ಕಾಟನ್ ಪೇಟೆ ರಸ್ತೆ ಅಭಿವೃದ್ಧಿ, 8 ತಿಂಗಳು ಸಂಚಾರವಿಲ್ಲ
ಬೆಂಗಳೂರು, ಫೆಬ್ರವರಿ9:ಬೆಂಗಳೂರಿನ ಕಾಟನ್‌ಪೇಟೆ ಮುಖ್ಯ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು ಎಂಟು ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ.
ಒಳಚರಂಡಿ ಕೊಳವೆ ಅಳವಡಿಕೆ ಮತ್ತು ಟೆಂಡರ್ ಶ್ಯೂರ್ ಕಾಮಗಾರಿ ಆರಂಭವಾಗಲಿದ್ದು, ಸುಮಾರು 8 ತಿಂಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗುತ್ತಿದೆ.

ಶುಕ್ರವಾರದಿಂದ ಕೆಲಸ ಆರಂಭವಾಗಿದೆ. ಗೂಡ್ಸ್ ಶೆಡ್ ರಸ್ತೆಯ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್ ವರೆಗೆ 1.5 ಕಿ.ಮೀ ಉದ್ದದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದ್ದಾರೆ.
ಬಿಬಿಎಂಪಿಯ 11.71 ಕೋಟಿ ರೂ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಗೂಡ್ಸ್ ಶೆಡ್ ರಸ್ತೆಯ ಜಂಕ್ಷನ್‌ನಿಂದ ಮೈಸೂರು ರಸ್ತೆಯವರೆಗೆ 600 ಮಿ.ಮೀ ವ್ಯಾಸದ ಒಳಚರಂಡಿ ಕೊಳವೆಯು ರಸ್ತೆ ಮಧ್ಯಭಾಗದಲ್ಲಿಯೇ ಹಾದು ಹೋಗಲಿದ್ದು, ಇದಕ್ಕಾಗಿ 30 ಲಕ್ಷ ರೂ ವೆಚ್ಚ ವೆಚ್ಚಮಾಡಲಾಗುತ್ತಿದೆ.
ರಸ್ತೆಯ ಎರಡೂ ಬದಿಯಲ್ಲಿ 300 ಮಿ.ಮೀ ವ್ಯಾಸದ ಒಳಚರಂಡಿ ಕೊಳವೆ, ಮತ್ತು 150 ಮಿ.ಮೀ ವ್ಯಾಸದ ಕುಡಿಯುವ ನೀರಿನ ಕೊಳವೆ, ಬೆಸ್ಕಾಂ, ಒಎಫ್‌ಸಿ ಕೇಬಲ್‌ಗಳಿಗೆ ಡಕ್ಟ್, ಮಳೆ ನೀರಿಗಾಗಿ 900 ಮಿ.ಮೀ ವ್ಯಾಸದ ಕೊಳವೆಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯುದ್ದಕ್ಕೂ ಎಲ್‌ಇಡಿ ದೀಪಗಳನ್ನು ಹಾಕಲಾಗುತ್ತಿದೆ.












Click it and Unblock the Notifications