ವಂಚಕರ ದುಡ್ಡು ಮಾಡುವ ಸ್ಮಾರ್ಟ್ ಐಡಿಯಾಗೆ ಪೊಲೀಸರೇ ಸುಸ್ತು !
ಬೆಂಗಳೂರು, ಫೆಬ್ರವರಿ 04: ಅಡ್ಡ ದಾರಿಯಲ್ಲಿ ದುಡ್ಡು ಮಾಡೋಕೆ ಆನ್ ಲೈನ್ ನಲ್ಲಿ ನಾನಾ ಹಾದಿ ಕಂಡುಕೊಂಡಿದ್ದಾರೆ. ಬಹುತೇಕ ಎಲ್ಲಾ ವಂಚನೆಗಳು ಪೊಲೀಸರಿಗೆ ಗೊತ್ತು. ಆದರೆ ಇಲ್ಲೊಂದು ಗ್ಯಾಂಗ್ ಯಾರಿಗೂ ಗೊತ್ತಾಗದಂತೆ ಸ್ಮಾರ್ಟ್ ಐಡಿಯಾ ಉಪಯೋಗಿಸಿ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಹಾದಿ ಕಂಡು ಕೊಂಡಿದ್ದಾರೆ. ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಅವರ ಐಡಿಯಾ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪ್ಯಾಕರ್ಸ್ ಮೂವರ್ಸ್ ಸರ್ವೀಸ್ :
ಇತ್ತೀಚೆಗೆ ಎಲ್ಲದಕ್ಕೂ ಆನ್‌ಲೈನ್ ಸೇವೆ ಹುಟ್ಟಿಕೊಂಡಿದೆ. ಅದರಂತೆ ಯಾವುದೇ ಸರಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವ ಸೇವೆ ಒದಗಿಸಲು ಅನೇಕ ಕಂಸ್ಥೆಗಳು ಆನ್‌ಲೈನ್ ವೇದಿಕೆ ಕಲ್ಪಿಸಿವೆ. ಪ್ರತಿಷ್ಠಿತ ಲಾಜಿಸ್ಟಿಕ್ ಕಂಪನಿಗಳು ಕೂಡ ಆನ್‌ಲೈನ್ ನಲ್ಲಿ ಪ್ಯಾಕರ್ಸ್ ಅಂಡ್ ಮೂವರ್ಸ್ ಸೇವೆ ಒದಗಿಸಿವೆ. ಬಂಡವಾಳ ಮಾಡಿಕೊಂಡ ಅಂತರಾಜ್ಯ ಗ್ಯಾಂಗ್ ಜನರಿಂದ ಹಣ ವಸೂಲಿ ಮಾಡುತ್ತಿತ್ತು. ಆನ್‌ಲೈನ್ ಜಾಲ ತಾಣವೊಂದು ಸೃಷ್ಟಿಸಿ ಅದಕ್ಕೆ ಬೇಕಾದ ಬಿಲ್ ಗಳನ್ನು ಪ್ರತಿಷ್ಠಿತ ಕಂಪನಿಗಳಲ್ಲಿ ಸೃಷ್ಟಿಸಿ ಜನರಿಗೆ ಟೋಪಿ ಹಾಕುತ್ತಿದ್ದರು. ಕೆಲ ವರ್ಷಗಳಿಂದ ಮೋಸ ಮಾಡುತ್ತಿದ್ದ ಗ್ಯಾಂಗ್ ನ್ನು ವೈಟ್ ಫೀಲ್ಡ್ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ಯಾಕರ್ಸ್ ಮೂವರ್ಸ್ ವಂಚಕರ ಸೆರೆ:
ಪ್ಯಾಕರ್ಸ್ ಮತ್ತು ಮೂವರ್ಸ್ ಸೇವೆ ಒದಗಿಸುವುದಾಗಿ ನಂಬಿಸಿ ಆನ್‌ಲೈನ್ ನಲ್ಲಿ ಬುಕ್ ಮಾಡುವ ಗ್ರಾಹಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಹರ್ಯಾಣ ಮೂಲದ ಮೂವರು ವಂಚಕರನ್ನು ವೈಟ್‌ಫೀಲ್ಡ್ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರ್ಯಾಣ ಮೂಲದ ಮಾದನಾಯಕನಹಳ್ಳಿ ನಿವಾಸಿಗಳಾದ ಶಿವಕುಮಾರ್ ಅಲಿಯಾಸ್ ಶಿವಂ, ಸಂದೀಪ್ , ಪ್ರದೀಪ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ದೀಪಕ್ ಶರ್ಮಾ, ಟಿಂಕು, ರಾಕೇಶ್ ತಲೆ ಮರೆಸಿಕೊಂಡಿದ್ದಾರೆ.
ಪ್ಯಾಕರ್ಸ್ ಮತ್ತು ಮೂವರ್ಸ್ ಸೇವೆ ಒದಗಿಸುವ ಲಾಜೆಸ್ಟಿಕ್ ಕಾರ್ಟ್ ವೆಬ್ ತಾಣದಲ್ಲಿ ಗೃಹೋಪಯೋಗಿ ವಸ್ತು, ಮತ್ತು ವಾಹನಗಳನ್ನು ಸಾಗಣೆ ಮಾಡುವುದಾಗಿ ಪ್ರತಿಷ್ಠಿತ ವಿಆರ್ ಎಲ್ , ಅಗರ್ ವಾಲ್, ಗತಿ ಪ್ಯಾಕರ್ಸ್ ಅಂಡ್ ಮೂವರ್ಸ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡು ಆನ್‌ಲೈನ್ ನಲ್ಲಿ ಸಂಪರ್ಕಿಸುತ್ತಿದ್ದರು. ಪಾರ್ಸಲ್ ಮೂಲಕ ನಿಮ್ಮ ವಸ್ತುಗಳನ್ನು ಕಡಿಮೆ ಬೆಲೆಗೆ ಸಾಗಣೆ ಮಾಡುವುದಾಗಿ ಕಥೆ ಕಟ್ಟುತ್ತಿದ್ದರು. ಆನ್‌ಲೈನ್ ಮೂಲಕವೇ ಹಣ ಹಾಕಿಸಿಕೊಂಡು ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್ ಕೂಡ ರವಾನಿಸುತ್ತಿದ್ದರು. ಇದನ್ನು ನಂಬಿ ಗ್ರಾಹಕರು ಕಾರು ಮತ್ತು ದ್ವಿಚಕ್ರ ವಾಹನ ಸಾಗಣೆ ಮಾಡುವಂತೆ ಸೂಚಿಸಿ ಆರೋಪಿಗಳ ಖಾತೆಗೆ ಹಣ ಹಾಕುತ್ತಿದ್ದರು. ಹಣ ಪಡೆದ ಬಳಿಕ ವಾಹನ, ಸರಕು ಸಾಗಣೆ ಡೆಲಿವರಿ ಮಾಡದೇ ಮೋಸ ಮಾಡುತ್ತಿದ್ದರು.

