43 ಲಕ್ಷ ರೂ. ಸಾಲ ತೀರಿಸಿದ ಖುಷಿ: ಆರ್ಥಿಕ ಸ್ವಾತಂತ್ರ್ಯದ ಪಾಠ ಕಲಿಸಲು 3 ವರ್ಷದ ಮಗನೊಂದಿಗೆ ಬ್ಯಾಂಕ್‌ಗೆ ಬಂದ ಬೆಂಗಳೂರು ಮಹಿಳೆ
ನಾವು ಆರ್ಥಿಕವಾಗಿ ಸ್ವಾತಂತ್ರ್ಯವಾಗಿರಬೇಕು ಎಂಬುದು ಪ್ರತಿಯೊಬ್ಬರ ಬದುಕಿನ ಬಹುದೊಡ್ಡ ಕನಸು. ಅದರಲ್ಲೂ ಬೆನ್ನ ಮೇಲಿರುವ ಸಾಲದ ಹೊರೆಯಿಂದ ಆದಷ್ಟು ಬೇಕಾ ಇಳಿಸಿದರೆ ದೊಡ್ಡ ಬೆಟ್ಟವೊಂದನ್ನ ಇಳಿದಷ್ಟೇ ನಿರಾಳವಾಗುತ್ತೆ. ನಾವೇ ದುಡಿಯಲು ಶುರು ಮಾಡಿ, ನಮ್ಮ ಸಂಪಾದನೆಯಲ್ಲಿ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಾಗ ಆಗುವ ಖುಷಿಗೆ ಬೆಲೆ ಕಟ್ಟಲಾಗದು. ಇಂತಹದ್ದೇ ಒಂದು ರೋಚಕ ಹಾದಿಯಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ನಡೆದಿದ್ದಾರೆ .
ತಾನು ಮಾಡಿದ ಬರೋಬ್ಬರಿ 43 ಲಕ್ಷ ರೂಪಾಯಿಗಳ ಶಿಕ್ಷಣ ಸಾಲವನ್ನ 8 ವರ್ಷಗಳ ಸತತ ಹೋರಾಟದ ಬಳಿಕ ಸಂಪೂರ್ಣವಾಗಿ ತೀರಿಸಿರುವ ಅವರು, ಈ ಕ್ಷಣಕ್ಕೆ ಸಾಕ್ಷಿಯಾಗಲು ತಮ್ಮ ಮೂರೂವರೆ ವರ್ಷದ ಮಗನೊಂದಿಗೆ ಬ್ಯಾಂಕ್‌ಗೆ ತೆರಳಿದ್ದಾರೆ. ಆರ್ಥಿಕ ಅಡೆತಡೆಗಳು, ವೃತ್ತಿಬದುಕಿನ ಸವಾಲುಗಳು ಹಾಗೂ ತಾಯ್ತನದ ಜವಾಬ್ದಾರಿಗಳ ನಡುವೆ ಯಶಸ್ಸು ಸಾಧಿಸಿದ ಬೆಂಗಳೂರಿನ ಅರ್ಪಿತಾ ರಾವ್ ಅವರ ಕಥೆ ಇಲ್ಲಿದೆ.

8 ವರ್ಷಗಳ ಸುದೀರ್ಘ ಹೋರಾಟದ ಫಲ
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಹಳೆಯ ವಿದ್ಯಾರ್ಥಿನಿಯಾಗಿರುವ ಅರ್ಪಿತಾ ರಾವ್ ಅವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಈ ಸುದೀರ್ಘ ಪಯಣವನ್ನ ಹಂಚಿಕೊಂಡಿದ್ದಾರೆ. ಇವರ ಜೊತೆ ವ್ಯಾಸಂಗ ಮಾಡಿದ ಅನೇಕ ಸ್ನೇಹಿತರು ಕೇವಲ 2 ರಿಂದ 4 ವರ್ಷಗಳಲ್ಲಿ ತಮ್ಮ ಸಾಲವನ್ನ ಕಟ್ಟಿ ಮುಗಿಸಿದರು. ಆದರೆ ಅರ್ಪಿತಾ ಅವರ ಕುಟುಂಬದ ಹಿನ್ನೆಲೆ ಸ್ವಲ್ಪ ಅವರೆಲ್ಲರಿಗಿಂತ ಭಿನ್ನವಾಗಿತ್ತು.
ಆಗಾಗಿ, ಆರಂಭದಲ್ಲಿ 26 ಲಕ್ಷ ಇದ್ದ ಸಾಲವು ಕಾಲಕ್ರಮೇಣ 43 ಲಕ್ಷ ರೂಪಾಯಿವರೆಗೆ ಏರಿಕೆಯಾಗಿತ್ತು. ಇಷ್ಟು ದೊಡ್ಡ ಮೊತ್ತದ ಶಿಕ್ಷಣ ಸಾಲವನ್ನ ತೀರಿಸಲು ಅವರಿಗೆ ಬರೋಬ್ಬರಿ 8 ವರ್ಷ ಬೇಕಾಯಿತು.
ಬೆಂಗಳೂರಿನ ಈ ಮಹಿಳೆಗಿದ್ದ ಸವಾಲುಗಳು
ಅರ್ಪಿತಾ ಅವರಿಗೆ 18 ವರ್ಷ ಇದ್ದಾಗಲೇ ಅವರಿಗೆ ತಮ್ಮ ತಂದೆ ಕೊಡುತ್ತಿದ್ದ ಆರ್ಥಿಕ ಬೆಂಬಲ ನಿಂತು ಹೋಯ್ತು. ಈ ಸಂದರ್ಭದಲ್ಲಿ ಅವರ ಸಹೋದರಿ ಪಾಕೆಟ್ ಮನಿ ನೀಡಿ ಇವರ ಬೆಂಬಲಕ್ಕೆ ನಿಂತರು. ತಮ್ಮ 22ನೇ ವಯಸ್ಸಿನಲ್ಲಿ ದುಡಿಯಲು ಆರಂಭಿಸಿದ ಅರ್ಪಿತಾ, ನಿಧಾನವಾಗಿ ತಮ್ಮ ಹಾಗೂ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನ ಹೊತ್ತುಕೊಂಡರು.
ವೃತ್ತಿಜೀವನದಲ್ಲಿ ಸತ್ವ, ಇಂಟೆಲಿಕಾಪ್ ಮತ್ತು ಸಗಾನಾ ಎಂಬ ಇಂಪ್ಯಾಕ್ಟ್ ಕನ್ಸಲ್ಟಿಂಗ್ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಸ್ವಂತ ಉದ್ಯಮ ಪ್ರಾರಂಭಿಸಿ ಅದರಲ್ಲಿ ವಿಫಲರಾದರು ಹಾಗೂ ಪಾಲುದಾರಿಕೆಯಲ್ಲಿ ಮೋಸ ಹೋದರು.
ಇನ್ನೂ, ತಾಯ್ತನದ ಸಮಯದಲ್ಲಿ ಸರಿಸುಮಾರು ಒಂದು ವರ್ಷಗಳ ಕಾಲ ಅವರಿಗೆ ಯಾವುದೇ ಆದಾಯವಿರಲಿಲ್ಲ. ತಾವು ಕೆಲಸ ಮಾಡುತ್ತಿದ್ದ ಸ್ಟಾರ್ಟ್‌ಅಪ್ ಕಂಪನಿಯೊಂದು ಬರೋಬ್ಬರಿ 6 ತಿಂಗಳ ಹೆರಿಗೆ ಭತ್ಯೆಯನ್ನ ಸಹ ನೀಡಿರಲಿಲ್ಲ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಅವರು ಸಾಲ ತೀರಿಸುವ ಛಲ ಬಿಡಲಿಲ್ಲ.
