ಕಡು ಬಡತನ ಮೆಟ್ಟಿ ನಿಂತು 50ಕ್ಕೂ ಹೆಚ್ಚು ಬಡ ಮಹಿಳೆಯರ ಬಾಳಿಗೆ ದಾರಿದೀಪವಾದ ಬೆಂಗಳೂರಿನ ಆಟೋ ಚಾಲಕಿ
Bengaluru Woman Inspiring Story: ಈಗಿನ ಕಾಲದಲ್ಲಿ ಸಿರಿತನವಿದ್ದರೂ ಸಹ ಬಹುತೇಕ ಮಂದಿ ಬಡವರ ಸಹಾಯಕ್ಕೆ ನಿಲ್ಲುವುದು ಬಲು ಅಪರೂಪ. ಆದರೆ ಬೆಂಗಳೂರಿನಲ್ಲಿ ಹೆಣ್ಣುಮಗಳೊಬ್ಬಳು ತನ್ನಲ್ಲಿದ್ದ ಕಲೆಯನ್ನ ಹಂಚಿ 50ಕ್ಕೂ ಅಧಿಕ ಮಹಿಳೆಯರ ಬಾಳಿಗೆ ದಾರಿದೀಪವಾಗಿ ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಡತನವಿದ್ದರೂ ಬದುಕಿನ ಚಕ್ರವನ್ನು ಪಾಸಿಟಿವ್ ಆಗಿ ತಿರುಗಿಸಿ ತಾವಷ್ಟೇ ಅಲ್ಲದೆ ಹತ್ತಾರು ಹೆಣ್ಣುಮಕ್ಕಳ ಬಾಳಿಗೆ ದಾರಿದೀಪವಾದ ಅಪರೂಪದ ಕಥೆ ಇದು. ಕೇವಲ 12ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ಕಣ್ಣೀರು-ಕಷ್ಟಗಳನ್ನೇ ಹತ್ತಿರದಿಂದ ಕಂಡು ಬೆಳೆದ ಬೆಂಗಳೂರಿನ ಜಾನ್ಸಿ ಬಿ.ವಿ. ಎಂಬುವವರು ಇಂದು ಸಮಾಜದ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾವಲಂಬನೆಗೆ ಸಾಕ್ಷಿಯಾಗಿದ್ದಾರೆ.

ಜಾನ್ಸಿಯವರ ಪ್ರೇರಣಾದಾಯಕ ಪಯಣ
ತಾವೊಬ್ಬರೇ ಆಟೋ ಓಡಿಸಿ ಸೈ ಎನಿಸಿಕೊಳ್ಳದೇ, ಆರ್ಥಿಕವಾಗಿ ಕುಗ್ಗಿದ 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಆಟೋ ಡ್ರೈವಿಂಗ್ ತರಬೇತಿ ನೀಡಿ ಅವರ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಿದ ಜಾನ್ಸಿಯವರ ಪ್ರೇರಣಾದಾಯಕ ಪಯಣ ಇಲ್ಲಿದೆ ನೀಡಿ.
ಉಚಿತವಾಗಿ ಆಟೋ ಚಾಲನೆ
ತಾನು ಮಾತ್ರ ಬೆಳೆದರೆ ಸಾಲದು, ಸಮಾಜದ ಇತರ ಮಹಿಳೆಯರಿಗೂ ಆಸರೆಯಾಗಬೇಕು ಎಂದು ಭಾವಿಸಿದರೆ ಏನಾಗಬಹುದು ಎಂಬುದಕ್ಕೆ ಬೆಂಗಳೂರಿನ ಜಾನ್ಸಿ ಬಿ.ವಿ. ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕಡು ಬಡತನ ಮತ್ತು ಸವಾಲುಗಳನ್ನು ಮೆಟ್ಟಿ ನಿಂತು ಆಟೋ ಚಾಲಕಿಯಾದ ಅವರು ಇಂದು ಉಚಿತವಾಗಿ ಇತರ ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡಿ ಅವರ ಸ್ವಾವಲಂಬಿ ಜೀವನಕ್ಕೆ ಹಾದಿ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ.
