Chitra Santhe 2025: ಈ ಬಾರಿಯ ಬೆಂಗಳೂರು ಚಿತ್ರಸಂತೆ ಹೆಣ್ಣು ಮಗುವಿಗೆ ಸಮರ್ಪಣೆ
ಬೆಂಗಳೂರು, ಜನವರಿ 04: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಳಿಗಾಲದ ಜೊತೆಗೆ ಒಂದೊಂದೇ ಜಾತ್ರೆ, ಮೇಳ ಹಾಗೂ ಉತ್ಸವಗಳು ಆರಂಭವಾಗುತ್ತದೆ. ಇದೀಗ ಮತ್ತೊಂದು ದೊಡ್ಡ ಜಾತ್ರೆ ಅಥವಾ ಉತ್ಸವಕ್ಕೆ ಬೆಂಗಳೂರು ಸಜ್ಜಾಗಿದೆ. ಕಲಾವಿದರು, ಕಲಾ ಆಸಕ್ತರು ಒಂದೇ ಕಡೆ ಸೇರಿ ಸಂಭ್ರಮಿಸುವ ಚಿತ್ರಸಂತೆ ನಾಳೆ ಅಂದರೆ ಜನವರಿ 5ರಂದು ನಡೆಯಲಿದೆ.
ಬೆಂಗಳೂರು ನಗರದ ಕುಮಾರ ಕೃಪಾ ರಸ್ತೆಯಲ್ಲಿ ಜನವರಿ 5ರ ಭಾನುವಾರದಂದು 22ನೇ ಆವೃತ್ತಿಯ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ರವರೆಗೆ ನಡೆಯಲಿರುವ ಈ ಚಿತ್ರಸಂತೆಯಲ್ಲಿ 20 ರಾಜ್ಯಗಳ ಕಲಾವಿದರ ಕಲಾಕೃತಿಗಳು ಅನಾವರಣಗೊಳ್ಳಲಿದೆ. ಇನ್ನು ಈ ಚಿತ್ರಸಂತೆಯಲ್ಲಿ ಭಾಗವಹಿಸಲು 3,177 ಕಲಾವಿದರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಾರಿಯ ಚಿತ್ರಸಂತೆಯನ್ನು ವಿಶೇಷವಾಗಿ ಹೆಣ್ಣು ಮಗುವಿಗೆ ಸಮರ್ಪಣೆ ಮಾಡಲಾಗುತ್ತಿದೆ. ಅಂದರೆ 2025ನೇ ಸಾಲಿನ ಚಿತ್ರಸಂತೆಯ ಮೂಲಕ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಸೇರಿದಂತೆ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿನ ಮುಖದ 35 ಅಡಿ ಎತ್ತರದ ಕಲಾಕೃತಿಯೊಂದನ್ನು ರಚಿಸಲಾಗಿದೆ. ವಿಶೇಷವೆಂದರೆ ಈ ಕಲಾಕೃತಿಯನ್ನು ಸಂಪೂರ್ಣವಾಗಿ ರಟ್ಟಿನ ಹಾಳೆಗಳಿಂದ ರಚಿಸಲಾಗಿದೆ. ಈ ಕಲಾಕೃತಿಯ ಮೂಲಕ ಹೆಣ್ಣು ಮಗು ಶೋಷಣೆ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಲಾಗುತ್ತಿದೆ.
ಈ ಬಗ್ಗೆ ಶಿಲ್ಪಕಲೆ ವಿಭಾಗದ ಪ್ರೊ. ನಯನ ಜ್ಯೋತಿ ಬರ್ಮನ್ ಮಾತನಾಡಿದ್ದು, 'ಈ ಹೆಣ್ಣು ಮಗುವಿನ ಮುಖದ ಕಲಾಕೃತಿಯು ನಮ್ಮ ತಂಡ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುತ್ತದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಕೌಶಲ್ಯ ಮತ್ತು ಶ್ರಮದ ಫಲ ಈ ಕಲಾಕೃತಿ' ಎಂದು ತಿಳಿಸಿದ್ದಾರೆ. ಸುಮಾರು ಏಳು ದಿನಗಳ ಸತತ ಶ್ರಮದಿಂದ ಈ ಕಲಾಕೃತಿ ರಚಿಸಲಾಗಿದ್ದು, ಕಾರ್ಯಕ್ರಮ ಮುಗಿದ ಬಳಿಕ ಇದನ್ನು ವಿಸರ್ಜಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

2025ರ ಚಿತ್ರಸಂತೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಭಾಗಿಯಾಗಲಿದ್ದಾರೆ. ಸಾವಿರಾರು ಮಂದಿ ಕಲಾಸಕ್ತರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಚಿತ್ರಸಂತೆಗೆ ಬರುವವರಿಗಾಗಿ ಭಾನುವಾರ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ಬಿಎಂಟಿಸಿ ಬಸ್ಗಳ ಸೌಲಭ್ಯವಿದ್ದು, ಪ್ರತಿ 10 ನಿಮಿಷಗಳಿಗೊಮ್ಮೆ ಕುಮಾರ ಕೃಪಾ ರಸ್ತೆಗೆ ಸಂಚರಿಸಲಿವೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.












Click it and Unblock the Notifications