ಮಗನಿಗೆ ಆರ್ಥಿಕ ಸ್ವಾತಂತ್ರ್ಯದ ಪಾಠ ಕಲಿಸಲು ಬ್ಯಾಂಕ್‌ಗೆ ಭೇಟಿ
ತಮ್ಮ 8 ವರ್ಷಗಳ ಬದ್ಧತೆಯ ಪ್ರತೀಕವಾಗಿ ಕೊನೆಯ ಕಂತಿನ ಸಾಲವನ್ನ ಪಾವತಿಸಿ ಖಾತೆ ಮುಕ್ತಾಯಗೊಳಿಸಲು ಅರ್ಪಿತಾ ಅವರು ತಮ್ಮ 3.5 ವರ್ಷದ ಮಗನನ್ನ ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದರು. ಭವಿಷ್ಯದಲ್ಲಿ ತನ್ನ ಮಗ ಸ್ವಂತವಾಗಿ ಬದುಕು ಕಟ್ಟಿಕೊಳ್ಳುವ ವಿಶ್ವಾಸ ಹೊಂದಬೇಕು ಹಾಗೂ ಆರ್ಥಿಕ ಸ್ವಾತಂತ್ರ್ಯದ ಮಹತ್ವವನ್ನ ಚಿಕ್ಕಂದಿನಿಂದಲೇ ಕಲಿಯಬೇಕು ಎಂಬುದು ಅವರ ಉದ್ದೇಶವಾಗಿತ್ತು.
ಆದರೆ ಮಗನಿಗೆ ತಾಯಿ ಸಾಲ ತೀರಿಸಿದ್ದಕ್ಕಿಂತ, ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯ ಕೈಯಲ್ಲಿದ್ದ ಬಂದೂಕು ಮುಟ್ಟುವ ಅವಕಾಶ ಸಿಕ್ಕಿದ್ದೇ ಅತಿದೊಡ್ಡ ಖುಷಿಯ ವಿಚಾರವಾಗಿತ್ತು ಎಂದು ಅರ್ಪಿತಾ ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಸಾಲ ಮುಕ್ತವಾದ ಬಳಿಕ ಅರ್ಪಿತಾ ರಾವ್ ಅವರ ಮುಂದಿನ ಹೆಜ್ಜೆ
ಜೀವನದ ಬಹುದೊಡ್ಡ ಆರ್ಥಿಕ ಹೊರೆಯಿಂದ ಮುಕ್ತರಾಗಿರುವ ಅರ್ಪಿತಾ , ಇದೀಗ ವೃತ್ತಿಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಸ್ವಂತವಾಗಿ ಕೋಚಿಂಗ್ ಮತ್ತು ಅಡ್ವೈಸರಿ ಪ್ರಾಕ್ಟೀಸ್ ಆರಂಭಿಸಿರುವ ಅವರು, ಇಂಪ್ಯಾಕ್ಟ್ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರಿಗಾಗಿ 6 ವಾರಗಳ ವಿಶೇಷ ಕಲಿಕಾ ಕಾರ್ಯಕ್ರಮವನ್ನ ರೂಪಿಸಿದ್ದಾರೆ.
ತಮ್ಮ ಈ ಹೊಸ ಹೆಜ್ಜೆಯ ಮೂಲಕ ಇತರ ವೃತ್ತಿಪರರಿಗೂ ಮಾರ್ಗದರ್ಶನ ನೀಡುವ ಗುರಿಯನ್ನ ಅವರು ಹೊಂದಿದ್ದಾರೆ. ಎಷ್ಟೇ ಕಷ್ಟ ಬಂದರೂ ಛಲ ಬಿಡದೆ ಸತತವಾಗಿ ಶ್ರಮಿಸಿದರೆ ಯಶಸ್ಸು ಖಂಡಿತ ಒಲಿಯುತ್ತದೆ ಎಂಬುದಕ್ಕೆ ಅರ್ಪಿತಾ ಅವರ ಈ ಯಶೋಗಾಥೆಯೇ ಒಂದೊಳ್ಳೆ ಉದಾಹರಣೆ.


Click it and Unblock the Notifications