ಜಾನ್ಸಿ ಜೀವನದ ಹಾದಿ
ಜಾನ್ಸಿ ಅವರ ಬಾಲ್ಯ ಅಷ್ಟೊಂದು ಸರಳವಾಗಿರಲಿಲ್ಲ. ಅವರಿಗೆ ಕೇವಲ 12 ವರ್ಷವಾಗಿದ್ದಾಗ ತಂದೆಯನ್ನ ಕಳೆದುಕೊಂಡರು. ಕುಟುಂಬ ನಿರ್ವಹಣೆಗಾಗಿ ಅವರ ತಾಯಿ ಮನೆಗೆಲಸ ಹಾಗೂ ಕಟ್ಟಡ ಕಾರ್ಮಿಕರಾಗಿ ದಿನವಿಡೀ ಕಷ್ಟಪಡುತ್ತಿದ್ದರು. ತಾಯಿಯ ಅಸಹಾಯಕತೆ ಮತ್ತು ಆರ್ಥಿಕ ಸಂಕಷ್ಟವನ್ನು ಕಣ್ಣಾರೆ ಕಂಡ ಜಾನ್ಸಿಗೆ ಸ್ವಾವಲಂಬಿಯಾಗಿ ಜೀವಿಸಬೇಕೆಂಬ ಛಲ ಹುಟ್ಟಿಕೊಂಡಿತು. ಕುಟುಂಬದ ಈ ಪರಿಸ್ಥಿತಿಯಿಂದಾಗಿ 10ನೇ ತರಗತಿಯ ನಂತರ ಶಿಕ್ಷಣ ಮುಂದುವರೆಸಲಾಗದೆ, 16ನೇ ವಯಸ್ಸಿನಲ್ಲಿಯೇ ಗಾರ್ಮೆಂಟ್ಸ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದರು.
ಆಟೋ ಚಾಲನೆಯಲ್ಲಿ ಹೊಸ ಜೀವನದ ಆರಂಭ
ಮದುವೆಯ ನಂತರ ಜಾನ್ಸಿ ಮತ್ತು ಅವರ ಪತಿ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದರು. ಈ ಸಮಯದಲ್ಲಿ ಜಾನ್ಸಿಯವರ ಪತಿಯೇ ಅವರಿಗೆ ಆಟೋ ಚಾಲನೆ ಕಲಿಯುವಂತೆ ಪ್ರೋತ್ಸಾಹಿಸಿದರು. ಆರಂಭದಲ್ಲಿ ಸ್ವಲ್ಪ ಭಯ ಮತ್ತು ಹಿಂಜರಿಕೆ ಇತ್ತಾದರೂ, ಪತಿಯ ಬೆಂಬಲದಿಂದ ಅವರು ಆಟೋ ಚಾಲನೆ ಕಲಿತು ಲೈಸೆನ್ಸ್ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಆಟೋ ಚಾಲಕಿಯಾಗಿ ಮೊದಲ ದಿನವೇ 700 ರೂಪಾಯಿ ದುಡಿದಾಗ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಪಾರ ಆತ್ಮವಿಶ್ವಾಸ ಮೂಡಿತು. ಗಾರ್ಮೆಂಟ್ಸ್ ಕೆಲಸಕ್ಕಿಂತ ಆಟೋ ಓಡಿಸುವುದು ಆರ್ಥಿಕ ಭದ್ರತೆ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುವ ಧೈರ್ಯ ತಂದಿತು.
