ಸಬ್ಸಿಡಿ ಗೊಂದಲ: ಗೋಲ್ ಸ್ಟೋನ್ ಒಪ್ಪಂದಕ್ಕೆ ಬಿಎಂಟಿಸಿ ತಡೆ
ಬೆಂಗಳೂರು, ಏಪ್ರಿಲ್ 13: ನಗರದ ರಸ್ತೆಯಲ್ಲಿ 6 ತಿಂಗಳೊಳಗೆ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದ ಬಿಎಂಟಿಸಿ, ಇದೀಗ ಸಬ್ಸಿಡಿ ಗೊಂದಲದಲ್ಲಿ ಸಿಲುಕಿದೆ.
ಈ ಕಾರಣದಿಂದಾಗಿ ಎಲೆಕ್ಟ್ರಿಕ್ ಬಸ್ ಗುತ್ತಿಗೆ ಪಡೆದುಕೊಂಡಿದ್ದ ಗೋಲ್ಡ್ ಸ್ಟೋನ್ ಕಂಪನಿ ಜತೆಗಿನ ಒಪ್ಪಂದವನ್ನು ನಿಗಮ ತಾತ್ಕಾಲಿಕವಾಗಿ ತಡೆಹಿಡಿದಿದೆ. ಹೊಸ ಬಸ್ ಖರೀದಿಗೆ 2-3 ಕೋಟಿ ರೂ. ವೆಚ್ಚವಾಗುವ ಕಾರಣದಿಂದಾಗಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ನಿರ್ಧರಿಸಿತ್ತು.
ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ಆಹ್ವಾನಿಸಿದ್ದ ಟೆಂಡರ್ ನಲ್ಲಿ ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿ ಕನಿಷ್ಟ ಬಿಡ್ ಸಲ್ಲಿಸಿತ್ತು. ಫಾಸ್ಟರ್ ಅಡಾಪ್ಷನ್ ಅಂಡ್ ಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅನುದಾನದಡಿ ಪ್ರತಿ ಬಸ್ ಗೆ 1 ಕೋಟಿ ರೂ. ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದ ಕಾರಣ ಮೊದಲ ಹಂತದಲ್ಲಿ 40 ಬಸ್ ಪಡೆಯಲು ಬಿಎಂಟಿಸಿ ನಿರ್ಧರಿಸಿತ್ತು.

ಆದರೆ ಇತ್ತೀಚೆಗೆ ಹೊಸ ಬಸ್ ಖರೀದಿಸಿದರಷ್ಟೇ ಸಬ್ಸಿಡಿ ನೀಡುವುದಾಗಿ ಕೇಂದ್ರ ನಿರ್ಧಾರ ಬದಲಿಸಿದೆ. ಇದರಿಂದಾಗಿ ನಿಗಮ ಗೊಂದಲಕ್ಕೆ ಸಿಲುಕಿದ್ದು, ಕೇಂದ್ರಕ್ಕೆ ಪತ್ರ ರವಾನಿಸಿದೆ. ದೇಶದಲ್ಲೇ ಅತಿ ಕಡಿಮೆ ಬೆಲೆಗೆ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿ ಕುರಿತು ಮರು ಪರಿಶೀಲಿಸುವಂತೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ.












Click it and Unblock the Notifications