Expressway: ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಯಾವಾಗ? ಏನೆಲ್ಲಾ ಪ್ರಯೋಜನಗಳಿವೆ?
Bengaluru-Vijayawada Expressway: ಕರ್ನಾಟಕ ರಾಜ್ಯದಲ್ಲಿ ಹಾದುಹೋಗುವ ಬಹುನಿರೀಕ್ಷಿತ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಹಾಗಾದ್ರೆ ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಏನೆಲ್ಲಾ ಪ್ರಯೋಜನಗಳಿವೆ ಎಂಬ ಪ್ರಶ್ನೆ ಬಹುತೇಕ ಮಂದಿಯಲ್ಲಿ ಹುಟ್ಟಿರುತ್ತವೆ. ಇವುಗಳಿಗೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಆಂಧ್ರಪ್ರದೇಶದ ಪ್ರಮುಖ ವಾಣಿಜ್ಯ ನಗರಿ ವಿಜಯವಾಡ ನಡುವೆ ಸಂಚಾರವನ್ನು ಇನ್ನಷ್ಟು ವೇಗ ಹಾಗೂ ಸುಗಮಗೊಳಿಸಲು 6-ಲೇನ್ 'ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ' ಕಾಮಗಾರಿ ವೇಗ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಪ್ರತಿಷ್ಠಿತ 'ಭಾರತಮಾಲಾ ಪರಿಯೋಜನಾ ಹಂತ-2'ರ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಹೆದ್ದಾರಿ ಯೋಜನೆಯು ಎರಡೂ ರಾಜ್ಯಗಳ ನಡುವಿನ ರಸ್ತೆ ಸಂಪರ್ಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ.

ಪ್ರಯಾಣದ ಸಮಯ ಇಳಿಕೆ
ಪ್ರಸ್ತುತ ಬೆಂಗಳೂರು ಮತ್ತು ವಿಜಯವಾಡ ನಡುವೆ ಪ್ರಯಾಣಿಸಲು ಸುಮಾರು 11 ರಿಂದ 12 ಗಂಟೆಗಳ ಸುದೀರ್ಘ ಸಮಯ ಬೇಕಾಗುತ್ತದೆ. ಆದರೆ ಈ ಹೊಸ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ 6 ರಿಂದ 7 ಗಂಟೆಗಳಿಗೆ ಇಳಿಕೆ ಆಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂದಾಜಿಸಿದ್ದಾರೆ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗಷ್ಟೇ ಅಲ್ಲದೆ, ಸರಕು ಸಾಗಣೆ ವಾಹನಗಳಿಗೂ ಹೆಚ್ಚಿನ ಅನುಕೂಲ ಆದಂತಾಗಲಿದೆ.
ಯೋಜನೆಯ ವೆಚ್ಚ ಮತ್ತು ಮಾರ್ಗದ ವಿವರ
* ಈ ಬೃಹತ್ ಯೋಜನೆಗೆ ಸುಮಾರು ₹19,200ರಿಂದ ₹19,320 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
* ಇದು ಸುಮಾರು 342 ರಿಂದ 343 ಕಿಲೋ ಮೀಟರ್ ಉದ್ದವಿದ್ದು, ಕರ್ನಾಟಕ-ಆಂಧ್ರಗಡಿಯ ಕೊಡಿಕೊಂಡದಿಂದ ಅಡ್ಡಂಕಿ ಬಳಿಯ ಮುಪ್ಪಾವರವರೆಗೆ ವಿಸ್ತರಿಸಿದೆ. ಹಳೆಯ ರಸ್ತೆಗಳ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಈ ಸಮಗ್ರ ಯೋಜನೆಯು ಒಟ್ಟು 518 ರಿಂದ 624 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಲಿದೆ.
ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿದೆ?
ಬೆಂಗಳೂರು-ವಿಯಯವಾಡ ಎಕ್ಸ್‌ಪ್ರೆಸ್ ವೇ ಆಂಧ್ರಪ್ರದೇಶದ ಗುಂಟೂರು, ಪ್ರಕಾಶಂ, ಕರ್ನೂಲು ಮತ್ತು ಕಡಪ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಜನನಿಬಿಡ ನಗರಗಳನ್ನು ತಪ್ಪಿಸಿ ಈ ಅಲೈನ್‌ಮೆಂಟ್ ವಿನ್ಯಾಸಗೊಳಿಸಿರುವುದರಿಂದ ಹಳೆಯ ಮಾರ್ಗಗಳ ಮೇಲಿನ ಸಂಚಾರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.
ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ಕೃಷಿ ಉತ್ಪನ್ನಗಳು, ಖನಿಜಗಳು ಹಾಗೂ ಕೈಗಾರಿಕಾ ಸರಕುಗಳನ್ನು ಬೆಂಗಳೂರು, ವಿಜಯವಾಡ ಮಾರುಕಟ್ಟೆಗಳಿಗೆ ಮತ್ತು ಪೂರ್ವ ಕರಾವಳಿಯ ಬಂದರುಗಳಿಗೆ ವೇಗವಾಗಿ ಸಾಗಿಸಲು ಭಾರಿ ನೆರವಾಗಲಿದೆ. ಅಲ್ಲದೆ, ಈ ಭಾಗಗಳ ಭೂಮಿಗೆ ಬಂಗಾರ ಬೆಲೆ ಬರಲಿದ್ದು, ಮಾಲೀಕರು ಕೋಟ್ಯಾಧಿಪತಿಗಳಾಗುವುದರಲ್ಲಿ ಎರಡು ಮಾತಿಲ್ಲ.
ಉದ್ಘಾಟನೆ ಯಾವಾಗ?
342 ಕಿ.ಮೀ ಉದ್ದದ ಬೆಂಗಳೂರು-ವಿಜಯವಾಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು 2027ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈ ಬೃಹತ್ ಯೋಜನೆ ಕಾರ್ಯಾರಂಭಗೊಂಡ ಬಳಿಕ ಎರಡೂ ನಗರಗಳ ನಡುವಿನ ಸಂಚಾರದ ದೂರದಲ್ಲಿ ಬರೋಬ್ಬರಿ 110 ಕಿ.ಮೀ ಕಡಿಮೆಯಾಗಲಿದ್ದು, ಪ್ರಯಾಣದ ಅವಧಿ ಕಡಿತಗೊಳ್ಳಲಿದೆ.
ಯಾವೆಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನ ಸಂಪರ್ಕಿಸಲಿದೆ?
ಈ ಆರು-ಲೇನ್‌ನ ಎಕ್ಸ್‌ಪ್ರೆಸ್‌ವೇಯು ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ ಭಾಗವಾಗಿದೆ. ಆಂಧ್ರಪ್ರದೇಶದ ಕೋಡಿಕೊಂಡ ಚೆಕ್‌ಪೋಸ್ಟ್ ಬಳಿಯ ಕೊಡೂರು ಗ್ರಾಮದಿಂದ ಆರಂಭವಾಗುವ ಈ ಗ್ರೀನ್‌ಫೀಲ್ಡ್ ಮಾರ್ಗವು, ಅಡ್ಡಂಕಿ ಬಳಿಯ ಮುಪ್ಪಾವರಂನಲ್ಲಿ ಮುಕ್ತಾಯಗೊಳ್ಳಲಿದೆ. ಇದು ಬೆಂಗಳೂರು-ಹೈದರಾಬಾದ್ ಸಂಪರ್ಕಿಸುವ NH-44 ಮತ್ತು ಚೆನ್ನೈ-ವಿಜಯವಾಡ ಸಂಪರ್ಕಿಸುವ NH-16 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ನೇರವಾಗಿ ಸಂಪರ್ಕಿಸಲಿದೆ.
6 ಪ್ಯಾಕೇಜ್‌ಗಳಾಗಿ ವಿಂಗಡಣೆ?
ಈ ಎಕ್ಸ್‌ಪ್ರೆಸ್‌ವೇಯಿಂದ ಕಡಪ ಜಿಲ್ಲೆಗೆ ಅತ್ಯಂತ ಹೆಚ್ಚಿನ ಅನುಕೂಲವಾಗಲಿದೆ. ಕಡಪ ಜಿಲ್ಲೆಯೊಂದರಲ್ಲೇ ಸುಮಾರು 123.5 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಹಾದುಹೋಗಲಿದ್ದು, ಪುಲಿವೆಂದಲ, ವೇಮುಲ, ವೇಂಪಲ್ಲಿ, ಯರ್ರಗುಂಟ್ಲ, ಕಮಲಾಪುರಂ, ಮೈದುಲಕೂರು ಮತ್ತು ಪೊರುಮಾಮಿಲ್ಲ ಸೇರಿದಂತೆ ಹಲವು ಪ್ರದೇಶಗಳನ್ನು ಒಳಗೊಳ್ಳಲಿದೆ. ಈ ಜಿಲ್ಲೆಯಲ್ಲಿನ ರಸ್ತೆ ನಿರ್ಮಾಣಕ್ಕೆ ಒಟ್ಟು 5,377.72 ಕೋಟಿ ರೂಪಾಯಿ ವೆಚ್ಚದ 6 ಪ್ಯಾಕೇಜ್‌ಗಳನ್ನು ಹಂಚಿಕೆ ಮಾಡಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಈ ಸಮಗ್ರ ಯೋಜನೆಯಲ್ಲಿ 343.24 ಕಿ.ಮೀ ಸಂಪೂರ್ಣ ನೂತನ ರಸ್ತೆಯಾಗಿದ್ದರೆ, ಸುಮಾರು 190 ಕಿ.ಮೀ ಹಾಲಿ ಇರುವ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯಾಗಿದೆ. ಇದರಲ್ಲಿ ಬೆಂಗಳೂರಿನಿಂದ ಕೋಡಿಕೊಂಡವರೆಗೆ 90 ಕಿ.ಮೀ ಮತ್ತು ಅಡ್ಡಂಕಿಯಿಂದ ವಿಜಯವಾಡವರೆಗೆ 100 ಕಿ.ಮೀ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ. 2027ರಲ್ಲಿ ಈ ಯೋಜನೆ ಪೂರ್ಣಗೊಂಡ ನಂತರ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರ ವೇಗ ಪಡೆದುಕೊಳ್ಳಲಿದ್ದು, ದಕ್ಷಿಣ ಭಾರತದ ಕೈಗಾರಿಕಾ ಸಂಪರ್ಕಕ್ಕೆ ಹೊಸ ಶಕ್ತಿ ಸಿಕ್ಕಂತಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications
