ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು: ರೀಲ್ಸ್ ಸ್ಟಾರ್‌ಗೆ ಸಂಕಷ್ಟ
ಬೆಂಗಳೂರು, ಜೂನ್ 21: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ನಾಲಿಗೆ ಬಿಟ್ಟ ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು ದಾಖಲಾಗಿದೆ. ದರ್ಶನ್ ಅಭಿಮಾನಿ ಮಂಗಳ ಎಂಬಾಕೆಯ ವಿರುದ್ಧ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ದರ್ಶನ್ ಬಂಧನವಾಗುತ್ತಿದ್ದಂತೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮನಬಂದಂತೆ ಎಲ್ಲರಿಗೂ ಬೈಯುತ್ತಿದ್ದ ಮಂಗಳ, ಇತ್ತೀಚಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಯ ಹುಚ್ಚಾಟದ ವಿರುದ್ಧ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ದರ್ಶನ್ ಅಭಿಮಾನಿ ಮಂಗಳ ವಿರುದ್ಧ ದೂರು ನೀಡಿದ್ದಾರೆ. ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸುತ್ತೀಯಾ?. ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕ್ತೀಯಾ? ಎಂದು ಅವಾಚ್ಯ ಶಬ್ಧಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯನ್ನು ಮಹಿಳೆ ನಿಂದಿಸಿದ್ದಾಳೆ.
ಸುಮಲತಾರಿಂದ ಭಿಕ್ಷೆ ಹಾಕಿಸಿಕೊಂಡ ಮಗ ನೀನು ಎಂದು ಮಹಿಳೆ ಕೇಂದ್ರ ಸಚಿವರ ವಿರುದ್ಧ ಏಕವಚನ ಬಳಸಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಮಹಿಳಾ ಅಭಿಮಾನಿ ನಿಂದಿಸಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಮಹಿಳೆ ವಿರುದ್ಧ ಸಿಡಿದೆದ್ದ ಜೆಡಿಎಸ್ ಕಾರ್ಯಕರ್ತರು ದೂರು ನೀಡಿ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ.
ದರ್ಶನ್ ಅಭಿಮಾನಿ ವಿರುದ್ಧದ ದೂರಿನಲ್ಲಿ ಏನಿದೆ..?
ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಮಂಗಳ ಎಂಬ ಒಬ್ಬ ಮಹಿಳೆಯು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಕುರಿತು ಅತ್ಯಂತ ಕೀಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.

ಸದರಿ ಮಹಿಳೆಯು ದುರುದ್ದೇಶ ಪೂರ್ವಕವಾಗಿ ಕುಮಾರಸ್ವಾಮಿ ರವರನ್ನು ಅವಮಾನ ಮಾಡುವ ದೃಷ್ಟಿಯಿಂದಲೇ ಬೈದಿರುತ್ತಾರೆ. ಮಾನ್ಯ ಕುಮಾರಸ್ವಾಮಿರವರಿಗೂ ದರ್ಶನ್ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಆದಾಗ್ಯೂ ಅನಾವಶ್ಯಕವಾಗಿ ದರ್ಶನ್ ರವರ ಪ್ರಕರಣದಲ್ಲಿ ಕುಮಾರಸ್ವಾಮಿ ರವರ ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿರುವುದರಿಂದ ಜೆ.ಡಿ.ಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ಮುಖಂಡರಿಗೆ, ನಾಯಕರುಗಳಿಗೆ ಬಹಳ ನೋವಾಗಿರುತ್ತದೆ.
ಸದರಿ ವಿಡಿಯೋ ತುಂಬಾ ವೈರಲ್ ಆಗಿದ್ದು ಜೆ.ಡಿ.ಎಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅವಮಾನವಾಗಿರುತ್ತದೆ. ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ದೂರು ದಾಖಲಿಸಿದ್ದಾರೆ.












Click it and Unblock the Notifications