ಶಕ್ತಿ ಗ್ಯಾರಂಟಿಗೆ ನಾಮ, ಕಳ್ಳನಿಗೆ ಪಿಳ್ಳೆ ನೆವ: ವಕ್ಫ್ ವಿರುದ್ಧ ನವೆಂಬರ್ 4 ರಿಂದ ಹೋರಾಟ
ಬೆಂಗಳೂರು, ಅಕ್ಟೋಬರ್ 31: ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಟಿಪ್ಪು ಸುಲ್ತಾನ ಕೊಡಗಿನಲ್ಲಿ ಮತಾಂತರ ಮಾಡಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಭೂಗಳ್ಳರು ಮಾತ್ರವಲ್ಲದೆ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ. ಆರ್.ಅಶೋಕ್ ಅವರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನವೆಂಬರ್ 4 ರಿಂದ ತೀವ್ರ ಹೋರಾಟ ಆರಂಭಿಸಲಾಗುವುದು. ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಇನ್ನಿತರ ಕಡೆಗಳಲ್ಲಿ ರೈತರ ಜಮೀನುಗಳನ್ನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದರು.

ಬಿಜೆಪಿ ಯಾವುದೇ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ನಾವು ಹೋರಾಟ ಮಾಡಿದ್ದಕ್ಕೆ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ತಿರುಗೇಟು ಕೊಟ್ಟರು. ಲೋಕಾಯುಕ್ತ ಹಾಗೂ ಇಡಿ ತನಿಖೆ ಮಾಡುತ್ತಿದೆ. ಸಿಎಂ ಆಪ್ತರು, ಬೆಂಬಲಿಗರ ವಿರುದ್ಧವೂ ತನಿಖೆ ನಡೆದಿದೆ. ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಇನ್ನು ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತೇವೆ ಎಂದು ವಿವರಿಸಿದರು.
ವಕ್ಫ್ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದು, ಬಿಜೆಪಿ ಅವರಿಗೆ ಬೆಂಬಲ ನೀಡಲಿದೆ. ರೈತರಿಗೆ ನೋಟಿಸ್ ಕೊಟ್ಟ ಅಧಿಕಾರಿಯನ್ನು ಜೈಲಿಗೆ ಹಾಕಲು ರಾಜ್ಯದ ಮುಖ್ಯಮಂತ್ರಿಗಳಿಗೆ ಧಮ್ ಇಲ್ಲ. ಇಲ್ಲಿ ರಾಜಕಾರಣಕ್ಕಿಂತ ರೈತರಿಗೆ ಉತ್ತರ ನೀಡುವುದು ಮುಖ್ಯ ಎಂದು ಅವರು ಒತ್ತಾಯಿಸಿದರು.
ಶಕ್ತಿ ಯೋಜನೆಗೆ ನಾಮ: ಕಳ್ಳನಿಗೆ ಪಿಳ್ಳೆ ನೆವ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕಳ್ಳನಿಗೆ ಪಿಳ್ಳೆನೆವ ಎಂಬಂತೆ ಮಾತನಾಡಿದ್ದಾರೆ ಎಂದ ಆರ್.ಅಶೊಕ್ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಹಿಟ್ ಮಾಡಿದ ಕೂಡಲೇ ಕಾಂಗ್ರೆಸ್ ಓಡಿ ಹೋಗುತ್ತದೆ. ಈ ಸರ್ಕಾರ ತುಘಲಕ್ ಆಡಳಿತ ನೀಡಿ ನಗೆಪಾಟಲಿಗೀಡಾಗಿದೆ.

ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳು ಟುಸ್ ಪಟಾಕಿಯಾಗಲಿವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಹಿಳೆಯರು ಫೋನ್ ಕರೆ ಮಾಡಿ ಯೋಜನೆ ಬೇಡವೆಂದು ತಿಳಿಸಿದ್ದಾರಂತೆ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ, ಯೋಜನೆ ರದ್ದುಪಡಿಸಲು ಈ ರೀತಿ ಕಾರಣ ಹೇಳುತ್ತಿದ್ದಾರೆ. ಇದರ ಜೊತೆಗೆ ಪಡಿತರ ಚೀಟಿ ರದ್ದು ಮಾಡಲು ಎಲ್ಲ ಬಗೆಯ ಷರತ್ತುಗಳನ್ನು ವಿಧಿಸುತ್ತಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಏನು ಬೇಕಾದರೂ ಮಾಡಬಹುದು ಎಂಬಂತೆ ವರ್ತಿಸುತ್ತಿದೆ. ಚುನಾವಣೆ ಬಳಿಕ ಗ್ಯಾರಂಟಿ ಇರಲ್ಲ ಎಂದು ಬಿಜೆಪಿ ತಿಳಿಸಿತ್ತು. ಅದರ ಮೊದಲ ಹೆಜ್ಜೆ ಶುರುವಾಗಿದೆ ಎಂದು ಗ್ಯಾರೆಂಟಿಗಳ ವಿರುದ್ಧ, ಡಿಸಿಎಂ ಹೇಳಿಕೆಗೆ ಟಕ್ಕರ್ ಕೊಟ್ಟರು.
ಚನ್ನಪಟ್ಟಣಕ್ಕೆ ಕಾಲಿಡದ ಸಿಎಂ ಸಿದ್ದರಾಮಯ್ಯ
ರಾಜ್ಯ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸರ್ಕಾರವೇ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ಹಣ ನೀಡಬೇಕಿದೆ. ಸರ್ಕಾರದ ಖಜಾನೆ ಪೂರ್ಣ ಖಾಲಿಯಾಗಿದೆ. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಉಪಚುನಾವಣೆ ಎದುರಿಸಲು ಮುಂದಾಗಿದ್ದಾರೆಂದು ಗೊತ್ತಿಲ್ಲ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆಯೂ ಚನ್ನಪಟ್ಟಣಕ್ಕೆ ಭೇಟಿ ನೀಡಿಲ್ಲ. ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ವಹಿಸಿಕೊಂಡು ಕಮಿಶನ್ ಪಡೆಯುತ್ತಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ಉಸ್ತುವಾರಿ ಸಿಗಲು ಕಾಯುತ್ತಿದ್ದಾರೆ. ಜನರು ಈ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.












Click it and Unblock the Notifications