ಇಡ್ಲಿ, ಪೊಂಗಲ್ : ದಿಲ್ಲಿಯಲ್ಲಿ ಜಯಮ್ಮ ಮೆಸ್ ಆರಂಭ
ನವದೆಹಲಿ, ಜ.13: ಪೊಂಗಲ್ ಸ್ಪೆಷಲ್ ಕ್ಯಾಂಟೀನ್ ಗಳನ್ನು ಆರಂಭಿಸಿ ಕಳೆದೊಂದು ವರ್ಷದಿಂದ ಜನ ಮನ್ನಣೆ ಗಳಿಸಿದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಜನಪ್ರಿಯ ಯೋಜನೆಯನ್ನು ದಿಲ್ಲಿಗೂ ವಿಸ್ತರಿಸಿದ್ದಾರೆ. ಈ ಬಾರಿಯ ಸಂಕ್ರಾಂತಿ ಹಬ್ಬದಂದು ದೆಹಲಿಯ ತಮಿಳುನಾಡು ಭವನದಲ್ಲಿ ಅಮ್ಮ ಕ್ಯಾಂಟೀನ್ ಕಾರ್ಯ ನಿರ್ವಹಿಸಲಿದೆ.
ದಕ್ಷಿಣ ಭಾರತದ ದೈನಂದಿನ ತಿಂಡಿಗಳ ಸವಿಯನ್ನು ಉಂಡಿರುವ ದೆಹಲಿ ಜನತೆ ಈಗ ಅಮ್ಮ ಕ್ಯಾಂಟೀನ್ ಅನ್ನು ದೆಹಲಿಯಲ್ಲಿ ಜನಪ್ರಿಯತೆ ಗೊಳಿಸಿದ್ದಾರೆ. ಪೊಂಗಲ್ ಅಂಗವಾಗಿ ಮೂರು ದಿನಗಳ ಅಮ್ಮ ಕ್ಯಾಂಟೀನ್ ದೆಹಲಿಯ ತಮಿಳುನಾಡು ಭವನದಲ್ಲಿ ಈ ವ್ಯವಸ್ಥೆಯನ್ನು ಒದಗಿಸಲಾಗಿದೆ.
1 ರು ಗೆ ಇಡ್ಲಿ ಜತೆಗೆ ಮೊಸರನ್ನ(ರು 3 ಪ್ರತಿ ಪ್ಲೇಟ್) ಚಿತ್ರಾನ್ನ, ಇನ್ನಿತರ ತಿಂಡಿಗಳು ಹಾಗೂ ಉತ್ತರ ಭಾರತದ ಕಿಚಡಿ (5 ರು ನಂತೆ ಲಭ್ಯ). ರಾತ್ರಿ 8 ಗಂಟೆಯೊಳಗೆ ಎಲ್ಲಾ ತಿಂಡಿಗಳು ಖಾಲಿಯಾಗುತ್ತಿದ್ದು, ಭಾರಿ ಬೇಡಿಕೆ ಉಂಟಾಗಿರುವುದರಿಂದ ಸಮಯ ವಿಸ್ತರಣೆಗೆ ಜನತೆ ಮನವಿ ಮಾಡಿಕೊಂಡಿದ್ದಾರಂತೆ.
ಸುಮಾರು 7,200 ರು ಗಳಿಕೆಯೊಂದಿಗೆ ಅಮ್ಮ ಕ್ಯಾಂಟೀನ್ ಎರಡನೇ ದಿನಕ್ಕೆ ತಯಾರಿ ನಡೆಸಿದೆ. ಮಂಗಳವಾರ ಈ ಸೌಲಭ್ಯ ಜನತೆಗೆ ಲಭ್ಯವಿರಲಿದೆ. ನಂತರ ಸಂಕ್ರಾಂತಿ ಹಬ್ಬ ಆಚರಣೆ ನಡೆಯಲಿದೆ. ನಮ್ಮ ಕರ್ನಾಟಕ ಭವನದಲ್ಲಿ ಸಂಕ್ರಾಂತಿ ಆಚರಣೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮೂರು ದಿನಗಳ ಕಾಲ ತೆರೆದಿರುವ ಈ ಸಂಕ್ರಾಂತಿ ಸ್ಪೆಷಲ್ ಅಮ್ಮ ಕ್ಯಾಂಟೀನ್ ಇನ್ಮುಂದೆ ತಮಿಳುನಾಡು ಭವನದಲ್ಲಿ ಹೀಗೆ ಮುಂದುವರೆಸುವಂತೆ ಬೇಡಿಕೆ ಬಂದಿದೆ. ಹೀಗಾಗಿ ಈ ಯೋಜನೆಯನ್ನು ಮುಂದುವರೆಸುವ ಸಾಧ್ಯತೆ ಹೆಚ್ಚಿದೆ ಎಂದು ನಮ್ಮ ಚೆನ್ನೈ ಬಾತ್ಮೀದಾರರು ಹೇಳಿದ್ದಾರೆ.

ತಮಿಳುನಾಡು ಸರ್ಕಾರದ ಚೆನ್ನೈ ನಗರ ಪಾಲಿಕೆ ವತಿಯಿಂದ ಅಮ್ಮ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. 1 ರು.ಗೆ ಇಡ್ಲಿ, 3 ರು. ಮೊಸರನ್ನ ಹಾಗೂ 5 ರು. ಗೆ ಅನ್ನ ಸಂಬಾರ್ ಸಿಗುವಂತೆ ಮಾಡಲಾಗಿದೆ. ಮೊದಲಿಗೆ ಸುಮಾರು 1000 ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗಿತ್ತು. ನಂತರ ಚೆನ್ನೈ ಅಲ್ಲದೆ ಇತರೆ ನಗರಗಳಿಗೂ ಯೋಜನೆ ವಿಸ್ತರಣೆಗೊಂಡಿತು. 'ಜನರ ಹೊಟ್ಟೆ ತುಂಬಿದರೆ ಮಾತ್ರ ಸರ್ಕಾರ ಉಳಿಯಲು ಸಾಧ್ಯ' ಎಂದು ಯೋಜನೆ ಆರಂಭದಲ್ಲಿ ಮುಖ್ಯಮಂತ್ರಿ ಜೆ. ಜಯಲಲಿತಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.[ಅಮ್ಮಾ ಮಿನರಲ್ ವಾಟರ್]












Click it and Unblock the Notifications