2021ರ ವೇಳೆಗೆ ಜಾನ್ಸಿಯವರು ತಮ್ಮ ಸುತ್ತಮುತ್ತಲಿನ ಅನೇಕ ಬಡ ಹಾಗೂ ಆಸಕ್ತ ಮಹಿಳೆಯರಿಗೆ ಸಹಾಯ ಮಾಡಲು ನಿರ್ಧರಿಸಿದರು. ಆಟೋ ಕಲಿಯಲು ಡ್ರೈವಿಂಗ್ ಶಾಲೆಗಳಿಗೆ ಕಟ್ಟಲು ಫೀಸು ನೀಡಲು ಸಾಧ್ಯವಾಗದ, ಒಂಟಿ ತಾಯಂದಿರು ಹಾಗೂ ಬಡ ಕುಟುಂಬದ ಮಹಿಳೆಯರನ್ನು ಗುರುತಿಸಿ ತಾವೇ ತಮ್ಮ ಸ್ವಂತ ಆಟೋ ರಿಕ್ಷಾದಲ್ಲೇ ಉಚಿತವಾಗಿ ಚಾಲನೆ ತರಬೇತಿ ನೀಡಲು ಪ್ರಾರಂಭಿಸಿದರು.
ಚಾಲನಾ ಕೌಶಲ್ಯದ ಜೊತೆಗೆ ಸಂಚಾರ ನಿಯಮಗಳು, ಪ್ರಯಾಣಿಕರೊಂದಿಗೆ ಹೇಗೆ ವ್ಯವಹರಿಸಬೇಕು ಹಾಗೂ ರಸ್ತೆಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಅವರು ಕಲಿಸಿಕೊಡುತ್ತಿದ್ದಾರೆ. ಈವರೆಗೆ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನೆ ಕಲಿಸಿದ್ದು, ಅವರಲ್ಲಿ ಹಲವರು ಇಂದು ಸ್ವಂತವಾಗಿ ಆಟೋ ಓಡಿಸಿ ತಮ್ಮ ಕುಟುಂಬಕ್ಕೆ ಆಸರೆ ಆಗಿದ್ದಾರೆ.
ಪುರುಷರೇ ಹೆಚ್ಚಾಗಿರುವ ಆಟೋ ಡ್ರೈವಿಂಗ್ ಕ್ಷೇತ್ರದಲ್ಲಿ ಮಹಿಳೆಯರು ಹೆಜ್ಜೆ ಇಡುವುದು ಸುಲಭದ ಮಾತಲ್ಲ. ಆದರೆ ಜಾನ್ಸಿ ನೀಡಿದ ಪ್ರೇರಣೆ ಮತ್ತು ಆತ್ಮವಿಶ್ವಾಸದಿಂದಾಗಿ ಇಂದು ಅನೇಕ ಮಹಿಳೆಯರು ಕಷ್ಟದ ಬದುಕಿನಿಂದ ಹೊರಬಂದು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಜಾನ್ಸಿ ಅವರು, 'ನನ್ನಿಂದ ತರಬೇತಿ ಪಡೆದ ಮಹಿಳೆಯರು ಇಂದು ರಸ್ತೆಯಲ್ಲಿ ಆಟೋ ಓಡಿಸುತ್ತಾ, ತಮ್ಮ ಕಾಲುಗಳ ಮೇಲೆ ತಾವು ನಿಂತು ಸಂಪಾದಿಸುವುದನ್ನು ನೋಡಿದಾಗ ನನಗೆ ಹೆಮ್ಮೆ ಎನಿಸುತ್ತದೆ,' ಎಂದು ಜಾನ್ಸಿ ಸಂತಸ ಹಂಚಿಕೊಳ್ಳುತ್ತಾರೆ. ಬಡತನದಿಂದ ಸಂಕಷ್ಟಕ್ಕೆ ಸಿಲುಕಿ ಸಮಾಜಕ್ಕೆ ಮಾದರಿಯಾಗಿ ನಿಂತಿರುವ ಜಾನ್ಸಿ ಅವರ ಈ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ. ಇವರ ಈ ನಿಸ್ವಾರ್ಥ ಸೇವೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.


Click it and Unblock the Notifications
