BMTC Metro Feeder bus: ಪ್ರತಿನಿತ್ಯ ಎಷ್ಟು ಸಾವಿರ ಜನ ಸಂಚಾರ ಮಾಡ್ತಾರೆ ಗೊತ್ತಾ?-ಅಂಕಿಅಂಶಗಳ ವಿವರ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 11: ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗಿನ ಸಂಪೂರ್ಣ ನೇರಳೆ ಮಾರ್ಗದ ಮೆಟ್ರೋ ಉದ್ಘಾಟನೆಯಾದ ನಂತರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ವಿಸ್ತರಿಸಿದೆ. ಇದೀಗ 134 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಫೀಡರ್ ಬಸ್‌ಗಳ ಸೇವೆಯನ್ನು ಪ್ರತಿದಿನ 76,468 ಪ್ರಯಾಣಿಕರು ಪಡೆಯುತ್ತಾರೆ ಎಂದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬೆಳಗಾವಿಯಲ್ಲಿ ಮಾಹಿತಿ ನೀಡಿದರು.
ಪ್ರತಿನಿತ್ಯ ಫೀಡರ್ ಬಸ್‌ಗಳು 2,012 ಟ್ರಿಪ್‌ಗಳು ಕಾರ್ಯನಿರ್ವಹಿಸುತ್ತವೆ. 134 ಮೆಟ್ರೋ ಫೀಡರ್ ಬಸ್‌ಗಳಲ್ಲಿ, MF-5 ಮಾರ್ಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಸಂಚರಿಸಿ ದಾಖಲೆಯಾಗಿದೆ. 13,949 ಪ್ರಯಾಣಿಕರು ಪ್ರತಿದಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣಿಸುತ್ತಾರೆ ಎಂದು ತಿಳಿಸಿದರು.

ವಿಜಯನಗರ ಮತ್ತು ಬನಶಂಕರಿ ಟಿಟಿಎಂಸಿ (MF-12) ಮೆಟ್ರೋ ನಿಲ್ದಾಣಗಳ ನಡುವೆ 7,711 ಪ್ರಯಾಣಿಕರು ಪ್ರಯಾಣಿಸುತ್ತಾರೆ. ಕೆಆರ್ ಪುರಂ ಮೆಟ್ರೊ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 4,824, ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಬಿಟಿಎಂ ಲೇಔಟ್ (ಕುವೆಂಪುನಗರ) ಸಂಪರ್ಕಿಸುವ ಫೀಡರ್ ಬಸ್‌ನಲ್ಲಿ ಪ್ರತಿದಿನ 221 ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ.
ಪ್ರತಿದಿನ ಸುಮಾರು 40 ಲಕ್ಷ ಪ್ರಯಾಣಿಕರು ಬಿಎಂಟಿಸಿಯನ್ನು ಬಳಸುತ್ತಾರೆ ಮತ್ತು ಮೆಟ್ರೋ ಪ್ರಯಾಣಿಕರ ಸಂಖ್ಯೆ 7 ಲಕ್ಷವನ್ನು ದಾಟಿದ್ದು, ಇದಕ್ಕೆ ಹೋಲಿಸಿದರೆ 76,000 ದೈನಂದಿನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣ ಆಟೋಗಳು, ಕ್ಯಾಬ್‌ಗಳು ಮತ್ತು ಇತರ ಸೇವೆಗಳನ್ನು ಪ್ರಯಾಣಿಕರು ಪಡೆಯುತ್ತಾರೆ ಎಂದು ತಜ್ಞರ ಮಾಹಿತಿಯಾಗಿದೆ.
ಯಾವ್ಯಾವ ನಿಗಮಗಳಿಗೆ ಎಷ್ಟು ಹಣ ಬಿಡುಗಡೆ?
ಶಕ್ತಿ ಯೋಜನೆಯ ಭಾಗವಾಗಿ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಿದ ಮೊತ್ತದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಜೂನ್ 11 ಮತ್ತು ನವೆಂಬರ್ ನಡುವೆ ಸರ್ಕಾರವು 1669.45 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಅಂಕಿ ಅಂಶಗಳ ವಿವರ ನೀಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 625 ಕೋಟಿ, ಬಿಎಂಟಿಸಿಗೆ 294 ಕೋಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 417 ಕೋಟಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಗೆ 332 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ಈ ವರ್ಷದ ಜೂನ್ 11 ಮತ್ತು ಡಿಸೆಂಬರ್ 6 ರ ನಡುವೆ 109 ಕೋಟಿ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು ನಿರ್ದಿಷ್ಟ ಒತ್ತು ನೀಡುವ ಮೂಲಕ ಫೀಡರ್ ಬಸ್ ಸೇವೆಗಳ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಪ್ರಸ್ತುತ, ಮತ್ತೆ ಎಸಿ ಮತ್ತು ನಾನ್ ಎಸಿ ಎರಡನ್ನೂ ಒಳಗೊಂಡಿರುವ 38 ಬಸ್‌ಗಳು ನಾಲ್ಕು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಮಾರ್ಗಗಳ ಪ್ರಾಥಮಿಕ ಗುರಿಯು ಮೆಟ್ರೋ ಪ್ರವೇಶವನ್ನು ಹೆಚ್ಚಿಸುವುದು, ವಿಶೇಷವಾಗಿ ಹೊರ ವರ್ತುಲ ರಸ್ತೆ ಮತ್ತು ನಗರದ ದೂರದ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಹಾಯ ಆಗಲಿದೆ ಎಂದು ತಿಳಿಸಿದರು.












Click it and Unblock the Notifications