40 ಕಿ.ಮೀವರೆಗೆ ಎತ್ತರದ ರಸ್ತೆ ಯೋಜನೆಗೆ ಬಿಎಂಆರ್‌ಸಿಎಲ್ ಒಪ್ಪಿಗೆ, ಇದರಿಂದ ಅನುಕೂಲಗಳೇನು?
ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದೊಂದಿಗೆ ನಮ್ಮ ಮೆಟ್ರೋ ತನ್ನ 3ನೇ ಹಂತದ ಯೋಜನೆಯ 40.65 ಕಿಮೀ ಡಬಲ್ ಡೆಕ್ಕರ್ ಕಾರಿಡಾರ್‌ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೆಟ್ರೋ ಮಾರ್ಗ ನಿರ್ಮಿಸುವ ಮೂಲ ಯೋಜನೆಗೆ ಪ್ರಮುಖ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ವಾರದ ಆರಂಭದಲ್ಲೇ ಸಭೆ ನಡೆಸಿದ ಬೆಂಗಳೂರು ಮೆಟ್ರೋ ರೈಲು ಕಾರಿಡಾರ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿರ್ದೇಶಕರ ಮಂಡಳಿಯು ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ವಿವಿಧ ಹಂತಗಳಲ್ಲಿ ಎಲಿವೇಟೆಡ್ ರಸ್ತೆ ಮತ್ತು ಮೆಟ್ರೋ ವಯಾಡಕ್ಟ್ ಅನ್ನು ಸಂಯೋಜಿಸುವ ಪರಿಷ್ಕೃತ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಈ ಮಂಡಳಿಯು ಹೆಚ್ಚುವರಿ ಯೋಜನಾ ವೆಚ್ಚವಾದ 8,916 ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರವೇ ಭರಿಸಬೇಕೆಂದು ಅನುಮೋದನೆಯ ಸಮಯದಲ್ಲಿ ಒತ್ತಾಯಿಸಿದೆ. ಮೆಟ್ರೋ ಈ 3ನೇ ಹಂತದ ಯೋಜನೆಯು ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿ.ಮೀ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.50 ಕಿ.ಮೀ ಎರಡು ಮಾರ್ಗಗಳನ್ನು ಒಳಗೊಂಡಿದೆ. ಈಗಾಗಲೇ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ರಾಗಿಗುಡ್ಡ ನಡುವೆ ಮೂರು ಕಿಮೀ ಮಲ್ಟಿ-ಡೆಕ್ ಕಾರಿಡಾರ್ ನಿರ್ಮಿಸಿರುವ ಅನುಭವ ಹೊಂದಿರುವ ನಮ್ಮ ಮೆಟ್ರೋಗೆ ಇದು ಎರಡನೇ ಯೋಜನೆಯಾಗಿದೆ.

ಈ ಯೋಜನೆಯು ಸ್ಥಳಾವಕಾಶವನ್ನು ಹೆಚ್ಚಿಸಲು ಹಾಗೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಆದರೂ ಈ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ಸರ್ಕಾರವು ಒಂದೇ ಹಂತದಲ್ಲಿ ಈ ಮೂಲಸೌಕರ್ಯ ಕಾಮಗಾರಿಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದು ದೂರಿದ್ದಾರೆ.
ವರದಿಯ ಪ್ರಕಾರ ಅಂದಾಜು 8,916 ಕೋಟಿ ರೂಪಾಯಿಗಳಲ್ಲಿ 6,368 ಕೋಟಿ ರೂಪಾಯಿಗಳನ್ನು ಸಿವಿಲ್ ಕೆಲಸಗಳು ಹಾಗೂ ವಿನ್ಯಾಸ ಇತ್ಯಾದಿಗಳಿಗೆ ಖರ್ಚಾಗಲಿದೆ. ಉಳಿದಂತೆ 2,548 ಕೋಟಿ ರೂಪಾಯಿಗಳನ್ನು ಭೂಸ್ವಾಧೀನಕ್ಕೆ ಖರ್ಚು ಮಾಡುವುದಾಗಿ ತಿಳಿದುಬಂದಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರವು ಈ ಡಬಲ್ ಡೆಕ್ಕರ್ ಯೋಜನೆಗೆ ಹಣಕಾಸು ಒದಗಿಸುವ ಭರವಸೆ ನೀಡಿತ್ತು. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ಇದು ಅತ್ಯಗತ್ಯ ಎಂದು ಹೇಳಿದೆ.

ಈ ಡಬಲ್ ಡೆಕ್ಕರ್ ಯೋಜನೆಗೆ ನಮಗೆ ಆಂತರಿಕ ಅನುಮೋದನೆ ಸಿಕ್ಕಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದು, ವಿನ್ಯಾಸ ಸಲಹೆಗಾರರು ತಮ್ಮ ಯೋಜನೆಗಳನ್ನು ಸಲ್ಲಿಸಿದ ನಂತರ ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿ ನಿರೀಕ್ಷಿಸಲಾಗಿದೆ. ಸಿವಿಲ್ ಕೆಲಸಕ್ಕಾಗಿ ಟೆಂಡರ್‌ಗಳನ್ನು ಕರೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮೆಟ್ರೋ ಡಬಲ್ ಡೆಕ್ಕರ್ ಯೋಜನೆಗೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಇದಕ್ಕೆ ಸರ್ಕಾರದಿಂದ ಹಣಕಾಸು ಕೂಡ ಒದಗಿಸಲಿದ್ದು, ಈ ವಿಷಯವನ್ನು ಎರಡು ವಾರಗಳಲ್ಲಿ ಚರ್ಚಿಸಲು ಸರ್ಕಾರ ಕೂಡ ಸಜ್ಜಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಮೆಟ್ರೋ ಮಾರ್ಗಗಳು ಹೊಸ ರೂಪದಲ್ಲಿ ನಿರ್ಮಾಣಗೊಳ್ಳಲಿದ್ದು, ಈ ಹಿಂದಿನಂತೆ ಮೆಟ್ರೊ ಪಿಲ್ಲರ್‌ಗಳು, ವಯಾಡಕ್ಟ್‌ಗಳು ಕೇವಲ ಮೆಟ್ರೋ ಸಂಚಾರಕ್ಕೆ ಮಾತ್ರ ಸಿಮಿತವಾಗದೆ, ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಿವೆ. ಅಲ್ಲದೆ ಈ ಹೊಸ ಮೆಟ್ರೋ ಮಾರ್ಗಗಳು ಡಬಲ್ ಡೆಕ್ಕರ್ ಫ್ಲೈಓವರ್‌ಗಳಾಗಿ ಬದಲಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಹಿಂದೆ ಹೇಳಿದ್ದರು.












Click it and Unblock the Notifications