Bengaluru Vehicles: ಬೆಂಗಳೂರಲ್ಲಿ ಅನಾಥ ವಾಹನಗಳಿಗೆ ನೋಟಿಸ್ ಅಂಟಿಸದಿರುವ ಬಗ್ಗೆ ಪರಿಶೀಲನೆ, ಅಧಿಕಾರಿಗಳ ಖಡಕ್ ಸೂಚನೆ
ಬೆಂಗಳೂರಲ್ಲಿ ಅನಾಥ ವಾಹನಗಳಿಗೆ ನೋಟಿಸ್ ಅಂಟಿಸದಿರುವ ಬಗ್ಗೆ ಪರಿಶೀಲನೆ ನಡೆದಿದೆ. ಇದೇ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕಳ್ಳಾಟ ಅಥವಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಯೇ ಎನ್ನುವ ಅನುಮಾನವೂ ಸಹ ಶುರುವಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ. ಅವರು ಸೆಪ್ಟೆಂಬರ್ 7ರ ತಡ ರಾತ್ರಿ ಶಿವಾಜಿನಗರ ವಿಭಾಗದ ವ್ಯಾಪ್ತಿಯಲ್ಲಿನ ಹಲಸೂರು ಕೆರೆ ಬಳಿ ಸೆಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಬೀದಿ ದೀಪಗಳ ಕಾರ್ಯನಿರ್ವಹಣೆ ಸೇರಿದಂತೆ ನಗರದ ಮೂಲಸೌಕರ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿದ್ದಾರೆ.
ಬೀದಿ ದೀಪಗಳ ಕಾರ್ಯನಿರ್ವಹಣೆ, ಡಾಂಬರೀಕರಣ ಕಾಮಗಾರಿಯ ಗುಣಮಟ್ಟ, ಪಾದಚಾರಿ ಮಾರ್ಗಗಳ ಸ್ಥಿತಿ, ಅನಾಥ ವಾಹನಗಳು, ರಸ್ತೆ ಬದಿಯ ತ್ಯಾಜ್ಯ ಹಾಗೂ ಹಸಿರೀಕರಣ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸ್ಥಳದಲ್ಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Bengaluru Vehicles: ಬೀದಿ ದೀಪಗಳ ಕಾರ್ಯನಿರ್ವಹಣೆ ಪರಿಶೀಲನೆ
ಇನ್ನು ಬೆಂಗಳೂರಿ ಶಿವಾಜಿನಗರ ವಿಭಾಗದ ಸೇಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಹಲಸೂರು ಕೆರೆ ಸಮೀಪದ ಪ್ರದೇಶಗಳಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಮಾತನಾಡಿದ ಆಯುಕ್ತ ಜಗದೀಶ್ ಜಿ. ಅವರು, ಕಾರ್ಯನಿರ್ವಹಿಸದಿರುವ ಅಥವಾ ದುರಸ್ಥಿಯಲ್ಲಿರುವ ಬೀದಿ ದೀಪಗಳನ್ನು ಕೂಡಲೇ ಗುರುತಿಸಿ ದುರಸ್ಥಿಪಡಿಸುವಂತೆ ಸಂಬಂಧಪಟ್ಟ ಕಟ್ಟುನಿಟ್ಟಿನ ಸೂಚನೆ ನೀಡಿ ಜೊತೆಗೆ ಬೀದಿ ದೀಪಗಳ ಬೆಳಕು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುವಂತೆ, ಬೀದಿ ದೀಪಗಳ ವ್ಯಾಪ್ತಿಯಲ್ಲಿ ಅಡ್ಡಿಯಾಗಿರುವ ಹೆಚ್ಚುವರಿ ಮರದ ಕೊಂಬೆಗಳನ್ನು ಕೂಡಲೇ ಕತ್ತರಿಸಿ ತೆರವುಗೊಳಿಸುವಂತೆ ಸಾರ್ವಜನಿಕರ ಸುರಕ್ಷತೆ ಹಾಗೂ ರಾತ್ರಿ ವೇಳೆ ಸುಗಮ ಸಂಚಾರಕ್ಕೆ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
Bengaluru Vehicles: ಡಾಂಬರೀಕರಣ ಕಾಮಗಾರಿಯ ಗುಣಮಟ್ಟಕ್ಕೆ ಒತ್ತು
ಬೆಂಗಳೂರಿನ ಸೇಂಟ್ ಜಾನ್ಸ್ ಕ್ರಾಸ್ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು ರಸ್ತೆಯ ಡಾಂಬರೀಕರಣದ ಗುಣಮಟ್ಟ, ಡಾಂಬರಿನ ದಪ್ಪ ಹಾಗೂ ರಸ್ತೆ ಮತ್ತು ಪಾದಚಾರಿ ಮಾರ್ಗದ ನಡುವಿನ ಎತ್ತರದ ವ್ಯತ್ಯಾಸವನ್ನು ಪರಿಶೀಲಿಸಿದರು. ಕಾಮಗಾರಿಯಲ್ಲಿ ನಿಗದಿತ ಗುಣಮಟ್ಟ ಹಾಗೂ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಸೂಚಿಸಿದರು.
Bengaluru Vehicles: ಅನಾಥ ವಾಹನಗಳಿಗೆ ನೋಟಿಸ್ ಅಂಟಿಸದಿರುವ ಬಗ್ಗೆ ಪರಿಶೀಲನೆ
ಪರಿಶೀಲನೆ ವೇಳೆ ರಸ್ತೆ ಬದಿಯಲ್ಲಿ ನಿಲುಗಡೆಗೊಂಡಿರುವ ಅನಾಥ ಹಾಗೂ ದೂಳಿನಿಂದ ತುಂಬಿದ ತೆರವುಗೊಳ್ಳದ ವಾಹನವನ್ನು ಕಂಡು ಪ್ರಸ್ತುತ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಯಲ್ಲಿ ಟೋಯಿಂಗ್ ಆಗದೆ ಬಾಕಿ ಇರುವ ವಾಹನಗಳನ್ನು ಗುರುತಿಸಿ ನಿಯಮಾನುಸಾರ ನೋಟಿಸ್ ಅಂಟಿಸಿ, ನಿಗದಿತ ಅವಧಿಯ ನಂತರ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Bengaluru Vehicles: ಪಾದಚಾರಿ ಮಾರ್ಗದ ಒತ್ತುವರಿ ಕುರಿತು ಕಟ್ಟುನಿಟ್ಟಿನ ಸೂಚನೆ
ಪರಿಶೀಲನೆ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದ ಮೊಬೈಲ್ ಅಂಗಡಿ/ತಾತ್ಕಾಲಿಕ ವ್ಯಾಪಾರ ನಡೆಸುತ್ತಿರುವುದನ್ನು ಗಮನಿಸಿದ ಆಯುಕ್ತರು ಸ್ಥಳದಲ್ಲೇ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ತಕ್ಷಣವೇ ಅಂಗಡಿ ತೆರವಿಗೆ ಕ್ರಮವಹಿಸುವಂತೆ ಅಧಿಕಾರಿಗೆ ಸೂಚನೆ ನೀಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ನಡಿಗೆಗೆ ಮುಕ್ತವಾಗಿರಬೇಕು ಎಂದು ತಿಳಿಸಿದರು.
ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯ ಹಾಗೂ ಅನಗತ್ಯ ವಸ್ತುಗಳ ತೆರವಿಗೆ ಸೂಚನೆ
ಪಾದಚಾರಿ ಮಾರ್ಗಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯ, ಬಳಕೆಯಲ್ಲಿಲ್ಲದ ಡಸ್ಟ್ ಬಿನ್ ಸ್ಟ್ಯಾಂಡ್‌ಗಳು, ಅನಗತ್ಯವಾಗಿ ಬಿದ್ದಿರುವ ಓ.ಎಫ್.ಸಿ ಕೇಬಲ್‌ಗಳು, ಮರದ ಕೊಂಬೆಗಳು ಹಾಗೂ ಇತರೆ ನಿರುಪಯುಕ್ತ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ಸಂಚರಿಸುವಂತಾಗಲು ಪಾದಚಾರಿ ಮಾರ್ಗಗಳನ್ನು ಸ್ವಚ್ಛ, ಅಚ್ಚುಕಟ್ಟಾಗಿ ಹಾಗೂ ಸಂಪೂರ್ಣವಾಗಿ ಅಡೆತಡೆಮುಕ್ತವಾಗಿಡುವಂತೆ ನಿರ್ದೇಶನ ನೀಡಿದರು.
ಪಾದಚಾರಿ ಮಾರ್ಗದ ಸಸಿಗಳ ಬೆಳವಣಿಗೆಗೆ ಹಾಗೂ ನಿರ್ವಹಣೆಗೆ ಸೂಚನೆ
ಪಾದಚಾರಿ ಮಾರ್ಗದ ಬದಿಗಳಲ್ಲಿ ನೆಡಲಾಗಿರುವ ಸಸಿಗಳ ಸಮರ್ಪಕ ಬೆಳವಣಿಗೆಗೆ ನಿಯಮಿತವಾಗಿ ನೀರುಣಿಸುವುದು ಹಾಗೂ ಅಗತ್ಯ ಪೋಷಕಾಂಶ/ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಬೆಳೆದಿರುವ ಹೆಚ್ಚುವರಿ ಮರದ ಕೊಂಬೆಗಳನ್ನು ವೈಜ್ಞಾನಿಕವಾಗಿ ಕತ್ತರಿಸಿ ತೆರವುಗೊಳಿಸುವಂತೆ ಸೂಚಿಸಿ ಪಾದಚಾರಿ ಮಾರ್ಗಗಳು ಯಾವುದೇ ಅಡಚಣೆಯಿಲ್ಲದೆ ಸಾರ್ವಜನಿಕರು ಸುಗಮವಾಗಿ ಸಂಚರಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತರಾದ ವೆಂಕಟಾಚಲಪತಿ, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಲವರು ಇದ್ದರು.


Click it and Unblock the Notifications
