಿದೆ ಎಂದು ಹೇಳಿದೆ. ನಗರದ ಪೂರ್ವ ಭಾಗದಲ್ಲಿರುವ ಮಾರುಕಟ್ಟೆಯಾದ ಗುಂಜೂರು ಭಾಗದಲ್ಲಿ ಆಸ್ತಿ ಮೌಲ್ಯ ಏರಿಕೆ ಕಾಣುತ್ತಲೇ ಇದೆ.

ಈ ಭಾಗದಲ್ಲಿ ಪ್ರೀಮಿಯಂ ಮನೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದ್ದು, 2020ರಿಂದ ಆಸ್ತಿ ಬೆಲೆಗಳು ಸುಮಾರು 2.5 ಪಟ್ಟು ಹೆಚ್ಚಾಗಿದೆ. ಪ್ರಾಪ್‌ಈಕ್ವಿಟಿ ಪ್ರಕಾರ ಈ ಗುಂಜೂರು ಭಾಗದಲ್ಲೇ ಸರಾಸರಿ ವಸತಿ ಬೆಲೆಗಳು 2020ರಲ್ಲಿ ಪ್ರತಿ ಚದರ ಅಡಿಗೆ 4,800 ರೂಪಾಯಿ ಇತ್ತು. ಆದರೆ 2024ರಲ್ಲಿ ಇಲ್ಲಿನ ಪ್ರತಿ ಚದರ ಅಡಿಗೆ ಭೂಮಿಯ ಬೆಲೆ 11,850 ರೂಪಾಯಿ ಎನ್ನಲಾಗಿದೆ. ಕೇವಲ ನಾಲ್ಕೇ ವರ್ಷದಲ್ಲಿ ಈ ಭಾಗದಲ್ಲಿ ಆಸ್ತಿ ಮೌಲ್ಯವು ಶೇಕಡಾ 146ರಷ್ಟು ಹೆಚ್ಚಾಗಿದೆ.
ಗುಂಜೂರಿನ ವಿಶೇಷತೆಗಳೇನು?
ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಹೇಳುವಂತೆ ನಗರದ ಪ್ರಮುಖ ರಿಯಲ್ ಎಸ್ಟೇಟ್ ಕೇಂದ್ರಗಳಾಗಿರುವ ವೈಟ್‌ಫೀಲ್ಡ್, ಬ್ರೂಕ್‌ಫೀಲ್ಡ್ ಮತ್ತು ಬೆಳ್ಳಂದೂರು ಸೇರಿದಂತೆ ಪ್ರಮುಖ ಕಚೇರಿ ಕೇಂದ್ರಗಳ ಸಮೀಪದಲ್ಲಿರುವುದರಿಂದ ಗುಂಜೂರು ಪ್ರದೇಶವು ಭಾರಿ ಪ್ರಯೋಜನವನ್ನು ಹೊಂದಿದೆ. ಗುಂಜೂರು ಪ್ರದೇಶ ನಗರೀಕರಣದ ಜೊತೆಗೆ ನೆಮ್ಮದಿಯ ವಾತಾವರಣ ನೀಡುವ ಕಾರಣದಿಂದಲೂ ಇಲ್ಲಿನ ಆಸ್ತಿ ಮಾರುಕಟ್ಟೆಯು ಚುರುಕಾಗಿದೆ ಎನ್ನಲಾಗಿದೆ.

ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ, ಔಟರ್ ರಿಂಗ್ ರೋಡ್, ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ವ್ಯಾಪಾರ ಕಾರಿಡಾರ್‌ಗಳಿಗೆ ಗುಂಜೂರು ಸಮೀಪದಲ್ಲೇ ಇದೆ. ಇದು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳಿಗೆ ಹತ್ತಿರದಲ್ಲೇ ಇದೆ. ಹಾಗಾಗಿ ಇದು ಮನೆ ಖರೀದಿದಾರರಿಗೆ ಸೂಕ್ತ ತಾಣವಾಗಿದೆ ಎಂದು ತಿಳಿದುಬಂದಿದೆ.
ಗುಂಜೂರು ಸದ್ಯ ಉತ್ತಮ ರಸ್ತೆ ಸಂಪರ್ಕ ಮಾತ್ರವಲ್ಲದೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಸನಿಹದಲ್ಲೇ ಇದೆ. ಪ್ರಮುಖ ಶಾಲೆಗಳು, ಮಣಿಪಾಲ್ ಆಸ್ಪತ್ರೆ ಮತ್ತು ಶ್ರೀ ಲಕ್ಷ್ಮಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಂತಹ ತುರ್ತು ಸೌಲಭ್ಯಗಳು, ಶಾಪಿಂಗ್ ಸ್ಥಳಗಳು, ಮೆಟ್ರೋ ವಿಸ್ತರಣಾ ಯೋಜನೆ, ರಾಜ್ಯ ಹೆದ್ದಾರಿ ಸೇರಿದಂತೆ ಈ ಪ್ರದೇಶದ ವಾಸಕ್ಕೆ ಯೋಗ್ಯವಾದ ಎಲ್ಲ ಸೌಕರ್ಯಗಳನ್ನು ಒಳಗೊಂಡಿದೆ. ಮೂಲಸೌಕರ್ಯ ಅಭಿವೃದ್ಧಿ, ಮುಂಬರುವ ಸಾರಿಗೆ ಸಂಪರ್ಕಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಗುಂಜೂರು ರಿಯಲ್ ಎಸ್ಟೇಟ್ ಹೂಡಿಕೆಯ ಹಬ್ ಆಗಿ ಬದಲಾಗುತ್ತಿದೆ.












Click it and Unblock the Notifications