Learn Kannada ಎಂದ ಬಿಹಾರಿ: ಕನ್ನಡಿಗರ ಪ್ರೀತಿ ಬಗ್ಗೆ ಬಿಹಾರಿ ಯುಟ್ಯೂಬರ್ ಹೇಳಿದ್ದೇನು....
ಇತ್ತೀಚಿನ ದಿನಗಳಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಉತ್ತರ ಭಾರತೀಯರಿಂದ ದೂರುಗಳೇ ಕೇಳಿಬರುತ್ತಿವೆ. ನಮಗೆ ಕನ್ನಡ ಕಲಿಯಲು ಒತ್ತಾಯಿಸುತ್ತಿದ್ದಾರೆ. ಹಿಂದಿ ಬಂದ್ರೆ ಸಾಕಲ್ವಾ. ಹಿಂದಿ ಚಲ್ತಾ ಹೈ ಎನ್ನುವುದನ್ನು ಕೇಳಿ, ನೋಡಿ ಪ್ರತಿ ಕನ್ನಡಿಗರಿಗು ಸಾಕಾಗಿದೆ. ಇದೀಗ ಬಿಹಾರಿ ವ್ಯಕ್ತಿಯೊಬ್ಬರ ಕನ್ನಡ ಕಲಿಯಿರಿ. ಇಲ್ಲಿನ ನಿಜವಾದ ಪ್ರೀತಿ ತಿಳಿಯುತ್ತೆ ಎನ್ನುತ್ತಿದ್ದಾನೆ. ಹೌದು ಭಾಷಾ ವೈಷಮ್ಯ, ಬೈಗುಳ ಹಾಗೂ ಕೊಂಕು ನುಡಿಗಳ ವಿಡಿಯೋಗಳೇ ಇತ್ತೀಚಿನ ದಿನದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದವು. ಇದೀಗ ಬಿಹಾರಿ ಯುಟ್ಯೂಬರ್ ಬಿಡಿ ಬಿಡಿ ಕನ್ನಡ ಪದಗಳನ್ನು ಜೋಡಿಸಿ ಮಾತನಾಡಿಯೇ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
Huduga - from- bihar ಎನ್ನುವ Instagram ಖಾತೆಯ ಮೂಲಕ ಬಿಹಾರದ ವ್ಯಕ್ತಿ ಮಾತನಾಡಿರುವ ಕನ್ನಡಕ್ಕೆ ಜನ ಜೈ ಎಂದಿದ್ದಾರೆ. ಬಿಹಾರದ ಯುಟ್ಯೂಬರ್ ಕನ್ನಡವನ್ನು ಮಾತನಾಡುವ ರೀತಿಗೆ ಒಂದು ಮೆಚ್ಚುಗೆಯಾದರೆ, ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಮಾತನಾಡಿರುವುದಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

ಈಚೆಗೆ ಬಿಹಾರದ ವ್ಯಕ್ತಿ ವಿಧಾನಸೌಧಕ್ಕೆ ಭೇಟಿ ನೀಡಿದ್ದು, "ನಾನು ಇವೊತ್ತು ವಿಧಾನಸೌಧಕ್ಕೆ ಬಂದಿದ್ದೇನೆ. ನಾನು ಈ ವಿಡಿಯೋ ಅಪ್ಲೋಡ್ ಮಾಡ್ತೀನಿ. ಈಗ ನೋಡಿ ಎಷ್ಟು ಚೆನ್ನಾಗಿ ವಿಧಾನಸೌಧ ಕಾಣಿಸ್ತಿದೆ. ತುಂಬಾ ಜನ ಬಂದಿದ್ದಾರೆ. ಎಲ್ಲರೂ ಒಂದೇ ಕಡೆ ಸೇರಿದ್ದಾರೆ. ಈಗ ನಾನು ಹೋಗ್ತೀನಿ ಮನೆಗೆ, ನಾಳೆ ಸಿಗೋಣ" ಇವಿಷ್ಟು ಬಿಹಾರದ ಹುಡುಗ ಕನ್ನಡದಲ್ಲಿ ಮಾತನಾಡಿರುವ ಮಾತುಗಳು. ಮಧ್ಯ ಮಧ್ಯದಲ್ಲಿ ಸಣ್ಣ ಪುಟ್ಟ ಇಂಗ್ಲಿಷ್ ಹಾಗೂ ಹಿಂದಿ ಪದಗಳನ್ನು ಆ ವ್ಯಕ್ತಿ ಬಳಸಿದ್ದು, ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆತನ ಕಾಮೆಂಟ್ ಸೆಕ್ಷನ್ ತುಂಬಾ ಹಳದಿ - ಕೆಂಪಿನ ಹೃದಯದ ಸಿಂಬಲ್‌ಗಳೇ ತುಂಬಿವೆ. ಕನ್ನಡ ಕಲಿತದಕ್ಕೆ ಧನ್ಯವಾದ ಬ್ರೋ, ನಿಮ್ಮ ಕನ್ನಡ ನೋಡಿ ಖುಷಿ ಆಯ್ತು. ನಿಮ್ಮಂತೆ ಹೊರಗಿನಿಂದ ಬರುವವರು ಎಲ್ಲರೂ ಕನ್ನಡ ಕಲಿತರೆ ಸಮಸ್ಯೆನೇ ಇಲ್ಲ ಎಂದು ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀನು ನಮ್ಮ ಮನಸ್ಸು ಗೆದಿದ್ದೀಯ ಎನ್ನುವ ಪ್ರಶಂಸೆಗಳ ಸುರಿಮಳೆಯೇ ಆಗಿದೆ. ಹೊಡಿರಿ ಚಪ್ಪಾಳೆ ಎನ್ನುವ ಮೂಲಕ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಕನ್ನಡ ಕಲಿಕೆಯನ್ನು ನಾವು ಅಭಿನಂದಿಸುತ್ತೇವೆ. ಸಾಧ್ಯವಾದಷ್ಟು ಬೇಗ ಇನ್ನಷ್ಟು ಕನ್ನಡ ಕಲಿಯಿರಿ. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದು ಭೇಷ್‌ಗಿರಿ ನೀಡಿದ್ದಾರೆ.

ನೀವು ಕರ್ನಾಟಕದಲ್ಲಿ ಕನ್ನಡ ಮಾತನಾಡಿದರೆ ಸಿಗುವ ಗೌರವವಿದು. ನಾನು ಸಂಪೂರ್ಣವಾಗಿಯೂ ಕನ್ನಡ ಮಾತನಾಡಿರಲಿಲ್ಲ. ನಾನು ಈಚೆಗೆ ವಿಧಾನಸೌಧಕ್ಕೆ ಭೇಟಿ ನೀಡಿದ್ದೆ. ಆ ವಿಡಿಯೋದಲ್ಲಿ ನಾನು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಮೂರು ಭಾಷೆಯಲ್ಲಿ ಮಾತನಾಡಿದ್ದೆ. ಇಷ್ಟು ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ನೀವು ಕರ್ನಾಟಕದಲ್ಲಿ ಇದ್ದರೆ ದಯವಿಟ್ಟು ಕನ್ನಡ ಕಲಿಯಿರಿ. ಎಲ್ಲ ಕನ್ನಡಿಗರಿಗೂ ತುಂಬಾ ತುಂಬಾ ಥ್ಯಾಂಕ್ಸ್ ಎಂದು ಆ ಯುಟ್ಯೂಬರ್ ಹೇಳಿದ್ದಾನೆ
ಇದು... ಇದು ಚನ್ನಾಗಿರೋದು ಎಂದ ಕನ್ನಡಿಗರು...
ವಿಧಾನಸೌಧದ ಮುಂದೆ ನಿಂತು ಕನ್ನಡದಲ್ಲಿ ಮಾತನಾಡಿದ ಹುಡುಗ ಇದೀಗ ಕರ್ನಾಟಕವನ್ನು ಪರಿಚಯಿಸಲು ಮುಂದಾಗಿದ್ದಾನೆ. ಬನ್ನಿ ನಾನು ನಿಮಗೆ ಕರ್ನಾಟಕ ತೋರಿಸ್ತಿನಿ ಎಂದು ಹೇಳಿದ್ದು. ಇದಕ್ಕೆ ಕನ್ನಡಿಗರು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications