ಜ.24ಕ್ಕೆ ಕೇಬಲ್ ಆಪರೇಟರ್‌ಗಳ ಪ್ರತಿಭಟನೆ: ಬೆಂಗಳೂರಿಗೂ ಅನ್ವಯಿಸುತ್ತಾ?
ಬೆಂಗಳೂರು, ಜನವರಿ 17: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಜಾರಿಗೊಳಿಸುತ್ತಿರುವ ಗ್ರಾಹಕರೇ ತಮಗೆ ಬೇಕಾದ ಟಿವಿ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ಜ.24ರಂದು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದಕ್ಷಿಣ ಭಾರತಾದ್ಯಂತ ಕೇಬಲ್ ಟಿವಿ ಆಪರೇಟರ್ ಸಂಘಟನೆಗಳು ನಿರ್ಧಾರ ಮಾಡಿವೆ.
ಬೆಂಗಳೂರಿಗೂ ಇದು ಅನ್ವಯವಾಗಲಿದೆ. ಜನವರಿ 24ರಂದು ಎಲ್ಲಾ ಕೇಬಲ್ ಟಿವಿಗಳು ಬಂದ್ ಆಗಲಿವೆ. ಈ ಕುರಿತು ರಾಜ್ಯ ಕೇಬಲ್ ಟಿವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಅವರು ಈ ವಿಷಯ ತಿಳಿಸಿದ್ದು, ಗ್ರಾಹಕರು ಮತ್ತು ಕೇಬಲ್ ಆಪರೇಟರ್ ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್ ಟಿವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದಿದ್ದಾರೆ.
ಈ ನೂತನ ನೀತಿಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ, ಅಲ್ಲದೆ ಕೇಬಲ್ ಟಿವಿ ಆಪರೇಟರ್‌ಗಳು ಹಾಗೂ ಈ ಉದ್ಯಮ ನಂಬಿರುವ ಕೋಟ್ಯಂತರ ಕುಟುಂಬಗಳು ಬೀದಿಪಾಲಾಗಲಿವೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಈಗಿರುವ ಗ್ರಾಹಕರು ಮಾಸಿಕ 300 ರೂ ನಿಂದ 390 ರೂ ಕೊಟ್ಟು 400-450 ಚಾನೆಲ್‌ಗಳನ್ನು ನೋಡುತ್ತಿದ್ದಾರೆ. ಈ ನೂತನ ನೀತಿಯಿಂದ ಗ್ರರಾಹಕರು 130 ರೂ ಜೊತೆಗೆ ಶೇ.18ರಷ್ಟು ತೆರಿಗೆ ಮಾಸಿಕ 154 ರೂ ಪಾವತಿಸಿದರೆ 100 ಚಾನೆಲ್‌ಗಳನ್ನು ನೋಡಬಹುದು.
ನಂತರ ತಮಗಿಷ್ಟದ ಪ್ರತಿ ಚಾನೆಲ್‌ಗೂ ಹಣವನ್ನು ನೀಡಬೇಕಾಗುತ್ತದೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ. ಅಂತೆಯೇ ಕಡಿಮೆ ಹಣ ನೀಡಿ ಹೆಚ್ಚು ಚಾನೆಲ್ ನೋಡುವ ಬದಲು ಹೆಚ್ಚು ಹಣ ಕೊಟ್ಟು ಕಡಿಮೆ ಚಾನಲ್ ನೋಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ.












Click it and Unblock the Notifications