ರಾಜಕಾರಣಿಗಳಿಗೆ "ಶೇಮ್' ಎಂದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ
ಬೆಂಗಳೂರು, ಜೂನ್ 08: ಬೆಂಗಳೂರು ಐಟಿ ಸಿಟಿ, ಹೈಟೆಕ್ ಸಿಟಿ ಅಂತಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿಯನ್ನು ಗಳಿಸಿದೆ. ಐಟಿ ಕಂಪನಿಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಲ್ಲಿವೆ. ಆದರೆ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಸರ್ಕಾರ ಎಡವುತ್ತಿದೆ ಅನ್ನೋದು ಆಗಿಂದಾಗ್ಗೆ ಗೊತ್ತಾಗುತ್ತಿದೆ. ಬಯೋಕಾನ್ ಸಂಸ್ಥೆಯ ಕಾರ್ಯಾಧ್ಯಕ್ಷೆಯಾಗಿರುವ ಕಿರಣ್ ಮಜುಂದಾರ್ ಮಾಡಿರುವ ಟ್ವೀಟ್ ಬೆಂಗಳೂರಿನ ರಸ್ತೆಯ ಅವಾಂತರಕ್ಕೆ ಹಿಡಿದ ಕನ್ನಡಿಯಾಗಿದೆ.
ಬೆಂಗಳೂರಿನ ಬಹುದೊಡ್ಡ ಸಂಸ್ಥೆಗಳಲ್ಲಿ ಬಯೋಕಾನ್ ಸಂಸ್ಥೆಯು ಒಂದಾಗಿದೆ. ಬಯೋಕಾನ್ ಸಂಸ್ಥೆಯ ಕಾರ್ಯಾಧ್ಯಕ್ಷೆ ಕಿರಣ್ ಮಜುಂದಾರ್ ರಸ್ತೆ ಗುಂಡಿಯ ಬಗ್ಗೆ ಟ್ವೀಟ್ ಮಾಡಿ ರಾಜಕಾರಣಿಗಳ ಬಗ್ಗೆ ಆಕ್ರೋಶವನ್ನ ಹೊರಹಾಕಿದ್ದಾರೆ. ""ಹುಸ್ಕೂರು ಸರ್ಜಾಪುರ ರಸ್ತೆ ಹೀನಾಯ ಸ್ಥಿತಿಯಲ್ಲಿದೆ. ಆನೇಕಲ್ ತಾಲೂಕಿನ ನಮ್ಮ ಶಾಸಕ, ಸಂಸದ, ಪಂಚಾಯಿತಿ ಸಂಪೂರ್ಣ ಜವಾಬ್ದಾರಿಯ ಕೊರತೆಯಿಂದ ಹತಾಶೆ, ಕೋಪವಿದೆ. ಸರ್ಕಾರ ಬಸ್ ಡಿಪೋ, ಕ್ವಾಟ್ರಸ್ ನಿರ್ಮಿಸಲು ರಸ್ತೆಯಿಲ್ಲವೇ..? ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು'' ಎಂದು ಆಕ್ರೋಶಭರಿತರಗಿ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಕಂಪನಿಯ ಕಾರ್ಯಾಧ್ಯಕ್ಷೆ ಮಾಡಿರುವ ಟ್ವೀಟ್ ನೂರಾರು ಜನ ರೀಟ್ವೀಟ್ ಮಾಡಿದ್ದಾರೆ. ಜನರು ರಸ್ತೆಗುಂಡಿಗಳ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಐಟಿ ಸಿಟಿ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನನ್ನು ಗಳಿಸಿದ್ದರು ರಸ್ತೆ ಗುಂಡಿ ಬೆಂಗಳೂರಿನ ಮಾನವನ್ನು ಮೂರು ಕಾಸಿಗೆ ಹರಾಜಕುತ್ತಿದೆ.

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಪತ್ರ
ಬೆಂಗಳೂರಿನ ಬ್ರಾಂಡ್ ವ್ಯಾಲ್ಯೂವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರು. ಎಸ್ಎಂ ಕೃಷ್ಣ ರವರು ಮೂರು ವಾರಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರವನ್ನು ಬರೆದಿದ್ದರು. ನಗರದ ಸನ್ನಿವೇಶ ಬ್ರಾಂಡ್ ಬೆಂಗಳೂರಿಗೆ ಬೆದರಿಕೆಯನ್ನು ಹಾಕುತ್ತಿವೆ. ಬೆಂಗಳೂರಿನಲ್ಲಿ ಹೂಡಿಕೆ ಹೊಡೆತ ಬೀಳುವ ಸಂಭವವಿದೆ. ಬೆಂಗಳೂರಿಗೆ ದೂರದೃಷ್ಟಿಯ ಯೋಜನೆಗಳು ಬೇಕು ಎಂದು ಉಲ್ಲೇಖವನ್ನು ಮಾಡಿದ್ದರು. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಮಾಜಿ ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿಯವರನ್ನು ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಮಾಡಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದನ್ನು ಸ್ಮರಿಸಬಹುದಾಗಿದೆ.
ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಕೆ ಕ್ರಾಸ್ತಾ ಹೇಳಿದ್ದೇನು..?
ಕರ್ನಾಟಕ ವಾಣಿಜ್ಯ ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಕೆ ಕ್ರಾಸ್ತಾ "" ಆ ರಸ್ತೆ ಮಾತ್ರವಲ್ಲ ಬೆಂಗಳೂರಿನ ಯಾವ ರಸ್ತೆ ಉತ್ತಮವಾಗಿದೆ. ರಸ್ತೆಗಳಲ್ಲಿ ಹೊಂಡ ಬಿದ್ದು ವಾಹನ.

ಸಂಚಾರಕ್ಕೆ ಕಷ್ಟವಾಗ್ತಿದೆ. ರಸ್ತೆ ನಿರ್ಮಾಣದಿಂದ ಹಿಡಿದು ಎಲ್ಲದಕ್ಕೂ 40% ಅನ್ನೋ ವಿಚಾರ ವ್ಯಾಪವಾಗಿ ಹಬ್ಬಿದ್ದು ಅಭಿವೃದ್ದಿ ಕುಂಠಿತವಾಗ್ತಿದೆ'' ಎಂದಿದ್ದಾರೆ.
ಹೂಡಿಕೆಗೆ ಮೂಲಭೂತ ಸೌಕರ್ಯ ಅವಶ್ಯಕ
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆೆಡೆ ಹೂಡಿಕೆಗೆ ವಿಫುಲವಾದ ಅವಕಾಶದ ಬಗ್ಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ದಾವೋಸ್ ತಿಳಿಸಿದ್ದರು. 65000 ಕೋಟಿ ಹೂಡಿಕೆಯನ್ನು ರಾಜ್ಯಕ್ಕೆ ತರುತ್ತಿರುವುದಾಗಿಯೂ ಘೋಷಿಸಿದ್ದಾರೆ.

ಆದರೆ ಬೆಂಗಳೂರಿನ ರಸ್ತೆ ಗುಂಡಿಗಳು ಇಷ್ಟು ಹೀನಾಯವಾಗಿದ್ದರೇ ಯಾವ ಹೂಡಿಕೆದಾರ ಹಣವನ್ನು ಹೂಡಲು ಸಾಧ್ಯ. ಅದರಲ್ಲೂ ಕಿರಣ್ ಮಜುಂದಾರ್ ಶಾ ಅಂತವರು ಟ್ವೀಟ್ ನಿಜಕ್ಕೂ ವ್ಯಾಪಕವಾಗಿ ಪ್ರಚಾರವವನ್ನು ಪಡೆಯುತ್ತದೆ. ಬೆಂಗಳೂರಿಗೆ ಶೇಮ್ ಶೇಮ್ ಬೆಂಗಳೂರು ಎನ್ನುವಂತೆ ಮಾಡುತ್ತದೆ. ಸರ್ಕಾರಕ್ಕೆ ಜನರು ಈಗಾಗಲೇ ಹಿಡಿಶಾಪ ಹಾಕ್ತಿರೋದ್ರಿಂದ ಎಚ್ಚೆತ್ತು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಮತ್ತು ರಸ್ತೆಗುಂಡಿಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳದ ಹೊರತು ಬೆಂಗಳೂರಿನ ಮರ್ಯಾದೆ ಮೂರಾಬಟ್ಟೆಯಾಗಲಿದೆ.












Click it and Unblock the Notifications