Bengaluru Ward One: ನ. 7ರಿಂದ ಬೆಂಗಳೂರಿನಲ್ಲಿ 2ನೇ ಹಂತದ ಅಭಿಯಾನ: ಕೃಷ್ಣಬೈರೇಗೌಡ
ಬೆಂಗಳೂರು: ಬೆಂಗಳೂರು ನಗರದಲ್ಲಿ ನವೆಂಬರ್ 07 ರಿಂದ ಎರಡನೇ ಹಂತದ 'ವಾರ್ಡ್ ಒನ್' ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ 'ವಾರ್ಡ್ ಒನ್' ಅಭಿಯಾನವು ಮೊದಲ ಹಂತದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕಿದ್ದು, ನವೆಂಬರ್ 07 ರಿಂದ 50 ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಎರಡನೇ ಹಂತದ ಅಭಿಯಾನ ಆರಂಭಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಬಿಎ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ "ವಾರ್ಡ್ ಒನ್" ಅಭಿಯಾನದ ಮುಂದಿನ ಹಂತಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆತುರಪಟ್ಟು ಅಭಿಯಾನವನ್ನು ಮುಗಿಸುವುದಕ್ಕಿಂತ ಸಾರ್ವಜನಿಕರಿಗೆ ತಲುಪುವ ಕೆಲಸ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು" ಎಂದಿದ್ದಾರೆ.
ಕೆಲವೊಂದು ವಾರ್ಡ್ಗಳಲ್ಲಿ ವಿಸ್ತೃತವಾಗಿ ಪರಿಶೀಲನೆ ನಡೆಸಿ ಕೆಲಸ ಪೂರ್ಣಗೊಳಿಸಲು ಹೆಚ್ಚಿನ ಸಮಯ ತಗುಲುತ್ತಿದೆ. ಈ ಹಿನ್ನೆಲೆಯಲ್ಲಿ, ಕೇವಲ ಗುರಿ ತಲುಪುವ ಆತುರದಲ್ಲಿ ಅಭಿಯಾನದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಜಿಬಿಎ ನಾಗರಿಕರಿಗೆ ಸಮಗ್ರ ಹಾಗೂ ಸುಸ್ಥಿರ ಫಲಿತಾಂಶ ನೀಡುವ ಉದ್ದೇಶದಿಂದ ಈ ಪ್ರಚಾರ ಮತ್ತು ಆಂದೋಲನವನ್ನು ಡಿಸೆಂಬರ್ ಮಧ್ಯದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಸಂಖ್ಯೆಗಿಂತ ಕೆಲಸದ ಅಚ್ಚುಕಟ್ಟುತನ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದಿದ್ದಾರೆ.
ಮೊದಲ ಹಂತದಲ್ಲಿ 43 ವಾರ್ಡ್ಗಳಲ್ಲಿ ಕೆಲಸ
ವಾರ್ಡ್ ಒನ್ ಅಭಿಯಾನದ ಮೊದಲ ಹಂತದಲ್ಲಿ ಉತ್ತಮ ಕೆಲಸವಾಗಿದೆ. ಈ ಹಂತದಲ್ಲಿ 43 ವಾರ್ಡ್ಗಳನ್ನು ಆಯ್ಕೆ ಮಾಡಿ, ಆಯ್ದ ವಾರ್ಡ್ಗಳ ಮಿತಿಯಲ್ಲಿ 357.41 ಕಿಮೀ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 704 ರಸ್ತೆಗ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆ ಬದಿಯಲ್ಲಿ ಕಸ ಎಸೆಯಲಾಗುತ್ತಿದ್ದ 342 ಬ್ಲಾಕ್ ಸ್ಪಾಟ್ಗಳಿಂದ ಸುಮಾರು 426.6 ಟನ್ ಕಸವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. 820 ಸ್ಥಳಗಳಲ್ಲಿ 1141.2 ಟನ್ ತ್ಯಾಜ್ಯವನ್ನು (ಡೆಬ್ರಿಸ್) ತೆರವುಗೊಳಿಸಲಾಗಿದೆ. ಅಲ್ಲದೆ, 29.68 ಕಿಮೀ ಫುಟ್ಪಾತ್ ರಿಪೇರಿ ಮಾಡಲಾಗಿದ್ದು, 455.15 ಕಿಮೀ ಫುಟ್ಪಾತ್ ಒತ್ತುವರಿಯನ್ನೂ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಹಂತದ ಅಭಿಯಾನ ಬೆನ್ನಿಗೆ ಇದೀಗ ಎರಡನೇ ಹಂತದಲ್ಲಿ ಮತ್ತಷ್ಟು ವಾರ್ಡ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಹಂತದಲ್ಲಿ ನಿಗದಿಪಡಿಸಿದ ವಾರ್ಡ್ಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಬೇಕು. ವಾರ್ಡ್ ಮಟ್ಟದ ಈ ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಹಾಗೂ ವಿವಿಧ ನಾಗರಿಕ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕು ಎಂದಿದ್ದಾರೆ.
ಸ್ಥಳೀಯ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು ಕೆಲಸ ಮಾಡುವುದರಿಂದ ವಾರ್ಡ್ಗಳಲ್ಲಿರುವ ನೈಜ ನಾಗರಿಕ ಸಮಸ್ಯೆಗಳ ಬಗ್ಗೆ ಜಿಬಿಎಗೆ ಹೆಚ್ಚಿನ ತಿಳುವಳಿಕೆ ಸಿಗಲಿದ್ದು, ಜನರಿಗೆ ಹೆಚ್ಚು ಸಮಗ್ರವಾದ ಪರಿಹಾರ ಹಾಗೂ ಉತ್ತಮ ಫಲಿತಾಂಶ ನೀಡಲು ನೆರವಾಗುತ್ತದೆ. ಆದ್ದರಿಂದ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವಾಗ ಆಯಾ ಭಾಗದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅವರನ್ನು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಡಿಎ ಆಸ್ತಿ ಮಾಲೀಕರಿಗೆ ಕಠಿಣ ಎಚ್ಚರಿಕೆ
ಬಿಡಿಎ (BDA) ವ್ಯಾಪ್ತಿಯ ಖಾಲಿ ಸೈಟ್ಳಲ್ಲಿ ಮಾಲೀಕರು ಇಂದಿಗೂ ಕಸವನ್ನು ಕ್ಲೀನ್ ಮಾಡದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಂತಹ ಜಾಗಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸರ್ಕಾರ ಮಾಡುತ್ತಿರುವ ಗುಣಮಟ್ಟದ ಕೆಲಸಗಳು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಕಮ್ಯುನಿಟಿ ಔಟ್ರೀಚ್ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಈ ಕುರಿತು ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಸೂಚಿಸಿದ್ದಾರೆ.
ನಗರದ ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ಒತ್ತು
ರಸ್ತೆ ಹಾಗೂ ಮೂಲಸೌಕರ್ಯಗಳ ವಿಸ್ತರಣೆಯ ಬಗ್ಗೆಯೂ ಮಾತನಾಡಿದ ಅವರು, ಪ್ರಸ್ತುತ ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಮುಂದಿನ ಹಂತವಾಗಿ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದರೊಂದಿಗೆ ನಗರದ ಪ್ರಮುಖ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಲೇನ್ ಮಾರ್ಕಿಂಗ್ ಹಾಗೂ ರಿಫ್ಲೆಕ್ಟರ್ಗಳನ್ನು ಅಳವಡಿಸಿ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು.
ಮೊದಲ ಹಂತದಲ್ಲಿ ಸಮಾಜದ ಎಲ್ಲಾ ವರ್ಗಗಳಿಂದ ಬಂದಿರುವ ಉಪಯುಕ್ತ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಅವುಗಳನ್ನು ಎರಡನೇ ಹಂತದ ಅಭಿಯಾನದ ಯೋಜನೆಯಲ್ಲಿ ಅಳವಡಿಸಿಕೊಂಡು ಜಿಬಿಎ ಮುನ್ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದ್ದಾರೆ.
ಸಭೆಯ ಮುಖ್ಯಾಂಶಗಳು:
• ಎರಡನೇ ಹಂತದ ಆರಂಭ ಹಾಗೂ ಕಾಲಮಿತಿ ವಿಸ್ತರಣೆ: ಮೊದಲ ಹಂತದ ಯಶಸ್ಸಿನ ಬಳಿಕ 2ನೇ ಹಂತದ ಅಭಿಯಾನವು ನವೆಂಬರ್ 07 ರಿಂದ 50ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಆರಂಭವಾಗಲಿದೆ. ಆತುರಕ್ಕೆ ಬೀಳದೆ ಕೆಲಸದ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಅಭಿಯಾನವನ್ನು ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸಲಾಗಿದೆ.
• ಮೊದಲ ಹಂತದ ಸಾಧನೆ: ಆಯ್ಕೆಯಾಗಿದ್ದ 43 ವಾರ್ಡ್ಗಳಲ್ಲಿ 704 ರಸ್ತೆ ಗುಂಡಿ ಮುಚ್ಚಲಾಗಿದೆ, 342 ಬ್ಲಾಕ್ ಸ್ಪಾಟ್ಗಳಿಂದ 426.6 ಟನ್ ಕಸ ಹಾಗೂ 820 ಸ್ಥಳಗಳಿಂದ 1141.2 ಟನ್ ಡೆಬ್ರಿಸ್ (ತ್ಯಾಜ್ಯ) ತೆರವುಗೊಳಿಸಲಾಗಿದೆ. ಜೊತೆಗೆ 29.68 ಕಿಮೀ ಫುಟ್ಪಾತ್ ರಿಪೇರಿ ಹಾಗೂ 455.15 ಕಿಮೀ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಲಾಗಿದೆ.
• ಸಾರ್ವಜನಿಕರ ಭಾಗವಹಿಸುವಿಕೆ ಹಾಗೂ ಸಮನ್ವಯತೆ: ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯತೆ ಇರಬೇಕು. ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಮತ್ತು ನಾಗರಿಕ ಸಂಸ್ಥೆಗಳನ್ನು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ.
• ಶುಚಿತ್ವ ಹಾಗೂ ಮೂಲಸೌಕರ್ಯ ಅಭಿವೃದ್ಧಿ: ಬಿಡಿಎ (BDA) ಖಾಲಿ ಸೈಟ್ಗಳಲ್ಲಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು. ಕಸ ನಿಯಂತ್ರಣದ ಜೊತೆಗೆ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಹಾಗೂ ಜಂಕ್ಷನ್ಗಳಲ್ಲಿ ಲೇನ್ ಮಾರ್ಕಿಂಗ್ ಮತ್ತು ರಿಫ್ಲೆಕ್ಟರ್ ಅಳವಡಿಕೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ.


Click it and Unblock the Notifications
