Bengaluru: ಕುಡಿಯುವ ನೀರನ್ನು ಈ ಕೆಲಸಗಳಿಗೆ ಬಳಸಿದ್ರೆ 5,000 ರೂ ದಂಡ!
ಬೆಂಗಳೂರು, ಮಾರ್ಚ್ 09: ಬೆಂಗಳೂರಿನಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೂ ಜನ ಪರದಾಡುವಂತಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜನರಿಗೆ ಅಗತ್ಯವಿರುವ ನೀರು ಪೂರೈಸಲು ಹರಸಾಹಸಪಡುತ್ತಿದೆ. ಈ ಮಧ್ಯೆ ಕೆಲವರು ಸಿಕ್ಕ ನೀರನ್ನೇ ಬೇಕಾಬಿಟ್ಟಿ ಬಳಸುತ್ತಿದ್ದಾರೆ.
ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಡಬ್ಲೂಎಸ್‌ಎಸ್‌ಬಿ ನಗರದ ಅನೇಕ ಕಡೆಗೆ ನೀರು ಪೂರೈಕೆ ಮಾಡುತ್ತಿದೆ. ಕೆಲವು ಭಾಗಗಳಲ್ಲಿ ಈ ನೀರನ್ನು ಜನ ಮನಬಂದಂತೆ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀರು ಪೋಲಾಗುವುದನ್ನ ತಡೆಯಲು ಬಿಡಬ್ಲೂಎಸ್‌ಎಸ್‌ಬಿ ದಂಡ ವಿಧಿಸಲು ಮುಂದಾಗಿದೆ.

ಕುಡಿಯಲು ಪೂರೈಸುತ್ತಿರು ನೀರನ್ನು ಹೇಗೆ ಬಳಸಬೇಕು, ಯಾವುದಕ್ಕೆಲ್ಲಾ ಬಳಸಬಾರದು ಎನ್ನುವ ಸೂಚನೆಯನ್ನು ಬಿಡಬ್ಲೂಎಸ್‌ಎಸ್‌ಬಿ ನೀಡಿದ್ದು, ಈ ನಿಯಮಗಳನ್ನು ಉಲ್ಲಂಘಿಸುವವ ವಿರುದ್ಧ ಬರೋಬ್ಬರಿ ಐದು ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಬಿಡಬ್ಲೂಎಸ್‌ಎಸ್‌ಬಿ ನೀಡಿರುವ ಸೂಚನೆ ಏನು..?
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಆದೇಶಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಉದ್ದೇಶಗಳಿಗೆ ಬಳಸಲು ಈ ಮೂಲಕ ನೀಷೇದಿಸಲಾಗಿದೆ.
1. ವಾಹನಗಳ ಸ್ವಚ್ಚತೆಗೆ
2. ಕೈದೋಟಕ್ಕೆ
3. ಕಟ್ಟಡ ನಿರ್ಮಾಣಕ್ಕೆ
4. ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
5. ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ
6. ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ
ಮೇಲ್ಕಂಡ ನಿಷೇದ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡುವವರ ವಿರುದ್ದ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ ರೂ. 5000/- ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ ರೂ.5000/- ಜೊತೆಗೆ ಹೆಚ್ಚುವರಿಯಾಗಿ ರೂ.500/- ಪ್ರತಿದಿನದಂತೆ ದಂಡ ಹಾಕಲಾಗುವುದು. ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದು ಬಿಡಬ್ಲೂಎಸ್‌ಎಸ್‌ಬಿ ತನ್ನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications