BMTC Student Pass: ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ಯಾವಾಗ? ಎಲ್ಲಿ? ವಿವರ ತಿಳಿಯಿರಿ
ಬೆಂಗಳೂರು, ಮೇ 29: 2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭವಾಗಿದ್ದು, ಕಾಲೇಜುಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಸ್ಟುಡೆಂಟ್ ಬಸ್ ಪಾಸ್ ಅಂದರೆ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿದ್ಧತೆ ನಡೆಸಿದೆ.
ವಿದ್ಯಾರ್ಥಿಗಳಿಗೆ ವಾರ್ಷಿಕ ಬಸ್ ಪಾಸ್ ನೀಡಲು ಬಿಎಂಟಿಸಿ ಇಂದಿನಿಂದ (ಮೇ 29) ಬುಧವಾರ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಹಾಗೂ ಜೂನ್ 1ರಿಂದ ಬಸ್ ಪಾಸ್‌ಗಳ ವಿತರಣೆ ಆರಂಭವಾಗಲಿದೆ ಎಂದು ಬಿಎಂಟಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು https://sevasindhu.karnataka.gov.in ನಿಂದ ಸಹ ಬಸ್ ಪಾಸ್ಗೆ ಅರ್ಜಿಗಳನ್ನು ಪಡೆದು ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ರಾಜ್ಯದಲ್ಲಿ ಶಾಶ್ವತ ನಿವಾಸವನ್ನು ಹೊಂದಿರುವ ವಿದ್ಯಾರ್ಥಿಗಳು ರಿಯಾಯಿತಿ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ವಿದ್ಯಾರ್ಥಿಯ ಭಾವಚಿತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಹಾಗೂ ಮೊಬೈಲ್ ನಂಬರ್‌ಅನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವಿದ್ಯಾರ್ಥಿಗಳು ನೀಡಬೇಕಾಗುತ್ತದೆ.
ಬಿಎಂಟಿಸಿ ಬಸ್ ಪಾಸ್ ದೊರೆಯುವ ಸ್ಥಳಗಳ ವಿವರ
ಇಂದಿನಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದ್ದು, ಜೂನ್ 1ರಿಂದ ಬಸ್ ಪಾಸ್‌ಗಳ ವಿತರಣೆ ಶುರುವಾಗಲಿದೆ. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಶಾಂತಿನಗರ ಟಿಟಿಎಂಸಿ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19, ಆನೇಕಲ್ ಬಸ್ ನಿಲ್ದಾಣ, ಕೆಂಗೇರಿ ಟಿಟಿಎಂಸಿ ಹಾಗೂ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಪಾಸ್‌ಗಳು ದೊರೆಯಲಿದ್ದು, ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಸಹ ಬಸ್ ಪಾಸ್ ಸಿಗಲಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಾಲ್ ಸೆಂಟರ್ ಸಂಖ್ಯೆ 080-22483777 ಸಂಪರ್ಕಿಸಿ ಅಥವಾ ಬಿಎಂಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications