Bengaluru Airport: ಏರ್‌ಪೋರ್ಟ್ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್‌ನ್ಯೂಸ್: ಬರಲಿದೆ ಹೊಸ ಎಸಿ ಇ - ಬಸ್!
ಬೆಂಗಳೂರಿನ ಏರ್‌ಪೋರ್ಟ್ ಪ್ರಯಾಣಿಕರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಮುಖ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಇದೇ ಮೊದಲ ಬಾರಿಗೆ ಬಿಎಂಟಿಸಿಯು 320 ಹವಾನಿಯಂತ್ರಿತ (air-conditioned) ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವವರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಹೊಸ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಈಗಾಗಲೇ ಸೇವೆ ಕಲ್ಪಿಸುತ್ತಿರುವ ವಾಯು ವಜ್ರದೊಂದಿಗೆ ಸೇರಲಿದೆ. ಅಲ್ಲದೆ ಬೆಂಗಳೂರಿನ ವಿವಿಧ ಭಾಗದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಇದರೊಂದಿಗೆ ಐಟಿ ಉದ್ಯೋಗಿಗಳಿಗೂ ಬಿಎಂಟಿಸಿ ಗುಡ್ ನ್ಯೂಸ್ ಕೊಟ್ಟಿದೆ. ಅದೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ ಮೂಲಕವೂ ಸಾವಿರಾರು ಜನ ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ ಬಿಎಂಟಿಸಿಯು ಹೊಸ ಬಸ್ ಸೇವೆಯನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹಾಗೂ ದಿನದ 24 ಗಂಟೆ ಸಮಯ ಸೇವೆಯನ್ನು ಕಲ್ಪಿಸುವುದಕ್ಕೆ ಬಿಎಂಟಿಸಿ ಮುಂದಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಈಗಾಗಲೇ ಇರುವ ವೋಲ್ವೋ ಬಸ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಆದರೆ ಈಗಾಗಲೇ ಇರುವ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಯಾವುದೇ ಬಸ್‌ನಲ್ಲೂ ಎಸಿ ಸೌಲಭ್ಯ ಇಲ್ಲ. ಇದೀಗ ಎಸಿ ಇ-ಬಸ್‌ಗಳನ್ನು ಬಿಎಂಟಿಸಿ ಪರಿಚಯಿಸುತ್ತಿದೆ. ಈ ಸಂಬಂಧ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಸಹ ಹಾಕಲಾಗಿದೆ. ಹೊಸ ಒಪ್ಪಂದದ ಪ್ರಕಾರ 320 ಇ-ಬಸ್‌ಗಳನ್ನು ಹಂತ ಹಂತವಾಗಿ ಬೆಂಗಳೂರಿನಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ ಎಂದು ಬಿಎಂಟಿಸಿ ಹೇಳಿದೆ.
ಪ್ರಯೋಗಿಕ ಸಂಚಾರ: ಇನ್ನು 320 ಎಸಿ ಇ- ಬಸ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚಿತವಾಗಿ ಇದೀಗ ಐದು ಎಸಿ ಇ - ಬಸ್‌ಗಳನ್ನು ಪ್ರಾಯೋಗಿಕ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಎಂಟಿಸಿಗೆ ಯಾವುದೇ ಹೊಸ ಮಾದರಿಯ ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಮೊದಲು ಪ್ರಾಯೋಗಿಕ ಸಂಚಾರವನ್ನು ನಡೆಸಲಾಗುತ್ತದೆ. ಇದೀಗ 5 ಎಸಿ ಇ- ಬಸ್‌ಗಳನ್ನು ಪ್ರಯೋಗಿಕವಾಗಿ ಬಳಸಲಾಗುತ್ತಿದ್ದು. ಈ ಪ್ರಯೋಗ ಮುಗಿದ ಕೂಡಲೇ ಬಸ್ ಸೇವೆ ಪ್ರಯಾಣಿಕರಿಗೆ ಮುಕ್ತವಾಗಲಿದೆ. ಈ ಬಸ್‌ಗಳ ಸೇವೆ ಯಾವ ರೀತಿ ಇದೆ ಹಾಗೂ ಕಾರ್ಯಕ್ಷಮತೆ ಯಾವ ರೀತಿ ಇದೆ ಎನ್ನುವುದನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಯೋಗ ನಡೆಸುತ್ತಿರುವುದಾಗಿ ಬಿಎಂಟಿಸಿ ಹೇಳಿದೆ.
ಗುತ್ತಿಗೆ ಆಧಾರದ ಮೇಲೆ (Gross Cost Contracting (GCC) model) ಬಿಎಂಟಿಸಿಯು ಖಾಸಗಿ ಸಂಸ್ಥೆ ಓಮ್ ಗ್ಲೋಬಲ್ ಮೊಬಿಲಿಟಿಯಿಂದ ಬಸ್‌ಗಳನ್ನು ಗುತ್ತಿಗೆಗೆ ಪಡೆಯುತ್ತಿದೆ. ಈ ಬಸ್‌ಗಳ ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಚಾಲಕರನ್ನು ಸಹ ನೇಮಿಸಲಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಕಂಡಕ್ಟರ್‌ಗಳನ್ನು ನೇಮಿಸಲಿದ್ದು. ಸಂಸ್ಥೆಗೆ ಪ್ರತಿ ಕಿಲೋಮೀಟರ್‌ಗೆ 65.8 ರೂಪಾಯಿಯನ್ನು ಬಿಎಂಟಿಸಿ ಪಾವತಿಸಲಿದೆ. ಇನ್ನು ವಿಮಾನ ನಿಲ್ದಾಣ ಮಾತ್ರವಲ್ಲದೆ ಐಟಿಬಿಟಿ ಉದ್ಯೋಗಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲೂ ಈ ಎಸಿ ಇ- ಬಸ್ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications