ಯಲಹಂಕ ಏರ್ ಶೋಗೆ ವಿಶೇಷ ಬಿಎಂಟಿಸಿ ಬಸ್ ವ್ಯವಸ್ಥೆ
ಬೆಂಗಳೂರು, ಫೆ.17 : 2015ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ಸಜ್ಜಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಏರೋ ಇಂಡಿಯಾ ಪ್ರದರ್ಶನಕ್ಕೆ ತೆರಳುವ ಜನರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.
ಯಲಹಂಕ ವಾಯುನೆಲೆಯಲ್ಲಿ ಫೆ.18ರಿಂದ 22ರವರೆಗೆ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಬಿಎಂಟಿಸಿ ಬಸ್ಸುಗಳು ಯಲಹಂಕ ವಾಯುನೆಲೆಗೆ ಸಂಚರಿಸಲಿವೆ. [ಏರೋ ಇಂಡಿಯಾ: ಬಳ್ಳಾರಿ ರಸ್ತೆ ಸಂಚಾರದಲ್ಲಿ ಬದಲಾವಣೆ]

ಎಲ್ಲಿಂದ ವಿಶೇಷ ಬಸ್ ಸೇವೆ : ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಎಂ.ಜಿ.ರಸ್ತೆಯ ಮಾಣಿಕ್ ಷಾ ಪರೇಡ್ ಮೈದಾನ, ಹೆಬ್ಬಾಳ ಜಂಕ್ಷನ್, ಯಲಹಂಕ, ಬನಶಂಕರಿ, ಕೆಂಗೇರಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಬಿಎಂಟಿಸಿ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ. [ಏರೋ ಇಂಡಿಯಾಕ್ಕೆ 3 ಲಕ್ಷ ಜನರ ನಿರೀಕ್ಷೆ]
ಜನರು ಹೆಚ್ಚಾಗಿದ್ದರೆ ಯಶವಂತಪುರ, ಜಯನಗರ, ಕೋರಮಂಗಲ ಮುಂತಾದ ಟಿಟಿಎಂಸಿ ನಿಲ್ದಾಣಗಳಿಂದಲೂ ಬಸ್‌ಗಳು ಸಂಚಾರ ನಡೆಸಲಿವೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಾಗುವ ವಾಯು ವಜ್ರ ಬಸ್ಸುಗಳು ಸಹ ಹುಣಸೇಮಾರನಹಳ್ಳಿ ಬಳಿ ನಿಲುಗಡೆಗೊಳ್ಳಲಿವೆ. [ಏರೋ ಇಂಡಿಯಾ ವೆಬ್ ಸೈಟ್]
ವಿಶೇಷ ಬಸ್ಸುಗಳ ದರ 25ರೂ. ನಿಂದ 50 ರೂ. ತನಕ ಇದೆ. ಯಶವಂತಪುರ, ಶಾಂತಿನಗರ, ಜಯನಗರ, ಕೋರಮಂಗಲ ಬಸ್ ನಿಲ್ದಾಣಗಳಲ್ಲಿ ವಾಹನಗಳನ್ನು ನಿಲ್ಲಿಸಿ ಬಿಎಂಟಿಸಿ ಬಸ್ಸುಗಳ ಮೂಲಕ ಯಲಹಂಕ ವಾಯುನೆಲೆಗೆ ತೆರಳಬಹುದಾಗಿದೆ.












Click it and Unblock the Notifications