ಕೆಚ್ಚಲು ಕೊಯ್ದ ಪ್ರಕರಣ, ಮಾಲೀಕನಿಗೆ ಹೊಸ ಗೋವು ವಿತರಿಸಿದ ಬಿಜೆಪಿ
ಚಾಮರಾಜಪೇಟೆಯಲ್ಲಿ ದನದ ಕೆಚ್ಚಲು ಕೊಯ್ದಿರುವ ಪ್ರಕರಣವು ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಇಂದು ಸಂಕ್ರಾಂತಿ ಹಿನ್ನೆಲೆ ಆ ಮಾಲೀಕನಿಗೆ ಬಿಜೆಪಿ ನಾಯಕರು ಹೊಸ ಗೋವನ್ನು ನೀಡಿದ್ದಾರೆ.
ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ, ಗೋ ಪೂಜೆ ನೆರವೇರಿಸಿ ಪಕ್ಷದ ವತಿಯಿಂದ ಗೋವನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಭಾಸ್ಕರ್ ರಾವ್, ರಾಜ್ಯ ಮುಖ್ಯ ವಕ್ತಾರರಾದ ಅಶ್ವತ್ಥ ನಾರಾಯಣ, ನರೇಂದ್ರ ರಂಗಪ್ಪ ಸೇರಿದಂತೆ ಹಲವು ನಾಯಕರಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಬಿ.ವೈ.ವಿಜಯೇಂದ್ರ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಕತ್ತರಿಸಿರುವುದು ಕ್ರೂರ ಕೃತ್ಯದಿಂದ ನೊಂದ ಕುಟುಂಬಸ್ಥರ ನಿವಾಸಕ್ಕೆ ತೆರಳಿ, ಗೋ ಪೂಜೆ ನೆರವೇರಿಸಿ ಸಂತ್ರಸ್ಥ ಕುಟುಂಬಕ್ಕೆ ಗೋವನ್ನು ನೀಡಿ ಧೈರ್ಯ ತುಂಬಿದೆವು ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದ್ದು, ಈ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಹಿಂದಿರುವ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಗೋಮಾತೆಯ ಕೆಚ್ಚಲು ಕತ್ತರಿಸಿದ ಪಾಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಗ್ರಹಿಸಿದ್ದಾರೆ.
ಗೋವು ಭಾರತೀಯರಿಗೆ ತಾಯಿ ಸಮಾನ. ಅದರಲ್ಲೂ ಸಂಕ್ರಾಂತಿ ಹಬ್ಬದಲ್ಲಿ ಗೋವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸಂಕ್ರಾಂತಿ ಹಬ್ಬದ ಸಮಯದಲ್ಲೇ ಹಸುವಿನ ಕೆಚ್ಚಲು ಕೊಯ್ದುಹಾಕುವ ಮೂಲಕ ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ. ಇಂತಹ ಜಿಹಾದಿ ಮನಸ್ಥಿತಿಯನ್ನು ನಮ್ಮ ರಾಜ್ಯ ಈವರೆಗೂ ಕಂಡಿರರಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಕರಸೇವಕರ ಮೇಲಿನ 30 ವರ್ಷದ ಹಳೇ ಕೇಸುಗಳು ರೀ ಓಪನ್ ಆಗುತ್ತವೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮುದಳ್ಳುರಿ ನಡೆಯುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ದುರ್ಗಾಮತೆಯ ಮೆರವಣಿಗೆಯಲ್ಲಿ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪದೇ ಪದೇ ಈ ಕೋಮುಗಲಭೆಗಳು ಯಾಕೆ ನಡೆಯುತ್ತಿವೆ? ಕಾಂಗ್ರೆಸ್ ಪಕ್ಷದ ವೋಟ್‌ಬ್ಯಾಂಕ್ ರಾಜಕಾರಣದಿಂದ ಮತಾಂಧ ಶಕ್ತಿಗಳಿಗೆ ಕೊಂಬು ಬಂದಿದೆ. ಮೂಲಭೂತವಾದಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಚಾಮರಾಜಪೇಟೆಯಲ್ಲಿ ನಡೆದಿರುವ ಈ ಅಮಾನುಷ ಘಟನೆಯನ್ನ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತುಷ್ಟೀಕರಣ ರಾಜಕಾರಣಕ್ಕಾಗಿ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಬಲಿ ಕೊಡದೆ ಮತಾಂಧ ಶಕ್ತಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆಯಲಾಗಿತ್ತು. ಚಾಮರಾಜಪೇಟೆಯಲ್ಲಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ಎಲ್ಲೆಡೆ ಬೆಚ್ಚಿಬೀಳಿಸಿತ್ತು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಿಹಾರ ಮೂಲದ ಶೇಖ್ ನಸ್ರೂ (35) ಎಂದು ತಿಳಿದುಬಂದಿದೆ. ಈತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications