ಜಯಲಲಿತಾ 'ಅಮ್ಮಾ ಇಡ್ಲಿ' ಮೇಲೆ ಸಿ.ಎಂ.ಇಬ್ರಾಹಿಂ ಕಣ್ಣು
ಬೆಂಗಳೂರು, ಜ.11 : ತಮಿಳು ನಾಡು ಅಂದ ತಕ್ಷಣ ಥಟ್ ಅಂತ ನೆನಪಾಗುವುದು ಒಂದು ಕಾವೇರಿ ವಿವಾದ ಮತ್ತೊಂದು ಜಯಲಲಿತಾ ಹೆಸರು. ಹಗರಣದ ಹೆಸರಲ್ಲಿ ಅಧಿಕಾರದಿಂದ ಕೆಳಗಿಳಿದ್ರೂ, ಜಯಲಲಿತಾ ಹೆಸರು ಮಾತ್ರ ಕರ್ನಾಟಕದಲ್ಲಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಕಾರಣ ಅವರ ಜನಪರ ಯೋಚನೆಗಳು.
ಸಾಮಾನ್ಯ ಜನರಿಗೆ ಸಹಕಾರಿಯಾಗುವ ರೀತಿಯಲ್ಲಿ 'ಅಮ್ಮಾ' ಹೆಸರಲ್ಲಿ ಒಂದಷ್ಟು ಯೋಜನೆಗಳನ್ನ ಜಯಲಲಿತಾ ಜಾರಿಗೆ ತಂದಿದ್ದರು. 'ಅಮ್ಮಾ ಕ್ಯಾಂಟೀನ್', 'ಅಮ್ಮಾ ವಾಟರ್', 'ಅಮ್ಮಾ ಸಿಮೆಂಟ್' ಹೀಗೆ ಅಗ್ಗದ ದರದಲ್ಲಿ ಗುಣಮಟ್ಟದ ವಸ್ತುಗಳ ಲಭ್ಯತೆ, ಅಮ್ಮಾ ಯೋಜನೆಯ ಹಿಂದಿನ ಧ್ಯೇಯ.
ರಾಜಕೀಯವಾಗಿ 'ಅಮ್ಮಾ'ಳನ್ನ ಜರಿಯುವ ನಮ್ಮೂರ ರಾಜಕಾರಣಿಗಳಿಗೀಗ 'ಅಮ್ಮಾ'ಳ ಜನಪರ ಯೋಜನೆಗಳ ಮೇಲೆ ಕಣ್ಣು ಬಿದ್ದಹಾಗಿದೆ. ಜನಪ್ರಿಯ 'ಅಮ್ಮಾ ಇಡ್ಲಿ' ಮಾದರಿಯಲ್ಲಿ ಕೇವಲ ಐದು ರೂಪಾಯಿಗೆ 'ಅಣ್ಣಾ ಇಡ್ಲಿ' ಕಾರ್ಯಕ್ರಮವನ್ನ ಕರ್ನಾಟಕದಲ್ಲಿ ಜಾರಿ ತರಬೇಕೆನ್ನುವ ಚಿಂತನೆ ಶುರುವಾಗಿದೆ.

ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳಿಗೆ ಯೋಜನೆಯ ಬ್ಲೂ ಪ್ರಿಂಟ್ ಕೂಡ ರವಾನೆಯಾಗಿದೆ. ಅಸಲಿಗೆ ಈ ಪ್ರಸ್ತಾವನೆಯನ್ನ ಇಟ್ಟಿರುವುದು ಬೇರಾರೂ ಅಲ್ಲ, ಸಿ.ಎಂ ಆಪ್ತ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ.
ಸಿ.ಎಂ.ಇಬ್ರಾಹಿಂ ಸಲ್ಲಿಸಿರುವ ಪ್ರಸ್ತಾವನೆ ಪ್ರಕಾರ, ಮೊಸರನ್ನ, ಚಿತ್ರಾನ್ನ, ಇಡ್ಲಿ, ಪುಳಿಯೋಗರೆಯನ್ನ ನೀಡಲು ಶಿಫಾರಸ್ಸು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಈ ಯೋಜನೆ ಉಪಯುಕ್ತ ಅನ್ನುವ ಅಭಿಪ್ರಾಯ ಅವರದ್ದು. [ದಿಲ್ಲಿಯಲ್ಲಿ ಜಯಮ್ಮ ಮೆಸ್ ಆರಂಭ]
ಈಗಾಗಲೇ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆ ಕಲ್ಪಿಸಿ, ಎಲ್ಲರಿಂದಲೂ ಭೇಷ್ ಅನ್ನಿಸಿಕೊಂಡಿರುವ ಮುಖ್ಯಮಂತ್ರಿಗಳು ಈ ಯೋಜನೆಯನ್ನ ಜಾರಿಗೆ ತರಲಿ ಅನ್ನುವುದು ಹಲವರ ಆಶಯ. ಇದಕ್ಕೆ ಮುಖ್ಯಮಂತ್ರಿಗಳ ನಿರ್ಧಾರವೇನು ಅನ್ನುವುದು ಮುಂದಿನ ಬಜೆಟ್ ಹೊತ್ತಿಗೆ ಗೊತ್ತಾಗಲಿದೆ.












Click it and Unblock the Notifications