ನೌಕರರ ಮುಷ್ಕರ: ಏ.28ಕ್ಕೆ ಮೆಟ್ರೋ ಸಂಚಾರ ಬಂದ್
ಬೆಂಗಳೂರು, ಏಪ್ರಿಲ್ 27: ಬಿಎಂಆರ್ ಸಿಎಲ್ ನೌಕರರ ಸಂಘವು ಏ.28ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.28ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಲು ಉದ್ದೇಶಿಸಿದೆ.
ಒಂದು ತಿಂಗಳು ನಡೆದ ಮೆಟ್ರೋ ನೌಕರರು ಹಾಗೂ ಅಧಿಕಾರಿಗಳ ನಡುವಿನ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಮೆಟ್ರೋ ನೌಕರರು ಮತ್ತು ಅಧಿಕಾರಿಗಳ ನಡುವೆ ಮತ್ತೊಂದು ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಮೆಟ್ರೋ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಬಿಎಂಆರ್ ಸಿಎಲ್ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಮೆಟ್ರೋ ರೈಲ್ವೆ ಕಾಯ್ದೆ 2002ರ ಸೆಕ್ಷನ್ 90 ರ ಪ್ರಕಾರ ಮೆಟ್ರೋ ನೌಕರರು ಸಾರ್ವಜನಿಕ ಸೇವೆಯಲ್ಲಿರುವವರಾಗಿದ್ದಾರೆ.

ಮೆಟ್ರೋ ಸೇವೆಯನ್ನು ಪ್ರತಿದಿನ ಲಕ್ಷಾಂತರ ಜನರು ಬಳಸಿಕೊಳ್ಳುವುದರಿಂದ ಒಂದು ದಿನವೂ ಸೇವೆ ಸ್ಥಗಿತಗೊಳಿಸದಂತೆ ಕ್ರಮ ಕೈಗೊಳ್ಳಬೇಕಿದೆ. ದೇಶದ ಎಲ್ಲ ಮೆಟ್ರೋ ಸೇವೆಗಳನ್ನು ಕೇಂದ್ರದ ಎಸ್ಮಾ ಕಾಯ್ದೆ 1981 ರಡಿ ಅಗತ್ಯ ಸೇವೆಗಳು ಎಂದು ಹೆಸರಿಸುವ ಅಗತ್ಯವಿದೆ.
ಇದರಿಂದ ಮೆಟ್ರೋ ಸೇವೆ ನಿರಂತರವಾಗಿ ದೊರೆಯುವಂತೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಒಂದು ತಿಂಗಳು ಸಭೆ ನಡೆದಿದ್ದರೂ ಒಂದೂ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿಲ್ಲ, ಈಡೇರಿಸಲಿರುವ ಬೇಡಿಕೆಗಳ ಬಗ್ಗೆ ಹೈಕೋರ್ಟ್ ಗೆ ಮಾಹಿತಿ ನೀಡುತ್ತೇವೆಯೇ ಹೊರತು ನೌಕರರ ಸಂಘಕ್ಕಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರರು ಸಂಧಾನವನ್ನು ಬಿಟ್ಟು ಮುಷ್ಕರದ ಹಾದಿಯಲ್ಲಿ ತೆರಳಲು ಮುಂದಾಗಿದ್ದಾರೆ.












Click it and Unblock the Notifications