Cholera: ಸಿಲಿಕಾನ್ ಸಿಟಿ ಜನರೇ ಎಚ್ಚರ: ಮತ್ತೆ ಶುರುವಾಯ್ತು ಕಾಲರಾ
ಬೆಂಗಳೂರು, ಏಪ್ರಿಲ್ 07: ರಾಜ್ಯದ ಜನ ಬರದಿಂದ ತತ್ತರಿಸಿದ್ದಾರೆ. ಒಂದೆಡೆ ನೀರಿನ ಸಮಸ್ಯೆ ಮತ್ತೊಂದೆಡೆ ಬಿಸಿಲಿನ ಝಳಕ್ಕೆ ಜನ ಹೈರಾಣಾಗಿ ಹೋಗುತ್ತಿದ್ದಾರೆ. ಈ ನಡುವೆಯೇ ಮತ್ತೊಂದು ಹೊಸ ಸಮಸ್ಯೆ ರಾಜ್ಯದಲ್ಲಿ ಆರಂಭವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಬೇಸಿಗೆಯ ಆರೋಗ್ಯ ಸಮಸ್ಯೆ ನಡುವೆಯೇ ಈಗ ಕಾಲರಾ ರೋಗ ಆತಂಕ ಹೆಚ್ಚಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಒಟ್ಟು ಹತ್ತಕ್ಕೂ ಹೆಚ್ಚು ಕಾಲರಾ ರೋಗ ಪ್ರಕರಣ ದಾಖಲಾಗಿದ್ದು, ಆರೋಗ್ಯ ಇಲಾಖೆಗೆ ಹೊಸ ತಲೆ ನೋವು ಆರಂಭವಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 6 ಕಾಲರಾ ಕೇಸ್ಗಳು ಪತ್ತೆಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಮತ್ತು ರಾಮನಗರ ಜಿಲ್ಲೆಯಲ್ಲಿ 1 ಕಾಲರಾ ರೋಗ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಅಸ್ವಸ್ಥಗೊಂಡಿದ್ದ 49 ವಿದ್ಯಾರ್ಥಿಗಳ ಪೈಕಿ ಇಬ್ಬರಲ್ಲಿ ಕಾಲರಾ ಪತ್ತೆ ಆಗಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ವಿದ್ಯಾರ್ಥಿನಿಯರು ವಾಂತಿಯಿಂದ ಅಸ್ವಸ್ಥಗೊಂಡ ಕಾರಣ ಕಾಲರಾ ಪರೀಕ್ಷೆಗೆ ಒಳಪಡಿಸಲಾಗಿತ್ತು. 49 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿನಿಯರ ಕಾಲರಾ ಕಲ್ಚರ್ ಟೆಸ್ಟ್ ವರದಿ ಕೈ ಸೇರಿದ್ದು, ಇದರಲ್ಲಿ ಇಬ್ಬರಿಗೆ ಕಾಲರಾ ಇರುವುದು ತಿಳಿದು ಬಂದಿದೆ. ಇನ್ನು ಉಳಿದವರ ಪರೀಕ್ಷೆ ವರದಿ ನಾಳೆ ಸಿಗಲಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ.
ಬಿಎಂಸಿ ಹಾಸ್ಟೆಲ್‌ನಲ್ಲೂ ಕಾಲರಾ ಭೀತಿ ಹೆಚ್ಚಾಗಿದ್ದು, ಕುಡಿಯುವ ನೀರಿನ ಸಮಸ್ಯೆ, ಸರಿಯಾದ ಊಟದ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆಯುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಹಾಸ್ಟೆಲ್, ಪಿಜಿಗಳಲ್ಲಿ ಇದೇ ರೀತಿ ನೀರಿನ ಸಮಸ್ಯೆ ಉಂಟಾಗಿದ್ದು, ಬೇಡಿಕೆಯನ್ನು ಪೂರೈಸಲು ಸಿಕ್ಕ ಸಿಕ್ಕ ಜಾಗದಿಂದ ತಂದು ನೀರು ಪೂರೈಸಲಾಗುತ್ತಿದೆ. ಇದರಿಂದ ಕಾಲರಾ ಹರಡುವ ಭೀತಿ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications