ಬೆಂಗಳೂರಲ್ಲಿ 'ಕಾಲರಾ' ಆರ್ಭಟ: ಬಿಬಿಎಂಪಿ ಹೈಅಲರ್ಟ್, ಕೈಗೊಂಡ ಕ್ರಮಗಳೇನು?
ಬೆಂಗಳೂರು, ಏಪ್ರಿಲ್ 05: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ (Cholera) ಕಾಯಿಲೆ ಉಲ್ಬಣಗೊಂಡಿದೆ. ಒಂದೆರಡು ಪ್ರಕರಣ ದಾಖಲಾಗುತ್ತದಂತೆ ಶಂಕಿತರ ಮಾದರಿ ಪರೀಕ್ಷೆಗೆ ಮಾಡಲಾಗುತ್ತಿದೆ. ಆಸ್ಪತ್ರೆ ದಾಖಲಾಗುವವರಿ ಸಂಖ್ಯೆ ಹೆಚ್ಚುತ್ತಿದ್ದಂತೆ ಬಿಬಿಎಂಪಿ ಹೈ ಅಲರ್ಟ್ ಆಗಿದೆ. ಕೆಲವು ಕ್ರಮ ಕೈಗೊಂಡು, ಬೆಂಗಳೂರಿಗರಿಗೆ ಹಲವು ಸಲಹೆಗಳನ್ನು ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾರ್ಚ್ 30 ಮಲ್ಲೇಶ್ವರ ವಾಸಿ 27 ವರ್ಷ ವಯಸ್ಸಿನ ಮಹಿಳೆಯು ಅತಿಸಾರಭೇದಿ ಮತ್ತು ವಾಂತಿ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರು. ಅವರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ವೈದ್ಯರು ಈ ಮಹಿಳೆಯಲ್ಲಿ ಕಾಲರಾ ಲಕ್ಷಣ ಇರುವುದು ಕಂಡು ಬಂದಿದೆ.

ಕೂಡಲೇ ವೈದ್ಯರು ಈ ಕುರಿತ ಪ್ರಾಥಮಿಕ ಮಾಹಿತಿಯನ್ನು ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಿದ್ದಾರೆ. ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟೀವ್ ವರದಿ ಬಂದಿದೆ. ನಂತರ ಪ್ರಯೋಗಾಲಯದ ಪರೀಕ್ಷೆಯಲ್ಲಿ (ಮಲ ಮಾದರಿ ಪರೀಕ್ಷೆ) ನಗೆಟೀವ್ ವರದಿ ಬಂದಿದೆ.
ಅವರೊಂದಿಗೆ ಸಂಪರ್ಕದಲ್ಲಿದ್ದ ಶಂಕಿತ ಮಹಿಳೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಯಾಣ, ಜನ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಹೊರಗಿನ ಆಹಾರ ಸೇವನೆಯನ್ನು ಮಾಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಲರಾ ಉಲ್ಬಣ: ಬಿಬಿಎಂಪಿಯ ಕಣ್ಗಾವಲು ಕಾರ್ಯ
* ಬಿಬಿಎಂಪಿ ಆರೋಗ್ಯ ತಂಡದಿಂದ ಶಂಕಿತ ಮಹಿಳೆಯು ವಾಸವಾಗಿರುವ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ಸಾರ್ವಜನಿಕರಿಗೆ ರೋಗ ಹರಡುವ ವಿಧಾನಗಳು, ನೈರ್ಮಲ್ಯದ ಪ್ರಾಮುಖ್ಯತೆ, ಶುದ್ಧ ನೀರಿನ ಬಳಕೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯ ಶಿಕ್ಷಣವನ್ನು ನೀಡಲಾಗಿರುತ್ತದೆ.

* ಸದರಿ 165 ಮನೆಗಳಲ್ಲಿ ಯಾವುದೇ ರೀತಿಯ ಕಾಲರಾರೋಗದ ಲಕ್ಷಣಗಳು ವರದಿ ಆಗಿಲ್ಲ. ಆತಂಕ ಬೇಡ ಎಂದಿದೆ.
* 10 ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗಾಗಿ Public Health Institute ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ.
ಬಿಬಿಎಂಪಿ ಮುಂಜಾಗ್ರತಾ ಕ್ರಮಗಳು
* ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು/ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
* ಎಲ್ಲಾ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಲಾಗಿದೆ.
* ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದಲ್ಲಿ ಸರ್ಕಾರ ನಿಗಧಿಪಡಿಸಿರುವ ಐ.ಹೆಚ್.ಐ.ಪಿ (IHIP) ತಂತ್ರಾಂಶದಲ್ಲಿ ಕಡ್ಡಾಯವಾಗಿ ವರದಿ ಮಾಡಲು ಸೂಚಿಸಲಾಗಿತ್ತದೆ.
* ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ PHI ಲ್ಯಾಬ್‌ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿದೆ.
* ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ORS ಕಾರ್ನರ್‌ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದು.
* ಕಾಲರಾ ರೋಗ ಹರುಡುವಿಕೆಯನ್ನು ನಿಭಾಯಿಸಲು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಸೂಚಿಸಿದ್ದಾರೆ.












Click it and Unblock the Notifications