ಸರಣಿ ದೂರುಗಳು:
ವೈಟ್ ಫೀಲ್ಡ್ ಪೊಲೀಸ್ ಠಾಣೆ ವಿಭಾಗದಲ್ಲಿ ಇತ್ತೀಚೆಗೆ ಸರಣಿ ವಂಚನೆ ದೂರುಗಳು ದಾಖಲಾಗುತ್ತಿದ್ದವು. ಒಂದೇ ತಿಂಗಳಲ್ಲಿ ಐದು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಡಿಸಿಪಿ ದೇವರಾಜ್ , ಪ್ಯಾಕರ್ಸ್ ಮತ್ತು ಮೂವರ್ಸ್ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಜಾಲದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಸೈಬರ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ನಾಲ್ಕು ಮಂದಿ ತಲೆ ಮರೆಸಿಕೊಂಡಿದ್ದಾರೆ. ಪ್ರಮುಖ ಆರೋಪಿ ದೀಪಕ್ ಶರ್ಮಾ ಗಾಗಿ ಶೋಧ ನಡೆಸಲಾಗುತ್ತಿದೆ. ಗ್ರಾಹಕರಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
Recommended Video

ನಗರದಾದ್ಯಂತ ಗ್ರಾಹಕರಿಗೆ ವಂಚಿಸಿದ್ದಾರೆ
ಬಂಧಿತ ಆರೋಪಿಗಳಿಂದ ಮೂರು ಮೊಬೈಲ್, ವಿಆರ್ಎಲ್, ಡಿಫೆನ್ಸ್ ಲಾಜೆಸ್ಟಿಕ್ ನ ನಕಲಿ ಬಿಲ್ ಬುಕ್ ಒಂದು ಕಾರು ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಬೆಂಗಳೂರು ನಗರದಾದ್ಯಂತ ಗ್ರಾಹಕರಿಗೆ ವಂಚಿಸಿದ್ದಾರೆ. ಬಂದ ಹಣವನ್ನು ಐಶರಾಮಿ ಜೀವನಕ್ಕೆ ಬಳಸುತ್ತಿದ್ದ ಸಂಗತಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಈ ಪ್ರಕರಣ ಪತ್ತೆ ಮಾಡಿದ ಪೊಲೀಸರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ಮಾಡಿದ್ದಾರೆ.












Click it and Unblock the Notifications